More

    ಮನೆಗಳಲ್ಲಿ ಪ್ರಾರ್ಥನೆ ಮಾಡಿಸುವಲ್ಲಿ ಸಫಲ

    ಭಟ್ಕಳ: ಪಟ್ಟಣದಲ್ಲಿ ಕರೊನಾ ವೈರಸ್ ಅನ್ನು ಹತೋಟಿಗೆ ತರಲು ತಾಲೂಕಾಡಳಿತ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಶುಕ್ರವಾರದ ಪ್ರಾರ್ಥನೆಯನ್ನು ಮನೆಗಳಲ್ಲಿ ನಡೆಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಿದೆ.

    ರಾಜ್ಯದಲ್ಲಿ ಭಟ್ಕಳದಂತಹ ಚಿಕ್ಕ ಪಟ್ಟಣದಲ್ಲಿ 8 ಪ್ರಕರಣಗಳು ಪತ್ತೆಯಾಗುವ ಮೂಲಕ ಹಾಟ್​ಸ್ಪಾಟ್ ಆಗಿ ಗುರುತಿಸಲ್ಪಟ್ಟಿತ್ತು. ಇದರಿಂದ ಜಿಲ್ಲಾಡಳಿತ ಮುಜುಗರಕ್ಕೆ ಒಳಗಾಗಿದ್ದು, ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಪ್ರಯತ್ನಿಸುತ್ತಿತ್ತು. ಒಂದು ವೇಳೆ ಭಟ್ಕಳದಲ್ಲಿ 8 ಪ್ರಕರಣ ಪತ್ತೆಯಾಗದಿದ್ದಲ್ಲಿ ಉತ್ತರ ಕನ್ನಡ ಜಿಲ್ಲೆ ಶೂನ್ಯದಲ್ಲಿಯೆ ಇರುತ್ತಿತ್ತು. ವಿದೇಶದಿಂದ ಬಂದ ಭಟ್ಕಳಿಗರಿಗೆ ಹೋಮ್ ಕ್ವಾರಂಟೈನ್ ವಿಧಿಸಿದ್ದರೂ ಅಲ್ಲಲ್ಲಿ ತಿರುಗಾಡುತ್ತಿರುವುದು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

    ಇಡೀ ಜಿಲ್ಲೆಯಲ್ಲಿ ಭಟ್ಕಳವನ್ನು ಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸಿದ ಜಿಲ್ಲಾಡಳಿತ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ. ಪೊಲೀಸರು ಗಸ್ತು ತಿರುಗುವ ಸೂಚನೆ ಸಿಕ್ಕ ಕೂಡಲೆ ಓಡಿ ಮರೆಯಾಗುತ್ತಿದ್ದ ಜನ ಅವರು ಆತ್ತ ತೆರಳುತ್ತಿರುವಂತೆ ಮತ್ತೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದರು. ಹಾಗಾಗಿ ಭಟ್ಕಳದಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸುವ ಕುರಿತು ಎಸ್​ಪಿ ಶಿವಪ್ರಕಾಶ ದೇವರಾಜು ಸೂಚನೆ ನೀಡಿ ಅದನ್ನು ಕಾರ್ಯಗತಗೊಳಿಸಿದ್ದರು. ಕಳೆದ ಶುಕ್ರವಾರ ಕೆಲ ಮಸೀದಿಗಳಲ್ಲಿ ಗುಟ್ಟಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇಲಾಖೆಗೆ ದೊರೆತಿತ್ತು. ಸಮುದಾಯದಲ್ಲಿ ಕರೊನಾ ಪಸರಿಸಬಾರದಂತೆ ತಡೆಯಲು ಶುಕ್ರವಾರ ಬೆಳಗ್ಗೆ ಯಿಂದಲೆ ಪೊಲೀಸರು ಕಾರ್ಯಾ ಚರಣೆಗೆ ಇಳಿದಿದ್ದರು. ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ಡ್ರೋೕಣ್ ಹಾರಾಟ ನಡೆಸಿ ಜನರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದರಿಂದ ಶುಕ್ರವಾರ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿದೆ. ಜನರು ಮನೆ ಯಿಂದ ಹೊರಬರುವ ಸಾಹಸಕ್ಕೆ ಕೈ ಹಾಕಲಿಲ್ಲ. ಸದ್ಯ ಭಟ್ಕಳದ ಪರಿಸ್ಥಿತಿ ಹತೋಟಿಯಲ್ಲಿದ್ದು, ಮುಂದಿನ ಕೆಲ ದಿನ ಜನರು ಇದೇ ರೀತಿ ಸಹಾಕಾರ ನೀಡಬೇಕು ಎಂದು ಡಿವೈಎಸ್​ಪಿ ಗೌತಮ್ ಕೆ.ಸಿ. ವಿನಂತಿಸಿದ್ದಾರೆ.

    ಜಮಾತ್​ಗೆ ತೆರಳಿದವರ ಪತ್ತೆ: ಮಾರ್ಚ್ ಮೊದಲ ವಾರದಿಂದ 20ರವರೆಗೆ ರಾಜ್ಯದ ವಿವಿಧೆಡೆ ಜಮಾತ್​ಗೆ ತೆರಳಿದ್ದರು ಎನ್ನಲಾದ ಭಟ್ಕಳದ 12 ಯುವಕರ ಪತ್ತೆ ಕಾರ್ಯ ಈಗಾಗಲೆ ಮುಗಿದಿದೆ. ಅವರ ಟ್ರಾವೆಲ್ ಹಿಸ್ಟರಿ, ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ ಪ್ರಾಥಮಿಕ ಪರೀಕ್ಷೆ ಮುಗಿದಿದೆ. ವೈದ್ಯಾಧಿಕಾರಿಗಳ ಸಹಾಯ ಪಡೆದು ಅವರನ್ನು ಮನೆಗಳಲ್ಲಿ ಹೋಮ್ ಕ್ವಾರಂಟೈನ್ ಇಡುವ ಕುರಿತು ಚಿಂತಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಡಳಿತದ ಸೂಚನೆ ಬಂದ ಬಳಿಕ ಮುಂದಿನ ಯೋಜನೆ ಕುರಿತು ತಾಲೂಕಾಡಳಿತ ರೂಪುರೇಷೆ ತಯಾರಿಸಲಿದೆ ಎನ್ನುವ ಮಾಹಿತಿ ವಿಜಯವಾಣಿ ಗೆ ಲಭಿಸಿದೆ.

    ಭಟ್ಕಳದ ಜನತೆ ಪ್ರಜ್ಞಾವಂತರಿದ್ದು ಇಲಾಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಇದರಿಂದಾಗಿ ಭಟ್ಕಳದ ಸೋಂಕಿತರ ಸಂಖ್ಯೆಯಲ್ಲಿ ನಿಯಂತ್ರಣ ಸಿಕ್ಕಿದೆ. ಕಾನೂನನ್ನು ಉಲ್ಲಂಘಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಕರ್ಫ್ಯೂ ಉಲ್ಲಂಘಿಸಿದ ಮುರ್ಡೆಶ್ವರದಲ್ಲಿ 3 ವಾಹನವನ್ನು ಗುರುವಾರ ಸೀಜ್ ಮಾಡಲಾಗಿದ್ದು, ಸಾರ್ವಜನಿಕರು ಎಚ್ಚರದಿಂದ ಇರಬೇಕು.
    | ಗೌತಮ್ ಕೆ.ಸಿ., ಡಿವೈಎಸ್​ಪಿ, ಭಟ್ಕಳ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts