More

    ಮನದ ಕಸ ಕಡ್ಡಿ ತೆಗೆದರೆ ಜೀವನ ಆನಂದಮಯ

    ಸಾವಿರಾರು ವರ್ಷಗಳ ಹಿಂದಿನಿಂದಲೂ ಶರಣರು, ಸಂತರು ಈ ಜಗತ್ತಿನಲ್ಲಿ ಸುಂದರ, ಸಂತೋಷದ ಜೀವನ ಮಾಡಿ ಹೋಗಿದ್ದಾರೆ. ಅವರು ನಮಗೆ ಆದರ್ಶ. ಅವರ ಮಾತು, ಕಾರ್ಯಗಳು ಸಾಧನೆ.

    ಕಮಲ ನೀರಿನಲ್ಲಿ ಅರಳುತ್ತದೆ. ಅದು ದೇವರ ತಲೆ ಮೇಲೆ ಇರುತ್ತದೆ. ಅದು ಸ್ವಚ್ಛ. ಅದಕ್ಕೇ ಅದು ದೇವರ ಮುಡಿಯಲ್ಲಿ ಇರುತ್ತದೆ.

    ಬಸವಣ್ಣನವರು ಹೇಳುತ್ತಾರೆ, ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ. ಮನೆಯಲ್ಲಿ ಪೀಠೋಪಕರಣ ಕಡಿಮೆ ಇದ್ದರೂ ನಡೆಯುತ್ತದೆ. ಮನೆಯಲ್ಲಿ ಬಿದ್ದ ಕಸ ಕಡ್ಡಿಗಳನ್ನು ತೆಗೆದು ಹಾಕಿದರೆ ಜೀವನ ಆನಂದಮಯ ಆಗುತ್ತದೆ. (ಮನೆ ಎಂದರೆ ಮನ).

    ಮನ ಸ್ವಲ್ಪ ಕಸ ಆಗುವುದೇ ಕಣ್ಣಿನಿಂದ, ಭಾವದಿಂದ, ಹೃದಯದಿಂದ, ಆಸೆಯಿಂದ. ಮನದಲ್ಲಿ ಕಸ ಬಂದು ಬೀಳುತ್ತಿದ್ದಂತೆ ಅದನ್ನು ತೆಗೆಯುತ್ತಿರಬೇಕು. ಕಸವನ್ನು ಹಾಗೇ ಇಟ್ಟುಕೊಂಡರೆ ನಿಮ್ಮ ಜೀವನ ಎಂದಿಗೂ ಆನಂದಮಯ ಆಗುವುದಿಲ್ಲ.

    ಬಸವಣ್ಣನವರು ಹೇಳುತ್ತಾರೆ. ಮನೆಯಲ್ಲಿ ಮನೆಯ ಒಡೆಯ ಇದ್ದಾನೋ ಇಲ್ಲವೋ ಅಂತ. ಏಕೆ? ಮನಸ್ಸಿನ ಒಳಗೂ ಹೊರಗೂ ಕಸ ಕಡ್ಡಿ ಬೆಳೆಯಬಾರದು. ಕಸ ಬೆಳೆದರೆ ಅಲ್ಲಿ ಆನಂದ ಇರುವುದಿಲ್ಲ.

    ಅದಕ್ಕೇ ಹಿರಿಯರು ಹೇಳುತ್ತಾರೆ, ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು. ನಮ್ಮ ಮಾತುಗಳು ಸಹ ಶುದ್ಧವಾಗಿರಬೇಕು. ಮನಸೆಂಬ ಮನೆ ಸ್ವಚ್ಛ ಇದ್ದರೆ ಮಾತುಗಳು ಸ್ವಚ್ಛವಾಗಿ ಇರುತ್ತವೆ.

    ಹೊರಗಿನ ಮನೆಯನ್ನು ಯಾರಾದರೂ ಸ್ವಚ್ಛ ಮಾಡಬಹುದು. ಒಳಗಿನ ಮನೆಯನ್ನು ನಾವೇ ಸ್ವಚ್ಛ ಮಾಡಬೇಕು. ನಿನ್ನ ಮನೆಯ ಮಾಲೀಕ ನೀನೆ.

    ಯಾವ ವಸ್ತುವಿನಿಂದ ಮನದಲ್ಲಿ ಕಸ ಬರುತ್ತದೆಯೋ ಅದರಿಂದ ದೂರ ಇರಬೇಕು ಎಂದು ಬಸವಣ್ಣನವರು ಹೇಳಿದರು. ಅಧ್ಯಾತ್ಮ ಅಂದರೆ ಮನಸನ್ನು ಸ್ವಚ್ಛ ಮಾಡುವ ಸಾಧನೆ.

    ಬಸವಣ್ಣನವರ ಕಾಲದಲ್ಲಿ ಒಂದು ಘಟನೆ ನಡೆಯಿತು. ಒಬ್ಬ ಶರಣ ನುಲಿಯ ಚಂದಯ್ಯ. ಹಗ್ಗ ನೇಯುವುದು ಅವನ ಕೆಲಸ. ನುಲಿಯ ಚಂದಯ್ಯನಿಗೆ ಸಹಾಯಕನಾಗಿ ಒಬ್ಬ ಕೆಲಸಗಾರನಿದ್ದ. ತಯಾರು ಮಾಡಿದ ಹಗ್ಗ ಮಾರುವುದೂ ಇವನದೇ ಕೆಲಸ. ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ. ಒಂದು ದಿನ ನುಲಿಯ ಚಂದಯ್ಯ ಒಂದು ಹಗ್ಗ ತಯಾರು ಮಾಡಿ ಸಹಾಯಕನಿಗೆ ಹೇಳಿದ, ‘ಇದನ್ನು 1 ರೂಪಾಯಿಗೆ ಮಾರಿಕೊಂಡು ಬಾ’ ಅಂತ. ಸಹಾಯಕ ಮಾರಾಟಕ್ಕೆ ಹೋದ. ಒಬ್ಬಾತ ಹಗ್ಗ ಖರೀದಿಸಲು ಬಂದ. ಬೆಲೆ 1 ರೂ. ಎಂದಾಗ ಗ್ರಾಹಕ, ‘ಇದರ ಬೆಲೆ 2 ರೂ., ಬಹಳ ಚೆನ್ನಾಗಿ ಇದೆ’ ಎಂದು ಹೇಳಿ 2 ರೂ. ಕೊಟ್ಟು ಹಗ್ಗ ಖರೀದಿಸಿದ. ಸಹಾಯಕನಿಗೆ ಖುಷಿಯಾಯಿತು. ಸಂಜೆ ನುಲಿಯ ಚಂದಯ್ಯನ ಭೇಟಿ ಮಾಡಿ 2 ರೂ. ನೀಡಿದ. ಏಕೆ ಎಂದು ಕೇಳಿದಾಗ, ವಿಷಯ ಹೇಳಿದ.

    ‘ನೀನು ನನ್ನ ಕಡೆ ಕೆಲಸ ಮಾಡಲು ಯೋಗ್ಯನಲ್ಲ. ಇಂದಿನಿಂದ ನಿನಗೆ ನನ್ನ ಕಡೆ ಕೆಲಸ ಇಲ್ಲ. ನೀನು ಆಸೆಯಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೀಯ. ಇಂದಿನಿಂದ ನೀನು ನನಗೆ ಬೇಡ’ ಎಂದು ಹೇಳಿ ಸಹಾಯಕನನ್ನು ಕೆಲಸದಿಂದ ತೆಗೆದುಹಾಕಿಬಿಟ್ಟ ನುಲಿಯ ಚಂದಯ್ಯ. ಎಂಥ ಶರಣರ ಕಾಲ ಅದು!

    ಮುಂದೆ ಸಂಧಾನ ಮಾತುಕತೆ ಮೂಲಕ ಬಸವಣ್ಣನವರು ನುಲಿಯ ಚಂದಯ್ಯನನ್ನು ಸಮಾಧಾನಪಡಿಸಿದರು. ಹೀಗೆ ಸತ್ಯದ ಸಾಕ್ಷಾತ್ಕಾರದ ಹಾದಿಯಲ್ಲಿ ಸಂತರು, ಶರಣರು ಬದುಕಿದರು. ಸ್ವಚ್ಛ ಮನಸಿನ ಶರಣರು ಅವರು. ಅವರ ಆದರ್ಶಗಳನ್ನು ನಾವು ಕಲಿಯಬೇಕು.

    ಶರಣರ ಸಂಘದಿಂದ ಸಂತನಾದ ಅಂಗುಲಿಮಾಲ: ಎಂತಹ ಕ್ರೂರಿ ಇದ್ದರೂ ಮನಸನ್ನು ಬದಲು ಮಾಡಬಹುದು. 2600 ವರ್ಷಗಳ ಹಿಂದೆ ಅಂಗುಲಿಮಾಲ ಎಂಬ ಕ್ರೂರಿ ಇದ್ದ. ಅವನು ಮನುಷ್ಯರ ಬೆರಳುಗಳನ್ನು ಕತ್ತರಿಸಿ, ಹಾರ ಮಾಡಿ ಹಾಕಿಕೊಂಡಿದ್ದ. ಆ ಬೆರಳುಗಳು ಯಾವತ್ತೂ ಒಣಗಬಾರದು, ಆ ತರಹ ನಿಯಮ ಮಾಡಿಕೊಂಡಿದ್ದ.

    ಅದು ದಟ್ಟವಾದ ಅರಣ್ಯ ಪ್ರದೇಶ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೆ ಆ ಅರಣ್ಯದಲ್ಲಿ ಹೋಗಬೇಕಿತ್ತು.

    ಒಂದು ದಿನ ಅರಣ್ಯದಲ್ಲಿ ಬುದ್ಧ ಹಾದು ಹೋಗುತ್ತಿದ್ದ. ಅಂಗುಲಿಮಾಲ ಎದುರಾಗಿ ನಿಲ್ಲು ಎಂದ. ಬುದ್ಧ ಹೇಳಿದ, ‘ನಾನು ಅಲ್ಲ, ನೀನು ನಿಲ್ಲು. ಓಡಬೇಡ, ಅಲ್ಲೇ ನಿಲ್ಲು’ ಎಂದ.

    ಅಂಗುಲಿಮಾಲನಿಗೆ ಆಶ್ಚರ್ಯವಾಯಿತು. ತನ್ನನ್ನು ನೋಡಿ ಎಲ್ಲರೂ ಓಡಿ ಹೋಗುತ್ತಾರೆ. ಈ ಮನುಷ್ಯನ ಮುಖದಲ್ಲಿ ಎಷ್ಟು ಪ್ರಸನ್ನತೆ, ಶಾಂತಿ ಇದೆ ಎಂದುಕೊಂಡ. ಕೈಯಲ್ಲಿ ಇದ್ದುದನ್ನು ನೆಲಕ್ಕೆ ಚೆಲ್ಲಿ ಕೇಳಿದ, ‘ನನ್ನನ್ನು ನೋಡಿ ಎಲ್ಲರೂ ಓಡಿ ಹೋಗುತ್ತಾರೆ. ನೀವು ಶಾಂತವಾಗಿ ನಿಂತಿದ್ದೀರಲ್ಲ? ನಿಮ್ಮ ತರಹ ನಾನೂ ಶಾಂತನಾಗಿ ನಿಲ್ಲಬೇಕಲ್ಲ’ ಅಂದ.

    ಯಾವ ಕಾರಣಕ್ಕೂ ಮನಸ್ಸಿನ ಹಿಂದೆ ಹೋಗುವುದಲ್ಲ. ಮನಸ್ಸು ನಮ್ಮ ಹತೋಟಿಯಲ್ಲಿ ಇರಬೇಕು ಎಂದು ಬುದ್ಧ ಉಪದೇಶ ಮಾಡಿದ. ಬುದ್ಧನ ಶಾಂತಿಗೆ ಶರಣಾಗಿ ಅಂಗುಲಿಮಾಲ ಸಂತರ ಬಳಗ ಸೇರಿದ. ಶರಣರ ಸಂಘದಿಂದ ಅಂಗುಲಿಮಾಲನೂ ಮುಂದೆ ಸಂತನಾದ. ಮನುಷ್ಯನೇ, ಕಾಯಕ ಮಾಡಬೇಕು. ಯಾವ ಕೆಲಸ ಆದರೂ ಮಾಡು. ಮನಸು ಶಾಂತ ಆಗಿರಬೇಕು. ಶಾಂತ ಅಂದರೆ ಬುದ್ಧ, ಬುದ್ಧ ಅಂದರೆ ಶಾಂತಿ… ಶಾಂತಿಯಿಂದ ಜಗ್ಗತ್ತನ್ನೇ ಗೆದ್ದನು ಬುದ್ಧ.

    ನಿರೂಪಣೆ: ತುಕಾರಾಂ ಬ. ಜಾಧವ ಕನಕೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts