More

    ಮತದಾನದಿಂದ ಪ್ರಜಾಪ್ರಭುತ್ವ ಸದೃಢ


    ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಏ.26ರಂದು ಮತದಾನ ನಡೆಯಲಿದ್ದು, ಎಲ್ಲ ಮತದಾರರು ತಪ್ಪದೆ ಮತ ಚಲಾಯಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಹೇಳಿದರು.
    ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
    ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದರು.
    ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ ಮಾತನಾಡಿ, ಮತದಾನ ನಮ್ಮೆಲ್ಲರ ಕರ್ತವ್ಯ. ದೇಶದ ಸುಭದ್ರತೆಗಾಗಿ ಎಲ್ಲರೂ ಮತದಾನ ಮಾಡಬೇಕು. ಇತರರನ್ನು ಮತದಾನಕ್ಕೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
    ಒನಕೆ ಓಬವ್ವ ಕ್ರೀಡಾಂಗಣದಿಂದ ಪ್ರಾರಂಭವಾದ ಓಟ ಜೋಗಿಮಟ್ಟಿ ರಸ್ತೆ, ರಂಗಯ್ಯನಬಾಗಿಲು, ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಆನೆಬಾಗಿಲು, ಮಹಾತ್ಮ ಗಾಂಧಿ ವೃತ್ತ ಬಿ.ಡಿ.ರಸ್ತೆ ಮಾರ್ಗವಾಗಿ ಮದಕರಿ ನಾಯಕ ವೃತ್ತ, ಎಲ್‌ಐಸಿ ಮುಂಭಾಗದಿಂದ ಕ್ರೀಡಾಂಗಣಕ್ಕೆ ಮರಳಿತು.
    ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ತಲಾ ಆರು ಮಂದಿಗೆ ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಓಟದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಡಾ.ಜಗದೀಶ, ಡಾ.ವಿಜಯಲಕ್ಷ್ಮೀ, ಡಾ.ಉಮೇಶ್, ಡಾ.ಉದಯಭಾಸ್ಕರ್, ಡಾ.ಪ್ರಶಾಂಶ್, ಡಾ.ರೇಷ್ಮಾ, ಡಾ.ನಾಗರಾಜ್ ನಾಯ್ಕ, ಸ್ವಿಪ್ ಸಮಿತಿ ಜಿಲ್ಲಾ ಸಂಯೋಜಕಿ ಸುಷ್ಮಾರಾಣಿ, ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.
    *ಮತದಾನ ಜಾಗೃತಿ ಜಾಥಾ:

    ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಮತದಾನ ಜಾಗೃತಿ ಅಭಿಯಾನ ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕಿ ಸುಷ್ಮಾರಾಣಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ,ಪ್ರೊ.ಎಂ.ಎಸ್.ಪರಮೇಶ್,ಪ್ರೊ.ಎಲ್.ರಾಜಾನಾಯ್ಕ,ಜಿ.ಎಸ್.ನಾಗರಾಜ,ಕೆ.ಎಚ್.ಶಿವಕುಮಾರ್,ಡಾ. ನವೀನ್,ವಿಶ್ವನಾಥ್ ಮತ್ತಿತರರು ಇದ್ದರು.

    *ಪ್ರತಿಬಂಧಕಾಜ್ಞೆ ಜಾರಿ
    ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಏ.26ರಂದು ಮತದಾನ ಜರುಗಲಿದೆ. ಮತದಾರರಿಗೆ ಬೆದರಿಕೆ, ಆಸೆ ಆಮಿಷ ಒಡ್ಡುವುದನ್ನು ತಡೆಯಲು ಏ.24ರಂದು ಸಂಜೆ 6ರಿಂದ 26ರಂದು ಮತದಾನ ಮುಗಿಯುವವರೆಗೆ ಜಿಲ್ಲಾದ್ಯಂತ ಸಿಆರ್‌ಪಿಸಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ. ಮತದಾನ ಕೊನೆಗೊಳ್ಳುವ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಕೈಗೊಳ್ಳಬಹುದು. 5 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತಿಲ್ಲ ಎಂದು ತಿಳಿಸಿದ್ದಾರೆ.

    *ಕವಿಗೋಷ್ಠಿ
    ಚಿತ್ರದುರ್ಗದ ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತದಾನ ಜಾಗೃತಿ ಮೂಡಿಸುವ ಸ್ವರಚಿತ ಕವನಗಳ ವಾಚನ ಸ್ಪರ್ಧೆ ಏರ್ಪಡಿಸಿದೆ. ಯಾವುದೇ ರಾಜಕೀಯ ಪಕ್ಷಗಳ ಹೆಸರು, ಪ್ರಣಾಳಿಕೆ, ಅಭ್ಯರ್ಥಿ, ನಾಯಕರ ಕುರಿತಾಗಿ ಕವನಗಳಲ್ಲಿ ಉಲ್ಲೇಖಿಸುವಂತಿಲ್ಲ. ಆಸಕ್ತರು ತಮ್ಮ ಒಂದು ಸ್ವರಚಿತ ಕವನವನ್ನು ತಮ್ಮ ಸ್ವಪರಿಚಯದ ಮೂಲಕ ಕವನ ವಾಚಿಸಿದ ವಿಡಿಯೋವನ್ನು 9611432527, 9738845326ಕ್ಕೆ ಏ.22 ರೊಳಗೆ ವಾಟ್ಸ್‌ಆ್ಯಪ್‌ಗೆ ಕಳಿಸಬೇಕು. ಆಯ್ಕೆಯಾದ 20 ಕವಿಗಳ ಕವನಗಳಿಗೆ ಚಿತ್ರದುರ್ಗದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಕವನ ವಾಚನಕ್ಕೆ ಅವಕಾಶ ನೀಡಿ ಸನ್ಮಾನಿಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ನಂಜುಂಡೇಶ್ವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts