More

    ಮನುಷ್ಯನನ್ನು ಜಾತಿಯಿಂದ ಗುರುತಿಸದಿರಿ

    ಗದಗ: ಮನುಷ್ಯನನ್ನು ಜಾತಿಯಿಂದ ಗುರುತಿಸದೇ ಮನುಷ್ಯನಂತೆ ನೋಡುವಂತಾದಾಗ ಮಾತ್ರ 12ನೇ ಶತಮಾನದ ಬಸವಾದಿ ಶರಣರು ಬಯಸಿದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 71ನೇ ಜಯಂತಿ, ಶಿವಾನುಭವ ಮಂಟಪ ಹಾಗೂ ಭಾವೈಕ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಲಿಂಗಾಯತ ಧರ್ಮವೇ ಮಾನವ ಧರ್ಮ. ಬಸವಣ್ಣನೇ ಧರ್ಮಗುರು. ಸಮ ಸಮಾಜ, ಲಿಂಗಾಯತ ಧರ್ಮಕ್ಕಾಗಿ 900 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದು ಬಹಳ ವರ್ಷ ಮುಂದುವರಿಯಬಾರದು ಎಂದರು.

    1901ರಲ್ಲಿ ಲಿಂಗಾಯತ ಜಾತಿಯಲ್ಲಿ 35 ಒಳಪಂಗಡಗಳಿದ್ದವು. ಆದರೆ, ಇಂದು 56 ಇವೆ. ಲಿಂಗ ಕಟ್ಟಿದವರನ್ನೆಲ್ಲ ಲಿಂಗಾಯತರು ಎಂದು ಒಪ್ಪಿಕೊಂಡಿದ್ದರೆ ಈ ನಾಡಿನಲ್ಲಿ ಶೇ. 65ರಷ್ಟು ಲಿಂಗಾಯತರು ಇರುತ್ತಿದ್ದರು. ಆದರೆ, ಒಪ್ಪದಿದ್ದ ಪರಿಣಾಮ ಅದರ ಸಂಖ್ಯೆ ಕೇವಲ ಶೇ.18-20 ರಷ್ಟಾಗಿದೆ. ಬಸವಣ್ಣ ಬಯಸಿದ ಸಮ ಸಮಾಜ ರೂಪಿಸಲು ಲಿಂ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಮಹನೀಯರು. ಶ್ರೀಗಳ ಸಂಪರ್ಕಕ್ಕೆ ಬಂದ ಬಳಿಕವೇ ನಾನು ಬಸವ ಅನುಯಾಯಿಯಾದೆ ಎಂದು ನೆನಪಿಸಿಕೊಂಡರು.

    ವಿಪ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬಹುತೇಕ ಮಠಗಳಲ್ಲಿ ಇಂದು ಸಾಮಾಜಿಕ ಕಳಕಳಿ ಮಾಯವಾಗುತ್ತಿದೆ. ಸಮಾಜದ ನ್ಯೂನತೆ ಸರಿಪಡಿಸುವ ಸ್ವಾಮೀಜಿಗಳಿದ್ದಾಗ ಮಾತ್ರ ಸಮ ಸಮಾಜ ಸಾಧ್ಯ. ಸಮಾನತೆ, ಹಕ್ಕು ಪಡೆಯಲು ನಡೆಸಿದ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಸತ್ಯಕ್ಕಾಗಿ ಹೋರಾಟ ಮಾಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

    ಮುಂಡರಗಿಯ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಬುದ್ಧಿ ಮತ್ತು ಮನಸ್ಸಿನಿಂದ ಬದುಕಿದವರು ವ್ಯವಹಾರಿಕಗಳಾಗುತ್ತಾರೆ. ಲಿಂ. ಡಾ ತೋಂಟದ ಸಿದ್ಧಲಿಂಗ ಶ್ರೀಗಳು ಧಾರ್ವಿುಕ ವಿಧಿ-ವಿಧಾನಗಳ ಜತೆಗೆ ವೈಚಾರಿಕತೆಯ ಬಗ್ಗೆಯೂ ಪ್ರತಿಪಾದಿಸಿದರು ಎಂದರು.

    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಲಿಂ.ಡಾ ತೋಂಟದ ಸಿದ್ಧಲಿಂಗ ಶ್ರೀಗಳು ನೇರ ಹಾಗೂ ನಿಷ್ಠುರವಾದಿ. ತಾವು ನಂಬಿದ ತತ್ತ್ವ, ವಿಚಾರಗಳಿಗೆ ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ ಎಂದರು.

    ಡಂಬಳ-ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೈರನಹಟ್ಟಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಸಂಸದ ಶಿವಕುಮಾರ ಉದಾಸಿ, ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಸಾಹಿತಿ ವಿಲ್ಸನ್ ಮೈಲಿ, ಇಂದುಮತಿ ಸಾಲಿಮಠ, ಮಹೇಶ ರಂಗಣ್ಣವರ, ಅಮರೇಶ ಅಂಗಡಿ, ಡಾ.ಸಿ.ಎಂ. ನಿಂಬಣ್ಣವರ, ರತ್ನಕ್ಕ ಪಾಟೀಲ ಉಪಸ್ಥಿತರಿದ್ದರು.

    ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ‘ಅನುಸಂಧಾನ‘ ಮತ್ತು ವಿವೇಕಾನಂದಗೌಡ ಪಾಟೀಲ ಅವರ ‘ವಾತ್ಸಲ್ಯ ವಾರಿಧಿ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

    ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

    ದೇಶದ್ರೋಹಿ ಚಟುವಟಿಕೆ ಸಹಿಸಲಾಗದು

    ಗದಗ: ಬೆಂಗಳೂರಿನಲ್ಲಿ ಯುವತಿ ಪಾಕಿಸ್ತಾನದ ಪರ ಘೊಷಣೆ ಹಾಕಿದ್ದು ತಪ್ಪು. ಘೋಷಣೆ ಕೂಗಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಅನ್ನ ಉಂಡು ನಮ್ಮ ವೈರಿ ರಾಷ್ಟ್ರದ ಪರ ಘೊಷಣೆ ಹಾಕುವುದನ್ನು ಸುತಾರಾಂ ಒಪ್ಪಲು ಸಾಧ್ಯವಿಲ್ಲ. ತಿಳಿವಳಿಕೆ ಇಲ್ಲದ ಹುಡುಗಿಯಿಂದ ಇಂತಹ ಘಟನೆ ಆಗಿರಬಹುದು. ಇಂತಹ ತಪ್ಪು ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ ಎಂದರು.

    ನಾವು ಭಾರತೀಯರೆಂಬ ಹೆಮ್ಮೆಯಿಂದ ಬದುಕಬೇಕು. ದೇಶ ದ್ರೋಹದ ಚಟುವಟಿಕೆಗಳನ್ನು ಸರ್ಕಾರ ಸಹಿಸಲ್ಲ. ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳತ್ತೇವೆ ಎಂದು ಎಚ್ಚರಿಸಿದರು.

    ಮಹದಾಯಿ ವಿಚಾರಕ್ಕೆ ಸಂಬಂಧಿಸಿ ಗೆಜೆಟ್ ನೋಟಿಫೀಕೇಷನ್ ಹೊರಡಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ, ಇದು ರಾಜ್ಯಕ್ಕೆ ಸಿಕ್ಕ ಜಯ ಎಂದು ವ್ಯಾಖ್ಯಾನಿಸಿದರು.

    ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ನಮ್ಮ ಭಾಗದ ಬಹುದಿನದ ಜನರ ಹೋರಾಟವಾಗಿತ್ತು. ಟ್ರಿಬುನಲ್​ನಲ್ಲಿ ನಮಗೆ ಗೆಲುವು ಸಿಕ್ಕಿದೆ. ಆದರೆ, ಗೋವಾ, ಮಹಾರಾಷ್ಟ್ರದವರು ನಮಗೆ ಅನ್ಯಾಯವಾಗಿದೆ ಎಂದು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು ಎಂದರು.

    ಇದೀಗ ನಮ್ಮ ಪಾಲಿನ ನೀರನ್ನು ಕುಡಿಯುವುದಕ್ಕೆ ಹಾಗೂ ನೀರಾವರಿಗೆ ಬಳಸಿಕೊಳ್ಳುವುದಕ್ಕೆ ಸರ್ಕಾರ ಬದ್ಧವಿದೆ. ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾಲಿಸಬೇಕು ಎಂದರು.

    ರಾಷ್ಟ್ರಕ್ಕೆ ಇಂದು ವಿಷಮಶೀತಜ್ವರ ಬಾಧಿಸಿದೆ. ಇದನ್ನು ಹೋಗಲಾಡಿಸಲು ಬಸವಾದಿ ಶರಣರ ವಚನಗಳೆಂಬ ಔಷಧಿ ಬಳಸಬೇಕು.

    ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts