More

    ಮಕ್ಕಳ ಬಳಿಗೇ ಶಾಲೆ, ಮಿಣ್ಣಾಪುರದಲ್ಲಿ ಮನೆಯಲ್ಲೇ ತರಗತಿ, ಸೌಂದರ್ಯ ಅಂಬಿಕಾ ಶಿಕ್ಷಣ ಸಮೂಹ ಸಂಸ್ಥೆಯ ಉಪಕ್ರಮ

    ಲಕ್ಷ್ಮೀಕಾಂತ್ ತ್ಯಾಮಗೊಂಡ್ಲು: ಕಳೆದ ಎರಡೂವರೆ ವರ್ಷದಿಂದ ಶಾಲೆ ತೆರೆಯದೆ ಮಕ್ಕಳು ಶಾಲಾ ವಾತಾವರಣ ತಪ್ಪಿಸಿಕೊಳ್ಳುತ್ತಿದ್ದಾರೆ. ಜತೆಗೆ ಕಲಿತಿದ್ದ ಪಾಠಗಳನ್ನೂ ಮರೆಯುವ ಹಂತ ತಲುಪಿದ್ದಾರೆ. ಅವಕಾಶವಿರುವವರು ಆನ್‌ಲೈನ್ ಪಾಠಗಳನ್ನು ಕೇಳುತ್ತಾ ಏಕತಾನತೆ ಮೈಗೂಡಿಸಿಕೊಂಡಿದ್ದಾರೆ. ಜತೆಗೆ ಸತತವಾಗಿ ಮೊಬೈಲ್ ಬಳಸಿ ಕಣ್ಣಿನ ತೊಂದರೆಯನ್ನೂ ಅನುಭವಿಸುತ್ತಿದ್ದಾರೆ.

    ಇದು, ಎಲ್ಲ ಇದ್ದು ವಿದ್ಯೆ ಕಲಿಯುವವರ ಪಾಡಾದರೆ, ಇನ್ನೂ ಕೆಲವು ಕಡೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಯಾವುದೇ ಪಾಠ ಕೇಳಿಸಿಕೊಳ್ಳಲಾಗದೆ, ಮನೆಯಲ್ಲೂ ಹೇಳಿಕೊಡುವವರು ಇಲ್ಲವಾಗಿ ಕಲಿಯುವ ಆಸಕ್ತಿ ಇದ್ದೂ, ಅವಕಾಶ ವಂಚಿತರಾಗಿರುವ ಮಕ್ಕಳು ಹೆಚ್ಚಿದ್ದಾರೆ.

    ಇದನ್ನು ಗಮನಿಸಿದ ಬೇಗೂರು ಬಳಿಯ ತ್ಯಾಮಗೊಂಡ್ಲು ಮುಖ್ಯರಸ್ತೆಯಲ್ಲಿರುವ ಸೌಂದರ್ಯ ಅಂಬಿಕಾ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಸೌಂದರ್ಯ ಭರತ್, ಮಿಣ್ಣಾಪುರಕ್ಕೆ ತೆರಳಿ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕರನ್ನು ಒಗ್ಗೂಡಿಸಿಕೊಂಡು ಪ್ರೀ ನರ್ಸರಿಯಿಂದ 10ನೇ ತರಗತಿಯ 25 ಮಕ್ಕಳಿಗೆ ಉಚಿತವಾಗಿ ಮನೆ ಬಾಗಿಲಲ್ಲೇ ತರಗತಿ ಮಾಡುತ್ತಿದ್ದಾರೆ. ಶಾಲೆಯಿಂದ ವಿಶೇಷವಾಗಿ ವರ್ಕ್‌ಶೀಟ್ ತಯಾರಿಸಿಕೊಂಡು, ಗ್ರಾಮದ ಡೇರಿ ಸಭಾಂಗಣದಲ್ಲಿ ವಾರದ ಐದು ದಿನ ಪದವಿ ವಿದ್ಯಾರ್ಥಿಗಳು ಮತ್ತು ಪ್ರತಿ ಶನಿವಾರ ಶಾಲೆಯ ಶಿಕ್ಷಕರೇ ಬಂದು ಪಾಠ ಬೋಧಿಸುತ್ತಿದ್ದಾರೆ.

    1ನೇ ತರಗತಿ ಮಕ್ಕಳಿಗೆ ಅನುಕೂಲ: ಎರಡು ವರ್ಷದಿಂದ ಒಂದನೇ ತರಗತಿಗೆ ಸೇರಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಿಂದ ಹೆಚ್ಚು ಅನುಕೂಲವಾಗುತ್ತಿದೆ, ಮನೆಯಲ್ಲಿರುವವರು ಹೇಳಿಕೊಟ್ಟರೆ ಅಸಡ್ಡೆ ತೋರುತ್ತಾರೆ. ಶಿಕ್ಷಕರು ಹಾಗೂ ಶಾಲಾ ವಾತಾವರಣದಲ್ಲಿ ಇತರ ಸಹಪಾಠಿಗಳ ಜತೆಯಲ್ಲಿ ಪಾಠ ಕಲಿತರೆ ಮಕ್ಕಳ ಬುದ್ಧಿಮತ್ತೆ ಹೆಚ್ಚಾಗುತ್ತದೆ. ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂಬುದು ಸೌಂದರ್ಯ ಸಂಸ್ಥೆಯ ನಿರ್ದೇಶಕಿ ಶಾರದಾ ಅವರ ಅಭಿಪ್ರಾಯ.

    ಮಿಣ್ಣಾಪುರದಲ್ಲಿ ಇಂಟರ್‌ನೆಟ್ ಸಮಸ್ಯೆಯಿದೆ. ಆನ್‌ಲೈನ್ ಪಾಠ ಕೇಳುವುದಕ್ಕೆ ಆಗುವುದಿಲ್ಲ. ಮೂರು ವಾರದಿಂದ ಸೌಂದರ್ಯ ಶಾಲೆಯ ಶಿಕ್ಷಕರು ಗ್ರಾಮಕ್ಕೆ ಬಂದು ಪಾಠ ಮಾಡುತ್ತಿದ್ದಾರೆ. ಇದರಿಂದ ಅನುಕೂಲವಾಗಿದೆ. ಎರಡು ವರ್ಷದಿಂದ ಪಠ್ಯ ಕಲಿಯದೆ ಎಲ್ಲ ಮರೆತುಹೋಗಿತ್ತು. ಈಗ ಅದನ್ನೆಲ್ಲ ಮತ್ತೆ ಪುನರ್ಮನನ ಮಾಡಲು ಸಹಾಯವಾಗುತ್ತಿದೆ.
    ಮೇಘನಾ, ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ

    ಸಿಎಸ್‌ಆರ್ ಅಡಿ ಸೌಲಭ್ಯ: ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಟ್ಟಣದಲ್ಲಿರುವ ಮಕ್ಕಳಿಗೆ ಎಲ್ಲ ಅವಕಾಶ ಸಿಗುವುದರಿಂದ ಅವರ ಕಲಿಕಾ ಮಟ್ಟ ಉತ್ತಮವಾಗುತ್ತದೆ. ಅದರೆ ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕಾ ಸಾಮರ್ಥ್ಯ ಆನ್‌ಲೈನ್ ಕಲಿಕೆಯಿಂದ ಹೆಚ್ಚಿಸಲು ಸಾಧ್ಯವಿಲ್ಲ. ಆದ್ದರಿಂದ, ಸಾಮಾಜಿಕ ಜವಾಬ್ದಾರಿ ಅಡಿ ಪೈಲಟ್ ಯೋಜನೆಯಾಗಿ ಮಿಣ್ಣಾಪುರವನ್ನು ಆಯ್ದುಕೊಂಡು ತರಗತಿಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಸೌಂದರ್ಯ ಅಂಬಿಕಾ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸೌಂದರ್ಯ ಭರತ್ ಹೇಳಿದರು.

    ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಸುತ್ತಮುತ್ತಲ ಗ್ರಾಮಗಳಿಗೆ ವಿಸ್ತರಿಸುವ ಆಲೋಚನೆ ಇದೆ. ಈ ತರಗತಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳಲ್ಲದೆ, ಬೇರಾವುದೇ ಶಾಲೆಯ ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ನಿರ್ಬಂಧವಿಲ್ಲ. ಪಾಠದ ಸಮಯದಲ್ಲಿ ಕರೊನಾ ಮಾರ್ಗಸೂಚಿ ಪಾಲಿಸಲಾಗುತ್ತದೆ. ಸರ್ಕಾರದ ಕರೊನಾ ಆದೇಶಗಳನ್ನು ತಪ್ಪದೇ ಪಾಲಿಸಲಾಗುತ್ತಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts