More

    ಮಳೆ ಬಿಟ್ಟರೂ ಬಿಡದ ಪ್ರವಾಹ

    ಕಾರವಾರ: ಜಿಲ್ಲೆಯಲ್ಲಿ ಗುರುವಾರ ಮಳೆ ಇಳಿಮುಖವಾಗಿದೆ. ಆದರೆ, ಬುಧವಾರ ಘಟ್ಟದ ಮೇಲೆ ಸುರಿದ ಭಾರಿ ಮಳೆಯ ಪರಿಣಾಮ ಇಂದೂ ಸಹ ಅಂಕೋಲಾ ಹಾಗೂ ಹೊನ್ನಾವರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿಯಿತು.

    ಜಿಲ್ಲೆಯ ಅಂಕೋಲಾದ 8, ಹೊನ್ನಾವರದ 5 ಸೇರಿ ಒಟ್ಟು 13 ಗ್ರಾಮಗಳು ಪ್ರವಾಹದಿಂದ ಭಾದಿತವಾಗಿವೆ. ಅಂಕೋಲಾದಲ್ಲಿ 6, ಹೊನ್ನಾವರದಲ್ಲಿ 3 ಸೇರಿ 9 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಒಟ್ಟು 368 ಜನರು ಆಶ್ರಯ ಪಡೆದಿದ್ದಾರೆ.

    73 ಮನೆಗಳಿಗೆ ಹಾನಿ: ಮಳೆಯಿಂದ ಅಂಕೋಲಾದ 2, ಸಿದ್ದಾಪುರದ 1 ಸೇರಿ 3 ಮನೆಗಳಿಗೆ ತೀವ್ರ ಹಾನಿಯಾಗಿದೆ. ಅಂಕೋಲಾದ 8, ಕುಮಟಾದ 2, ಹೊನ್ನಾವರದ 5, ಶಿರಸಿಯ 17, ಸಿದ್ದಾಪುರದ 3, ಯಲ್ಲಾಪುರ ಹಾಗೂ ಮುಂಡಗೋಡಿನ ತಲಾ 6, ಹಳಿಯಾಳದ 13, ಜೊಯಿಡಾದ 10 ಸೇರಿ ಒಟ್ಟು 70 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆಯಿಂದ ಭಟ್ಕ, ಶಿರಸಿ, ಯಲ್ಲಾಪುರದ ತಲಾ 2 ಹಾಗೂ ಸಿದ್ದಾಪುರದ 3 ರಸ್ತೆಗಳು ಬಂದಾಗಿವೆ.

    ಮಳೆ ಬಿಟ್ಟರೂ ಬಿಡದ ಪ್ರವಾಹ: ಗಂಗಾವಳಿ ನದಿ ಉಕ್ಕಿ ಮೇಲಿನ ಮಂಜಗುಣಿ, ಶಿರೂರು, ಜೂಗ, ಮೇಲಿನ ಬಿಳಿಹೊಯ್ಗಿ, ಮೇಲಿನ ಹೊನ್ನೆಬೈಲ್, ಮೇಲಿನ ಬಾಳಿಗದ್ದೆ, ಮೇಲಿನ ಕುದ್ರಿಗೆ ಭಾಗದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ಒಟ್ಟು 252 ಸಂತ್ರಸ್ತರು ಆಶ್ರಯ ಪಡೆದರು.

    ಸುಂಕಸಾಳ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತುಂಬಿದ್ದ ನೀರು ಇಳಿದಿದ್ದು, ಗುರುವಾರ ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ವಾಹನ ಸಂಚಾರ ಪ್ರಾರಂಭವಾಗಿದೆ. ಶಾಸಕಿ ರೂಪಾಲಿ ನಾಯ್ಕ ಗುರುವಾರ ಅಂಕೋಲಾದ ನೆರೆ ಪೀಡಿತ ಪ್ರದೇಶಗಳಿಗೆ ಹಾಗೂ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಸಂತ್ರಸ್ತರ ಜತೆ ಮಾತನಾಡಿದರು. ತಹಸೀಲ್ದಾರ್ ಉದಯ ಕುಂಬಾರ ಇದ್ದರು.

    ಸಿದ್ದಾಪುರದಲ್ಲಿ ದಾಖಲೆ ಮಳೆ : ಗುರುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 43.6, ಭಟ್ಕಳದಲ್ಲಿ 12, ಹಳಿಯಾಳದಲ್ಲಿ 69.2, ಹೊನ್ನಾವರ 57.7, ಕಾರವಾರ 52.9, ಕುಮಟಾದಲ್ಲಿ 34.8, ಮುಂಡಗೋಡಿನಲ್ಲಿ 72.2, ಸಿದ್ದಾಪುರದಲ್ಲಿ 203.2, ಶಿರಸಿಯಲ್ಲಿ 135, ಜೊಯಿಡಾದಲ್ಲಿ 114.4, ಯಲ್ಲಾಪುರದಲ್ಲಿ 177.6 ಮಿಮೀ ಮಳೆಯಾಗಿದೆ.

    ಒಂದೇ ದಿನ 2 ಮೀಟರ್ ತುಂಬಿದ ಸೂಪಾ: ಕದ್ರಾ ಅಣೆಕಟ್ಟೆಯ 6 ಗೇಟ್​ಗಳು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ತೆರೆದೇ ಇದೆ. ಒಟ್ಟಾರೆ 33 ಸಾವಿರ ಕ್ಯೂಸೆಕ್​ನಷ್ಟು ನೀರು ಹೊರಬಿಡಲಾಗುತ್ತಿದೆ. 44141 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗರಿಷ್ಠ 3450 ಮೀಟರ್ ಸಂಗ್ರಹಣಾ ಸಾಮರ್ಥ್ಯದ ಕದ್ರಾ ಜಲಾಶಯದಲ್ಲಿ ಸದ್ಯ 32.85 ಮೀಟರ್ ನೀರು ತುಂಬಿದೆ. 75.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಇರುವ ಕೊಡಸಳ್ಳಿ ಜಲಾಶಯದಲ್ಲಿ 73.10 ಮೀಟರ್ ನೀರು ಸಂಗ್ರಹವಾಗಿದ್ದು, 43675 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗೇಟ್ ತೆರೆದು 30428 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

    564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಸೂಪಾ ಜಲಾಶಯಕ್ಕೆ 62565 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗುರುವಾರ ಬೆಳಗಿನವರೆಗೆ 538.10 ಮೀಟರ್ ನೀರು ಭರ್ತಿಯಾಗಿದೆ. ಒಂದೇ ದಿನದಲ್ಲಿ 2.2 ಮೀಟರ್ ನೀರು ತುಂಬಿದಂತಾಗಿದೆ.

    ಶವ ಪತ್ತೆ: ಗುಳ್ಳಾಪುರ ಶೇವ್ಕಾರ್ ಸಮೀಪ ಬುಧವಾರ ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಶವ ಗುರುವಾರ ಪತ್ತೆಯಾಗಿದೆ. ಹೊನ್ನಾವರ ಕಡ್ನೀರು ಕಾರಗದ್ದೆಯ ಸಂತೋಷ ಹನುಮಂತ ನಾಯ್ಕ (30)ಮೃತರು. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೃತರ ಶವ ತೆಗೆಯಲಾಗಿದೆ.

    ಕಂದಾಯ ಸಚಿವರ ಭೇಟಿ: ಕಂದಾಯ ಸಚಿವ ಆರ್.ಅಶೋಕ ಅವರು ಆ.7 ರಂದು ಮಧ್ಯಾಹ್ನ 1.30 ಕ್ಕೆ ಭಟ್ಕಳಕ್ಕೆ ಆಗಮಿಸುವರು. 3 ಗಂಟೆಗೆ ಹೊನ್ನಾವರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವರು. 4 ಗಂಟೆಗೆ ಪಟ್ಟಣ ಪಂಚಾಯಿತಿಯಲ್ಲಿ ಸಭೆ ನಡೆಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಹ ಅವರ ಜತೆ ಇರುವರು.

    ಸುರಂಗ ಕುಸಿತ: ಕುಮಟಾ ತಾಲೂಕಿನ ಪ್ರವಾಸಿ ತಾಣ ಯಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಬುಡದಲ್ಲಿದ್ದ ನಾಲ್ಕೈದು ಅಂಗಡಿಗಳು ಮುಚ್ಚಿ ಹೋಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರವಾರ-ಗೋವಾ ನಡುವೆ ಪೆರ್ನೆಂ ಸಮೀಪ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಂಗ ಕುಸಿದಿದೆ. ಈ ಮಾರ್ಗದ ಎಲ್ಲ ರೈಲುಗಳನ್ನು ಬಂದ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts