More

    ಮನೆ ಕಟ್ಟಲು ‘ನಿವೇಶನ’ ಸಮಸ್ಯೆ!

    ಬೆಳಗಾವಿ: ಕೇಂದ್ರ, ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಗೊಂಡಿರುವ ಅರ್ಹ ಫಲಾನುಭವಿಗಳಿಗೆ ‘ನಿವೇಶನ’ ಸೌಲಭ್ಯ ಕಲ್ಪಿಸಿಕೊಡುವುದೇ ದೊಡ್ಡ ಸಮಸ್ಯೆಯಾಗಿದೆ. ನಿವೇಶನಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಿರುವುದು ಸಮಸ್ಯೆ ಇನದನಷ್ಟು ಹೆಚ್ಚುತ್ತಲಿದೆ.

    ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನು ವಿವಿಧ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವುದು, ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ಹಾಗೂ ಕಂದಾಯ, ಅರಣ್ಯ ಸೇರಿ ವಿವಿಧ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ ಜನರಿಗೆ ಸೌಲಭ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಸಮಸ್ಯೆಗೆ ಸಿಲುಕುವಂತಾಗಿದೆ.

    ಲಕ್ಷಾಂತರ ಮನೆಗಳ ಹಂಚಿಕೆ: 2018ರಿಂದ 2021ನೇ ಸಾಲಿನಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ರಾಜ್ಯದಲ್ಲಿ ಬಸವ ವಸತಿ ಯೋಜನೆ, ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ), ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆ ಅಡಿಯಲ್ಲಿ ಪಾಲಿಕೆ, ಪುರಸಭೆ, ನಗರಸಭೆ, ಪಪಂ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ 2.5 ಲಕ್ಷಕ್ಕೂ ಅಧಿಕ ಮನೆಗಳು ಹಂಚಿಕೆಯಾಗಿವೆ. ಇದರಲ್ಲಿ ಸ್ಥಳೀಯ ಮಟ್ಟದಲ್ಲಿ ನಿವೇಶನ ಲಭ್ಯತೆ ಆಧಾರದ ಮೇಲೆ ಸುಮಾರು 25 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಆಸ್ತಿ ಅಲಭ್ಯ ಹಾಗೂ ಒತ್ತುವರಿಯಾಗಿರುವ ಕಾರಣ ಅರ್ಹರಿಗೆ ನಿಗದಿತ ಸಮಯದಲ್ಲಿ ನಿವೇಶನ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

    ಅಧಿಕಾರಿಗಳ ಅಸಹಾಯಕತೆ: ಕಂದಾಯ ಇಲಾಖೆಯ ಗಾಯರಾಣ, ರುದ್ರಭೂಮಿ, ಸಾರ್ವಜನಿಕ ರಸ್ತೆ, ಆರ್‌ಡಿಪಿಆರ್ ಇಲಾಖೆಯು ಮೀಸಲಿಟ್ಟ ಆಸ್ತಿ, ಉದ್ಯಾನಗಳು ಕೆಲವು ಕಡೆ ಒತ್ತುವರಿಯಾಗಿದೆ. ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ ಸುಮಾರು 5 ಸಾವಿರಕ್ಕೂ ಅಧಿಕ ನಿವೇಶನ ರಹಿತರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ನಿವೇಶನ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ವಸತಿ ವಿಭಾಗದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಸರ್ಕಾರ ನಿವೇಶನ ಮಂಜೂರು ಮಾಡಿದೆ. ಜಿಪಂನಿಂದ ಮತ್ತೆ ನಿವೇಶನಕ್ಕಾಗಿ ಪ್ರಸ್ತಾವನೆ ಬಂದರೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅನುಮತಿ ನೀಡಲಾಗುವುದು.
    | ಎಂ.ಜಿ. ಹಿರೇಮಠ. ಜಿಲ್ಲಾಧಿಕಾರಿ

    ವಸತಿ ಯೋಜನೆಯಡಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳ ಪೈಕಿ ಸದ್ಯಕ್ಕೆ ಸ್ವಂತ ನಿವೇಶನ ಹೊಂದಿರುವವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕೆಲ ಫಲಾನುಭವಿಗಳು ಸ್ವಂತ ಭೂಮಿ ಹೊಂದಿರದ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಂದಾಯ ಜಮೀನನ್ನು ವಸತಿಗಾಗಿ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    | ದರ್ಶನ ಎಚ್.ವಿ. ಸಿಇಒ, ಜಿಪಂ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts