More

    ಭ್ರಷ್ಟಾಚಾರ ನಿಲ್ಲಿಸುವಂತೆ ಆಗ್ರಹ

    ಕಾರವಾರ: ಬಿಲ್ ಪಾವತಿಯಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಭ್ರಷ್ಟಾಚಾರ ನಿಲ್ಲಿಸುವಂತೆ ಆಗ್ರಹಿಸಿ ಕಾರವಾರ ನೋಂದಾಯಿತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಅಂಗಿ, ಬನಿಯನ್ ತೆಗೆದು ಗಾಂಧೀಜಿ ಭಾವಚಿತ್ರ, ತಮ್ಮ ಬೇಡಿಕೆಗಳ ಫಲಕ ಹಿಡಿದ ಗುತ್ತಿಗೆದಾರರು ಮಿತ್ರ ಸಮಾಜದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಟ್ಯಾಗೋರ್ ಕಡಲ ತೀರಕ್ಕೆ ತೆರಳಿ ಸಮುದ್ರದಲ್ಲಿ ಅಲ್ಪ ಮುಳುಗಿ ‘ಸೇವ್ ಕಾಂಟ್ರಾಕ್ಟರ್ರ್ಸ್’ ಎಂಬ ಫಲಕ ಪ್ರದರ್ಶನ ಮಾಡಿದರು. ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಅವರ ಮೂಲಕ ಸಲ್ಲಿಸಿದರು.

    ಸಂಘಟನೆಯ ಅಧ್ಯಕ್ಷ ಮಾಧವ ನಾಯ್ಕ, ಸುಮಂತ ಅಸ್ನೋಟಿಕರ್, ಪ್ರಕಾಶ ಗಾಂವಕರ್, ಉದಯ ನಾಯ್ಕ, ವಿಜಯ ದೇಸಾಯಿ, ಶಶಿಕಾಂತ ನಾಯ್ಕ, ದತ್ತಾ ಎಂ.ಗುನಗಿ, ಇತರರು ಇದ್ದರು.

    ಪ್ರಮುಖ ಬೇಡಿಕೆಗಳು: ಈಗಾಗಲೇ ಚಾಲ್ತಿಯಲ್ಲಿರುವ ಹಾಗೂ ಕಾರ್ಯಾದೇಶವಾಗಿರುವ ಕಾಮಗಾರಿಗಳಿಗೆ ಹಳೆಯ ಬೆಲೆಯಂತೆ ರಾಜಧನ ಪಡೆಯಬೇಕು. ಸರ್ಕಾರದ ನಿಗದಿತ ದರವಾರು ಪಟ್ಟಿ (ಎಸ್.ಆರ್.ರೇಟ್) ಪರಿಷ್ಕರಿಸಬೇಕು. ಕರಾವಳಿ ಪ್ರದೇಶ ಹಾಗೂ ಮಲೆನಾಡಿಗೆ ಪ್ರತ್ಯೇಕ ಬೆಲೆ ನಿಗದಿ ಮಾಡಬೇಕು. ಕಾಮಗಾರಿಗಳಿಗೆ ಮೂಲವಸ್ತುಗಳಾದ ಮಣ್ಣು, ಕಲ್ಲು, ಮರಳು, ಜಲ್ಲಿ, ಎಂ ಸ್ಯಾಂಡ್ ಮುಂತಾದವುಗಳ ಸಾಗಣೆಗೆ ಶೀಘ್ರ ಅನುಮತಿ ನೀಡಬೇಕು. ಮಳೆಗಾಲ ಹೊರತುಪಡಿಸಿ ಕಾಮಗಾರಿ ಅವಧಿ ನಿಗದಿ ಮಾಡಬೇಕು. ಎರಡು ಅಥವಾ ಅದಕ್ಕಿಂತ ಹೆಚ್ಚು ಕಾಮಗಾರಿಗಳನ್ನು ಸೇರಿಸಿ ಕರೆಯುವ ಪ್ಯಾಕೇಜ್ ಟೆಂಡರ್​ನ್ನು ಕರೆಯುವುದನ್ನು ನಿಲ್ಲಿಸಬೇಕು. ಕಾಮಗಾರಿಗಳಿಗೆ ಅತಿ ಕಡಿಮೆ ಮೊತ್ತ ನಮೂದಿಸಿದಲ್ಲಿ ವ್ಯತ್ಯಾಸದ ಮೊತ್ತ ತುಂಬುವುದನ್ನು ಕೈಬಿಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts