More

    ಜರೂರ್​ ಮಾತು ಅಂಕಣ: ಮತ್ತೆ ಮತ್ತೆ ಬರುವುದಿಲ್ಲ ಮತ್ತೊಂದು ಅವಕಾಶ..!

    ‘ಅಯ್ಯೋ ನಮ್ಮಲ್ಲಿ ಇಷ್ಟು ಸಾಮರ್ಥ್ಯ ಮತ್ತು ಬಹುಬಗೆಯ ಕೌಶಲಗಳು ಇವೆ ಎಂಬುದೇ ಗೊತ್ತಿರಲಿಲ್ಲ…’ ಕರೊನಾ ಬಹುತೇಕರ ಬದುಕನ್ನು ಉಲ್ಟಾಪಲ್ಟಾ ಮಾಡಿದ ಬಳಿಕ ಜೀವನ ನಿರ್ವಹಣೆಗಾಗಿ ಹೊಸ ದಾರಿ ತುಳಿದವರ ಉದ್ಗಾರ ಜರೂರ್​ ಮಾತು ಅಂಕಣ: ಮತ್ತೆ ಮತ್ತೆ ಬರುವುದಿಲ್ಲ ಮತ್ತೊಂದು ಅವಕಾಶ..!ಇದು! ನಿಜ, ‘ಸೇಫರ್ ಜೋನ್’ ಎಂಬ ಭ್ರಮೆಯಲ್ಲಿ ಹಾಗೇ ಮುಳುಗಿರುತ್ತೇವೆ. ಈ ‘ಸುರಕ್ಷಾ ವಲಯ’ ಸುರಕ್ಷಾ ಭಾವ ಕೊಡುವ ಬದಲು ಇದನ್ನು ಮೀರಿ ಬಂದರೆ ಹೇಗೆ ಎಂಬ ಭಯವನ್ನೇ ಹೆಚ್ಚು ಹುಟ್ಟಿಸುತ್ತದೆ. ಇದಕ್ಕಾಗಿಯೇ ತುಂಬ ಜನ ಆಸಕ್ತಿಗೆ ವಿರುದ್ಧವಾದ ಕೆಲಸ/ವೃತ್ತಿಯಲ್ಲಿ ಕಳೆದುಹೋಗಿರುತ್ತಾರೆ. ಅದಕ್ಕೆ ‘ಅನಿವಾರ್ಯತೆ’ ಎಂಬ ಹಣೆಪಟ್ಟಿ ನೀಡಿ, ತಮ್ಮ ನಿಜವಾದ ಸಾಮರ್ಥ್ಯ, ಕೌಶಲ, ಸೃಜನಶೀಲತೆ, ಶಕ್ತಿಯನ್ನೇ ಮರೆತುಬಿಡುತ್ತಾರೆ! ಹನುಮಂತನಿಗೂ ಆತನ ಶಕ್ತಿ ಜ್ಞಾಪಿಸಿದ ಮೇಲೆಯೇ ಸಮುದ್ರೋಲ್ಲಂಘನ ಸಾಧ್ಯವಾಯ್ತು! ಆದರೆ, ಹಾಗೆ ಎಚ್ಚರಿಸುವವರು/ಜಾಗೃತಗೊಳಿಸುವವರು ಬೇಕಲ್ಲ… ಅದರ ಕೊರತೆಯಿಂದ ಅದೆಷ್ಟೋ ಹನುಮತ್ ಶಕ್ತಿಗಳು ಇನ್ನೂ ಅನುಮಾನದ ಕೋಟೆಯಲ್ಲೇ ಬಂಧಿಯಾಗಿವೆ. ಈ ಕೋಟೆಯನ್ನು ಭೇದಿಸುವ ಒಳ್ಳೆಯ ಅವಕಾಶವನ್ನು ಕರೊನಾ ಕಲ್ಪಿಸಿದೆ. ‘ಅದೆಲ್ಲ ನಮ್ಮಿಂದ ಸಾಧ್ಯವಿಲ್ಲ ಬಿಡ್ರಿ’ ಎಂದು ದೂರ ಉಳಿಯುತ್ತಿದ್ದವರೇ ಈಗ ಸಾಧನೆಯ ಹೊಸ ಮಜಲುಗಳನ್ನು ಏರಿ, ಇತರರಿಗೂ ಪ್ರೇರಣೆಯ ಪಥ ನಿರ್ವಿುಸುತ್ತಿದ್ದಾರೆ!

    ಹಾಂ! ಹಾಗಂತ ಜೀವನದಲ್ಲಿ ಮತ್ತೆ ಮತ್ತೆ ಅವಕಾಶಗಳು ಬರೋದಿಲ್ಲ. ಸವಾಲುಗಳು/ಸಂಕಷ್ಟಗಳ ರೂಪದಲ್ಲೇ ಅವಕಾಶಗಳು ಬಂದು ಬಾಗಿಲು ತಟ್ಟಿದಾಗ ಅವನ್ನು ಆತ್ಮೀಯವಾಗಿ ಅಪ್ಪಿಕೊಳ್ಳಬೇಕೇ ಹೊರತು; ಕಷ್ಟವೆಂದು ದೂಡಿಬಿಟ್ಟರೆ ನಿರಾಶೆ ಖಂಡಿತ. ಇನ್ನು ಕೆಲವರಿಗೆ ಹಲವು ಅನುಮಾನಗಳು. ‘ಈ ವಯಸ್ಸಿನಲ್ಲಿ ಹೊಸ ಸಾಹಸಕ್ಕೆ ಇಳಿದರೆ ಯಶಸ್ಸು ಸಾಧಿಸಬಹುದಾ?’, ‘ಅಯ್ಯೋ, ವಯಸ್ಸು 35 ಕಳೆದು ಹೋಯಿತು. ಈಗ ರಿಸ್ಕ್ ತೆಗೆದುಕೊಂಡರೆ ಏನು ಗತಿ?’, ‘ನಷ್ಟವಾದರೆ ಮೇಲೆ ಎತ್ತುವವರು ಯಾರು?’ ಹೀಗೆ ಆತಂಕಗಳ ಸರಮಾಲೆಯನ್ನು ನಾವೇ ಕೊರಳಿಗೆ ಹಾಕಿಕೊಂಡು, ವಿಧಿ, ಅದೃಷ್ಟವನ್ನು ಹಳಿದರೆ ಏನು ಪ್ರಯೋಜನ? ಒಂದಂತೂ ಸ್ಪಷ್ಟ – ಪ್ರಬಲ ಇಚ್ಛಾಶಕ್ತಿ, ಕಠಿಣ ದುಡಿಮೆಯ ಹುಮ್ಮಸ್ಸು, ಹೊಸದನ್ನು ಸಾಧಿಸುವ ತುಡಿತ, ಸ್ವಾವಲಂಬಿಯಾಗುವ ಛಲ, ಯಶಸ್ಸು ಸಿಕ್ಕ ಮೇಲೂ ಅಹಂ ಪ್ರವೇಶಿಸಲು ಬಿಡದೆ ನೈಜ ಸತ್ವ ಉಳಿಸಿಕೊಳ್ಳುವ ಗುಣ ಇದ್ದಲ್ಲಿ ಯಾವುದೇ ವಯಸ್ಸಿನಲ್ಲಿ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಬಹುದು. ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಗಟ್ಟಿಯಾಗಿ ಬೇರೂರ ಬಹುದು. ಇದೆಲ್ಲ ತಾತ್ವಿಕ ಸಂಗತಿಗಳು, ಇಂಥ ಪ್ರಯತ್ನಕ್ಕೆ ಮುಂದಾಗಿ ಕೈಸುಟ್ಟುಕೊಂಡಿದ್ದೇವೆ ಎಂದು ಹೇಳುವವರೂ ಇದ್ದಾರೆ. ಹೌದು, ಸೋಲು, ವೈಫಲ್ಯ ಅನಿರೀಕ್ಷಿತವೇನಲ್ಲ. ಕೆಲವೊಮ್ಮೆ ನಮ್ಮದೇ ಅಸಾಮರ್ಥ್ಯ ಅಥವಾ ತಪು್ಪಗಳಿಂದ ಗೆಲುವಿನ ಜಾಗವನ್ನು ಸೋಲು ಆಕ್ರಮಿಸಿಕೊಂಡು ಬಿಡುತ್ತದೆ. ಅಂಥ ಹೊತ್ತಲ್ಲಿ ಅವಲೋಕನ ಮಾಡಿಕೊಂಡು ಹಳೆಯ ತಪು್ಪಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಹೊಸಪಥದಲ್ಲಿ ಸಾಗಿದರೆ ಗೆಲುವಿನ ಗಮ್ಯ ಸಿಗದೇ ಇರದು. ಅದಕ್ಕಾಗಿ ತಾಳ್ಮೆ, ಒಂದಿಷ್ಟು ಆಶಾವಾದವೇ ದೊಡ್ಡ ಟಾನಿಕ್!

    ***

    70 ವರ್ಷದ ಈ ಅಜ್ಜಿ ಶಾಲೆಯ ಮುಖವನ್ನೇ ನೋಡಿಲ್ಲ, ಮೊಬೈಲ್ ಎಂಬುದು ಅವರ ಪಾಲಿಗೆ ಮಾಯಾಪೆಟ್ಟಿಗೆ. ಇರುವುದು ಮಹಾರಾಷ್ಟ್ರದ ಅಹಮದನಗರ್​ದಿಂದ 15 ಕಿ.ಮೀ. ದೂರದಲ್ಲಿರುವ ಸರೋಲಾ ಕಾಸರ್ ಎಂಬ ಸಣ್ಣ ಹಳ್ಳಿಯಲ್ಲಿ. ಹೆಸರು ಸುಮನಾ ಧಾಮ್ನೆ. ಪ್ರಸಕ್ತ ಯುಟ್ಯೂಬ್​ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಹೇಗೆ ಅಂತೀರಾ? ಸಣ್ಣ ಫ್ಲ್ಯಾಶ್​ಬ್ಯಾಕ್​ಗೆ ಹೋಗೋಣ.

    ಇವರು ಮಾಡುವ ತಿಂಡಿ/ಅಡುಗೆಯನ್ನು ಮೊಮ್ಮಗ ಚಪ್ಪರಿಸಿಕೊಂಡು ತಿನ್ನುವುದಲ್ಲದೆ, ‘ಇಷ್ಟು ಚೆನ್ನಾಗಿ ಅಡುಗೆ ಹೇಗೆ ಮಾಡ್ತಿಯಾ ಅಜ್ಜಿ’ ಎಂದು ಪ್ರಶ್ನಿಸುತ್ತಿದ್ದ. ಈ ಸ್ವಾದ, ಅಜ್ಜಿಯ ರೆಸಿಪಿ ಕೌಶಲವನ್ನು ಸಮಾಜಕ್ಕೆ ಪರಿಚಯಿಸಿದರೆ ಹೇಗೆ ಎಂಬ ಯೋಚನೆ ಹೊಳೆಯುತ್ತಿದ್ದಂತೆ 11ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಮೊಮ್ಮಗ ಯಶ್ ಪಾಠಕ್ ‘ಆಪ್ಲಿ ಅಜ್ಜಿ’ (ನಮ್ಮ ಅಜ್ಜಿ) ಎಂಬ ಯುಟ್ಯೂಬ್ ಖಾತೆ ಆರಂಭಿಸಿದ. ಮೊದಲಿಗೆ ಶೇಂಗಾ ಚಟ್ನಿ, ಸೊಪು್ಪ ತರಕಾರಿಗಳ ಪಲ್ಯ ಮಾಡುವ ವಿಧಾನದ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ, ನೋಡುಗರ ಸಂಖ್ಯೆ ಹೆಚ್ಚತೊಡಗಿತು. ವಡಾಪಾವ್ ಮತ್ತು ಲಾಲ್ ಚಟ್ನಿ ರೆಸಿಪಿಯ ವಿಡಿಯೋವನ್ನು 18 ಲಕ್ಷಕ್ಕೂ ಅಧಿಕ ಜನ, ಭಾಕರ್​ವಾಡಿ ರೆಸಿಪಿಯ ವಿಡಿಯೋ 12 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದಾಗ ಯಶ್​ಗೆ ಅಜ್ಜಿ ಮಾಡುವ ಸಾಂಪ್ರದಾಯಿಕ ಖಾದ್ಯಗಳ ರುಚಿಯ ಸಾಮರ್ಥ್ಯ ಮತ್ತು ಜನರಿಗೆ ಆ ಬಗೆಗಿರುವ ಕುತೂಹಲ ಮನದಟ್ಟಾಯಿತು.

    ಇನ್ನು ನಿಲ್ಲುವುದು ಬೇಡ, ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮುಂದುವರಿಸೋಣ ಎಂದು ನಿರ್ಧರಿಸಿದ ಯಶ್ ಅಜ್ಜಿ ಸುಮನಾ ಮಾಡುವ ಅಡುಗೆ, ಅದರ ವಿಧಾನವನ್ನು ವಿಡಿಯೋ ಮಾಡಿ, ಅಪ್ಲೋಡ್ ಮಾಡುತ್ತ ಮಾಡುತ್ತ ‘ಆಪ್ಲಿ ಅಜ್ಜಿ’ ಎಂಬ ಬ್ರಾ್ಯಂಡ್ ಸೃಷ್ಟಿಸಿಬಿಟ್ಟ. ಏನಾಶ್ಚರ್ಯ! ಕೇವಲ ಆರು ತಿಂಗಳಲ್ಲೇ ಆರು ಲಕ್ಷ ಜನ ಸಬ್​ಸ್ಕೈಬರ್​ಗಳಾದರು. ಸದ್ಯ, 140ಕ್ಕೂ ಹೆಚ್ಚು ವಿಡಿಯೋಗಳು ಉಪಲಬ್ಧವಿದ್ದು, ಬಹುತೇಕ ವಿಡಿಯೋಗಳು ಲಕ್ಷಗಟ್ಟಲೇ ವೀವ್ಸ್ ಗಿಟ್ಟಿಸಿಕೊಂಡಿವೆ. ಇವರ ಯುಟ್ಯೂಬ್ ಚಾನೆಲ್​ನ್ನು ಈವರೆಗೆ 5 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಜನಸಾಮಾನ್ಯರು ತಮ್ಮ ಅಡುಗೆಮನೆಗಳಲ್ಲಿ ಈ ಖಾದ್ಯಗಳನ್ನು ತಯಾರಿಸಿ, ಆಸ್ವಾದಿಸುತ್ತ ‘ಥ್ಯಾಂಕ್ಯೂ ಅಜ್ಜಿ’ ಎನ್ನುತ್ತಿದ್ದಾರೆ. ಅಲ್ಲಿಂದ ಮತ್ತೊಂದು ಹೆಜ್ಜೆ… ಇವರು ತಯಾರಿಸುವ ಉಪ್ಪಿನಕಾಯಿ, ಮಸಾಲೆ ಪದಾರ್ಥಗಳು ಹಾಗೂ ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅದಕ್ಕೂ ಭರ್ಜರಿ ಬೇಡಿಕೆ. 30 ಎಕರೆ ಗದ್ದೆಯನ್ನು ನಿರ್ವಹಿಸುತ್ತಲೇ ಇಷ್ಟೆಲ್ಲ ಕೆಲಸ ಮಾಡುತ್ತಿರುವ ಅಜ್ಜಿ ನೂರಾರು ಕಾಲ್​ಗಳಿಗೆ ಉತ್ತರಿಸುತ್ತ ರೆಸಿಪಿ ವಿವರವನ್ನೂ ನೀಡುತ್ತಾರೆ. 70ನೇ ವಯಸ್ಸಲ್ಲೂ ನಮ್ಮ ಪ್ರಯತ್ನದಿಂದ ಜೀವನ ಹೀಗೆ ತಿರುವು ಪಡೆಯಬಹುದು!

    ಕರೊನಾ ಹೊತ್ತಿನಲ್ಲಿ ಯಾವುದೇ ವಸ್ತುವನ್ನು ರ್ಸ³ಸಿದರೂ ಆತಂಕವೇ, ಯಾವುದರಿಂದ ವೈರಾಣು ದೇಹದೊಳಕ್ಕೆ ಪ್ರವೇಶಿಸಿ ಬಿಡುತ್ತದೋ ಎಂದು. ಇದೇ ಆತಂಕ ಹೊಸ ಅನ್ವೇಷಣೆಗಳಿಗೂ ನಾಂದಿಯಾಗಿದೆ. ಕಂಪನಿಗಳಲ್ಲಿ, ಇತರ ಸಾರ್ವಜನಿಕ ಸ್ಥಳಗಳಲ್ಲಿ ನೀರು ಕುಡಿಯಲು ಇಟ್ಟಿರುವ ಮಷಿನ್​ಗಳನ್ನು ಕೈಯಿಂದಲೇ ರ್ಸ³ಸಬೇಕು. ಇದರ ಬದಲು ಪೈಡಲ್ ಮಾದರಿ ಅಳವಡಿಸಿ, ಸುರಕ್ಷೆಯ ಭಾವ ಅಳವಡಿಸಿದವರು ಬೆಂಗಳೂರಿನ ಯುವ ಉದ್ಯಮಿ ಮಹೇಂದ್ರ ಅಂಚಲ್. Mahendra facility company ಮೂಲಕ ಬೆಂಗಳೂರಿನ ನೂರಕ್ಕೂ ಹೆಚ್ಚು ಸಾಫ್ಟ್​ವೇರ್ ಕಂಪನಿಗಳಿಗೆ ನೀರಿನಿಂದ ಹಿಡಿದು ರ್ಪಾಂಗ್​ವರೆಗಿನ ವ್ಯವಸ್ಥೆ ಕಲ್ಪಿಸಿ ಕೊಡುತ್ತಿರುವ ಇವರು ಉದ್ಯಮದಲ್ಲಿ ತಾಜಾ ಚಿಂತನೆಗಳನ್ನು ಅನುಷ್ಠಾನ ಮಾಡುವಲ್ಲಿ ಸದಾ ಉತ್ಸಾಹಿ. ನೀರು ಕುಡಿಯಲು ಬಳಸುವ dispensaryಗಳನ್ನು ಜನ ಮುಟ್ಟಲು ಹೆದರತೊಡಗಿದರು. ಹಾಗಾಗಿ, ಪಾದಗಳನ್ನು ಒತ್ತಿ ನೀರು ಪಡೆದುಕೊಳ್ಳುವ dispensaryಯ ನಮೂನೆ ತಯಾರಿಸಿ, ಅದನ್ನು ನಿರ್ವಿುಸಿಯೂಬಿಟ್ಟರು ಮಹೇಂದ್ರ. ಸಂಕಷ್ಟದ ಹೊತ್ತಲ್ಲಿ ರೂಪುಗೊಂಡ ಹೊಸ ಆವಿಷ್ಕಾರ ಎಷ್ಟೋ ಜನರ ಚಿಂತೆಯನ್ನು ದೂರ ಮಾಡಿದೆ. ಹೀಗಾಗಿ ಅನೇಕ ಕಂಪನಿಗಳು ಈ ವ್ಯವಸ್ಥೆ ರೂಪಿಸಿಕೊಳ್ಳಲು ಮುಂದಾಗಿವೆ. ಅಷ್ಟೇ ಅಲ್ಲ, ಹಳೆಯ ನೀರಿನ ಯಂತ್ರಗಳಿಗೂ ಹೊಸ ನಮೂನೆ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಹೇಂದ್ರ.

    ಆಗ್ರಾದಲ್ಲಿರುವ ನೇಹಾ ಭಾಟಿಯಾ 2012ರಲ್ಲಿ ಲಂಡನ್​ಗೆ ಹೋಗಿ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆ ಬಳಿಕ ಅಲ್ಲೇ ಒಂದು ವರ್ಷ ಕೆಲಸ ಮಾಡಿ, 2015ಕ್ಕೆ ಭಾರತಕ್ಕೆ ಮರಳಿದ ಅವರು ಅದರ ಮರುವರ್ಷ ಆರಂಭಿಸಿದ್ದು ಕೃಷಿಯನ್ನು! ನೋಯ್ಡಾದ ಮೂರು ಎಕರೆಯಲ್ಲಿ ತರಕಾರಿ, ಮುಜಫರ್​ನಗರದ 10 ಎಕರೆಯಲ್ಲಿ ಹಣ್ಣುಗಳು ಮತ್ತು ಭೀಮತಾಲ್​ನ ಎರಡು ಎಕರೆಯಲ್ಲಿ ಸಾವಯವ ಧಾನ್ಯ ಬೆಳೆಯುತ್ತ, ಮೂರು ಕಡೆ ಕೃಷಿ ಮಾಡುತ್ತಿದ್ದಾರೆ. ಜನರಿಗೆ ರಾಸಾಯನಿಕರಹಿತ, ಶುದ್ಧ, ಆರೋಗ್ಯಭರಿತ ಆಹಾರೋತ್ಪನ್ನಗಳು ತಲುಪಬೇಕು ಎಂಬ ಉದ್ದೇಶದಿಂದ ವೆಬ್​ಸೈಟ್​ನ್ನೂ ಆರಂಭಿಸಿ ಸಾವಯವ ತರಕಾರಿ, ಹಣ್ಣು, ಕೆಲ ಧಾನ್ಯಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಇತರ ರೈತರ ಸಾವಯವ ಕೃಷಿಉತ್ಪನ್ನಗಳಿಗೂ ಇದರಿಂದ ಮಾರುಕಟ್ಟೆ ಒದಗಿಸುತ್ತಿದ್ದಾರೆ. ಲಾಕ್​ಡೌನ್ ಅವಧಿಯಲ್ಲಂತೂ ಇವರ ಉತ್ಪನ್ನಗಳಿಗೆ ಭರ್ಜರಿ ಬೇಡಿಕೆ! ಪ್ರಸಕ್ತ ತಿಂಗಳಿಗೆ 500ಕ್ಕಿಂತಲೂ ಹೆಚ್ಚು ಆನ್​ಲೈನ್ ಆರ್ಡರ್​ಗಳನ್ನು ಸ್ವೀಕರಿಸುತ್ತಿರುವ ನೇಹಾ, ವಾರ್ಷಿಕ 60 ಲಕ್ಷ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ರೈತರಿಗೂ, ಕೃಷಿ ಆಸಕ್ತರಿಗೂ ಉಚಿತವಾಗಿ ತರಬೇತಿ ನೀಡುತ್ತ ಪ್ರೋತ್ಸಾಹಿಸುತ್ತಿದ್ದಾರೆ. ಉದ್ಯಮ ಕುಟುಂಬದ ಹಿನ್ನೆಲೆಯ 31 ವರ್ಷದ ನೇಹಾಗೂ ಮುಂಚೆ ಕೃಷಿಯ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಅದಕ್ಕಾಗಿ, ಏಳೆಂಟು ತಿಂಗಳ ಕಾಲ ಕೃಷಿ ತರಬೇತಿ ಪಡೆದು ಉತ್ತರಪ್ರದೇಶ ಮತ್ತು ಬಿಹಾರದ ಹಳ್ಳಿಗಳಲ್ಲಿ ಸಂಚರಿಸಿ, ಅಲ್ಲಿನ ರೈತರ ಸಮಸ್ಯೆ, ಸಾಧನೆಗಳನ್ನು ಅವಲೋಕಿಸಿದರು. ಆ ಬಳಿಕ ಯಶಸ್ಸಿನ ಮಾರ್ಗದಲ್ಲಿ ಸಾಗಿರುವ ಇವರು ಇತರ ನವೋದ್ಯಮಿಗಳಿಗೂ ಮಾರ್ಗದರ್ಶನ.

    ಹೊಸ ಬೆಳಕೊಂದು ಕಾಣಲು ಮೊದಲು ಮನೆಯ ಕಿಟಕಿ ತೆರೆಯ ಬೇಕು! ಆಗ ಕತ್ತಲು ಮಾಯವಾಗಿ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುತ್ತದೆ. ಅವಕಾಶ, ಸಾಧನೆಗಳ ವಿಷಯದಲ್ಲೂ ಅಷ್ಟೇ. ಮುಚ್ಚಿದ ಮನಸ್ಸಿನ ಬಾಗಿಲನ್ನು ತೆರೆದರೆ ಸಾಕು!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts