More

    ಭ್ರಷ್ಟಾಚಾರ ಕರೊನಾಗಿಂತ ಮಾರಕ

    ಕೋಲಾರ: ಭ್ರಷ್ಟಾಚಾರ ಕರೊನಾಗಿಂತಲೂ ಮಾರಕ. ಇದಕ್ಕೆ ಅಧಿಕಾರಿಗಳು ಆಸ್ಪದ ನೀಡಬೇಡಿ, ಜಿಲ್ಲೆಯಲ್ಲಿನ ಉರ್ದು ಶಾಲೆಗಳಲ್ಲಿ ಕೊಠಡಿ, ಮೂಲಸೌಲಭ್ಯ, ಶಿಕ್ಷಕರ ಕೊರತೆ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದರು.

    ನಗರದ ಟಮಕದಲ್ಲಿನ ಮೌಲಾನಾ ಭವನದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತರ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರ ಆಯೋಗದ ಹುದ್ದೆ ಯಾವುದೇ ಪಕ್ಷ ಅಥವಾ ಗುಂಪಿಗೆ ಸೇರಿದ್ದಲ್ಲ. ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಯೋಗ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದರು.

    ಜಿಲ್ಲೆಯಲ್ಲಿ 1ರಿಂದ 8ರವರೆಗೆ ಉರ್ದು ಶಾಲೆಯಿದೆ, ಹೈಸ್ಕೂಲ್ ಇಲ್ಲದೆ ಮಕ್ಕಳು ಅರ್ಧಕ್ಕೆ ಶಾಲೆ ಬಿಡುತ್ತಿದ್ದಾರೆ. ಕ್ಯಾಲನೂರು, ಸುಂದರಪಾಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಉರ್ದು ಶಿಕ್ಷಕರಿಲ್ಲವೆಂದು ಶಿಕ್ಷಣ ಇಲಾಖೆಯ ಇಸಿಒ ಮಹಮದ್ ಸಿರಾಜುದ್ದೀನ್, ಶಿಕ್ಷಕ ಅಯಾಜ್ ಅಹಮದ್ ದೂರಿದಾಗ ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಗಮನಕ್ಕೆ ತರುವುದಾಗಿ ತಿಳಿಸಿದರು.

    ಸ್ಮಶಾನ ಗಂಭೀರ ಸಮಸ್ಯೆ, ಸರ್ಕಾರ ನಿರ್ಮಿಸುವ ಬಡಾವಣೆಗಳಲ್ಲಿ ಎಲ್ಲ ಧರ್ಮೀಯರಿಗೆ ಕಡ್ಡಾಯವಾಗಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

    ಶಾಂತಿ, ಸೌಹಾರ್ದತೆ ಇದ್ದರೆ ಅಭಿವೃದ್ಧಿ ಸಾಧ್ಯ. ಜಿಲ್ಲೆಯಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ, ಡ್ರಗ್ಸ್ ದಂಧೆಗೆ ಅವಕಾಶ ನೀಡಬಾರದು, ಅಧಿಕಾರಿಗಳು ಜನ ಸಂಪರ್ಕ ಸಭೆ ನಡೆಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಸೂಚಿಸಿದರು.

    ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಮೆಹಬೂಬ್‌ಸಾಬ್ ಮಾತನಾಡಿ, ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ಜ.15ರವರೆಗೆ ವಿಸ್ತರಣೆಯಾಗಿದ್ದು, ಕರೊನಾ ಹಿನ್ನೆಲೆಯಲ್ಲಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ. ಈಗಾಗಲೆ 11.5 ಲಕ್ಷ ಅರ್ಜಿಗಳು ಬಂದಿವೆ ಎಂದರು.

    ಅಹವಾಲು: ನಗರದ ರಹಮತ್‌ಗರದಲ್ಲಿ 2016-17ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ ಮಂಜೂರಾದ ಉರ್ದು ಶಾಲೆ ಕೊಠಡಿ ಅರ್ಧಕ್ಕೆ ನಿಂತಿರುವ ಬಗ್ಗೆ ಶಿಕ್ಷಕ ಸೈಯದ್, ಷಹೀನ್‌ಷಾ ನಗರದಲ್ಲಿ ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ಬಗ್ಗೆ ನವೀದ್, ಅಲ್ಪಸಂಖ್ಯಾತರಿರುವ ಭಾಗದಲ್ಲಿ 2000 ಜನಸಂಖ್ಯೆಗೊಂದು ನ್ಯಾಯಬೆಲೆ ಅಂಗಡಿ ಆರಂಭಿಸಬೇಕೆಂದು ಮುಳಬಾಗಿಲಿನ ವಕೀಲ ಮೆಹಬೂಬ್ ಪಾಷಾ, ವಕ್ಫ್ ಆಸ್ತಿ ಒತ್ತುವರಿ ತೆರವು, ಆರ್‌ಒ ಘಟಕಕ್ಕೆ ನಗರಸಭೆ ಸದಸ್ಯ ಅಹಮದ್ ಜಬೀವುಲ್ಲಾ ಆಗ್ರಹಿಸಿದರು.

    ಮಾಲೂರಿನ ಅಬ್ಬೇನಹಳ್ಳಿಯಲ್ಲಿ ಸ್ಮಶಾನಕ್ಕೆ ಜಾಗ, ಇಲಾಖೆ ಮಾಹಿತಿ ಕೇಂದ್ರಕ್ಕೆ ತಾಲೂಕುಗಳಲ್ಲಿ ಕೊಠಡಿ, ಬೇತಮಂಗಲ ಉರ್ದು ಶಾಲೆಯಲ್ಲಿ ಶೌಚಗೃಹದ ಬೇಡಿಕೆ ವ್ಯಕ್ತವಾಯಿತು.ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ನಿಸಾರ್ ಅಹಮದ್, ವಕ್ಫ್ ಬೊರ್ಡ್ ಅಧ್ಯಕ್ಷ ಜಾಮಿಲ್, ಮುಖಂಡರಾದ ಬೆಗ್ಲಿ ಸಿರಾಜ್, ಸೈಯದ್ ಹಾಶಂ, ಅಸ್ಲಂಪಾಷಾ, ಶೇಖ್ ಶಫೀವುಲ್ಲಾ, ಸಿಖ್ ಮುಖಂಡ ಜಸ್ಮಿನ್ ಸಿಂಗ್, ಜೈನ್ ಸಮುದಾಯದ ಜವೇರಿಲಾಲ್, ಇಲಾಖೆಯ ಜಿಲ್ಲಾ ಅಧಿಕಾರಿ ಮುರಳಿ ಇತರರಿದ್ದರು.

    ಮೊದಲೇ ಮಾಹಿತಿ ನೀಡಿಲ್ಲ: ಆಯೋಗದ ಅಧ್ಯಕ್ಷರ ಭೇಟಿ ಬಗ್ಗೆ ಕ್ರೈಸ್ತ ಸಮುದಾಯಕ್ಕೆ ಮುಂಚಿತವಾಗಿ ಮಾಹಿತಿ ನೀಡಿಲ್ಲವೆಂದು ಮುಖಂಡರಾದ ಸದಾನಂದ, ರೂಪ್‌ಕುಮಾರ್ ಆಕ್ಷೇಪಿಸಿದರಲ್ಲದೆ ಏಳೆಂಟು ಶತಮಾನಗಳ ಇತಿಹಾಸವಿರುವ ನಝ್ರತ್ ಎಂಬ ಹಳ್ಳಿಯಲ್ಲಿ ಕ್ರೈಸ್ತ ಸಮುದಾಯದ ಸ್ಮಶಾನದ ಜಾಗ ಒತ್ತುವರಿ ತೆರವು, ನಗರದಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts