More

    ಮಣಿಪುರದ ಸಿಎಂ ರಾಜೀನಾಮೆಗೆ ಜೈಭೀಮ್ ಬ್ರಿಗೇಡ್ ಒತ್ತಾಯ

    ಹಾಸನ: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜೈಭೀಮ್ ಬ್ರಿಗೇಡ್ ಸಂಘಟನೆ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಗಲಭೆ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಆಗ್ರಹಿಸಲಾಯಿತು.
    ಮಣಿಪುರದಲ್ಲಿ ಮೇ 4ರಂದು ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿ ನಾನಾ ರೀತಿಯ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತಹ ಅಮಾನುಷ್ಯ ಕೃತ್ಯವಾಗಿದೆ. ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಮಣಿಪುರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
    ಕ್ರೈಸ್ತ ಸಮೂದಾಯದ ಹಾಗೂ ಕುಕಿ ಜನಾಂಗದ ಮತ್ತು ಹಿಂದೂ ಸಮುದಾಯದ ಮೈತೇಯಿ ಸಮುದಾಯಗಳ ಮಧ್ಯೆ ಕಳೆದ ಮೂರು ತಿಂಗಳಿಂದಲೂ ಜನಾಂಗೀಯ ಘರ್ಷಣೆಯುಂಟಾಗಿ ಮಕ್ಕಳು, ಮಹಿಳೆಯರು, ವೃದ್ಧರಾಗಿಯಾಗಿ ಸುಮಾರು 150 ಜನ ಬಲಿಯಾಗಿದ್ದಾರೆ. ಕುಕಿ ಸಮುದಾಯದ ಸಾವಿರರಾರು ಮನೆಗಳನ್ನು, ಚರ್ಚುಗಳನ್ನು ಸುಟ್ಟು ಹಾಕಲಾಗಿದೆ. ಇತ್ತೀಚೆಗೆ ಮೈತೇಯಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಬಗ್ಗೆ ಹೈಕೋರ್ಟ್ ತೀರ್ಪು ಬಂದ ಮೇಲೆ ಹಿಂಸಾಚಾರವೂ ಹೆಚ್ಚಾಯಿತು ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಬಲಿಷ್ಠರಾದ ಮತ್ತು ಜನ ಸಂಖ್ಯೆಯಲ್ಲಿ ಹೆಚ್ಚಾಗಿರುವ ಮೈತೇಯಿ ಸಮಾಜಕ್ಕೆ ಮೀಸಲಾತಿ ಬಲ ಸಿಕ್ಕಿರುವುದು ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎಂದು ಹೇಳಿದರು.
    ಮೈತೇಯಿ ಸಮುದಾಯದ ಪರವಾಗಿ ಪಕ್ಷಪಾತದಿಂದ ಮುಖ್ಯಮಂತ್ರಿ ಬಿರೇನ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಅತ್ಯಾಚಾರ, ಕೊಲೆಗಳು ನಡೆದಿಲ್ಲವೇ? ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವುದು ಖಂಡನೀಯವಾಗಿದೆ. ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಭಾರತ ದೇಶವೂ ಬಹುಭಾಷೆ, ಬಹುತ್ವ, ಬಹು ಸಂಸ್ಕೃತಿಯನ್ನು ಹೊಂದಿದ ದೇಶ. ಭಾರತದಲ್ಲಿರುವ 140 ಕೋಟಿ ಜನರ ಪ್ರಾಣ, ಆಸ್ತಿ ಮಾನ ರಕ್ಷಣೆ ಮಾಡುವುದು ಸಂವಿಧಾನದ ಆಶಯವಾಗಿದೆ ಎಂದರು.
    ಪ್ರತಿಭಟನೆಯಲ್ಲಿ ಜೈ ಬೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಡಿಎಸ್‌ಎಸ್ ನಾಯಕರಾದ ಕೃಷ್ಣ, ದಲಿತ ಮುಖಂಡರಾದ ಕೃಷ್ಣದಾಸ್, ಪ್ರಸಾದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಅರುಣ್, ಸ್ವಾಮಿ, ಶಂಕರ್, ಸುಬ್ರಮಣ್ಯ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts