More

    ಭ್ರಷ್ಟಾಚಾರಮುಕ್ತ ಜಿಲ್ಲೆಗಾಗಿ ಮಾಡಿ ಸಂಕಲ್ಪ -ಅಧಿಕಾರಿಗಳಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿವಿಮಾತು -ದಾವಣಗೆರೆ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ 

    ದಾವಣಗೆರೆ: ದಾವಣಗೆರೆಯನ್ನು ಭ್ರಷ್ಟಾಚಾರಮುಕ್ತ ಜಿಲ್ಲೆಯಾಗಿಸಿ. ಶೇ.40ರ ಭ್ರಷ್ಟಾಚಾರದ ಕಳಂಕ ತರಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
    ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯಿತಿಯ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನಿಮ್ಮಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಅದಕ್ಕೆ ಕೆಲವು ರಾಜಕಾರಣಿಗಳು ಕೈಜೋಡಿಸುತ್ತಾರೆ. ಇದೇ ಕಾರಣದಿಂದಾಗಿ ಹಿಂದಿನ ಸರ್ಕಾರ ಸೋಲುಂಡಿದೆ. ನಮ್ಮದು ಭ್ರಷ್ಟಾಚಾರಮುಕ್ತ ಸರ್ಕಾರವಾಗಿದ್ದು ಅದರಂತೆ ನಡೆದುಕೊಳ್ಳಿ ಎಂದು ತಿಳಿಸಿದರು.
    ಕಾಂಗ್ರೆಸ್ ಆಡಳಿತವಿದ್ದಾಗ ಜಿಲ್ಲೆ, ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮೊದಲೆರಡು ಸ್ಥಾನದಲ್ಲಿತ್ತು. ಇದಕ್ಕಾಗಿ ಅಧಿಕಾರಿಗಳು ಕೈಜೋಡಿಸಬೇಕು. ಐದೂ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಸಹಕರಿಸಬೇಕು. ಧೈರ್ಯದಿಂದ ಕೆಲಸ ಮಾಡಿ, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ನಾವಿದ್ದೇವೆ ಎಂದು ಹೇಳಿದರು.

    ಬಿಜೆಪಿ ಸರ್ಕಾರ ಕೈಬಿಟ್ಟ ಯೋಜನೆಗಳ ಬಗ್ಗೆ ಸಚಿವರು ಕಿಡಿ ಕಾರಿದರು. ಕೊಂಡಜ್ಜಿ ಕೆರೆ ಅಭಿವೃದ್ಧಿ, 28 ಕೋಟಿ ರೂ. ಮೊತ್ತದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ ನೀಡಿದ್ದ ಹಿಂದಿನ ಸರ್ಕಾರದ ದಾಖಲೆಗಳನ್ನು ತನ್ನಿ. ಅದನ್ನು ಜಾರಿ ಮಾಡೋಣ ಎಂದರು. ಜಿಲ್ಲೆಯಲ್ಲಿ 22 ಕೆರೆಗಳ ಯೋಜನೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
    ಜಿಲ್ಲೆಯ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬಾಡಿಗೆ ಕಟ್ಟಡದಲ್ಲಿಯಾದರೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದ ಜತೆ ಚರ್ಚಿಸುವುದಾಗಿಯೂ ಸಚಿವರು ತಿಳಿಸಿದರು. ಶಾಲಾ ಕೊಠಡಿಗಳ ದುರಸ್ತಿ ವಿವರ ನೀಡಿದಲ್ಲಿ ಹೆಚ್ಚುವರಿ ಅನುದಾನ ಕೊಡಿಸಲಾಗುವುದು ಎಂದರು.

    * ಶೇ.36ರಷ್ಟು ಬಿತ್ತನೆ
    ಜನವರಿಯಿಂದ ಈವರೆಗೆ ವಾಡಿಕೆ ಮಳೆ ಪೈಕಿ ಶೇ.22ರಷ್ಟು ಕೊರತೆಯಾಗಿದೆ. ಜುಲೈನಲ್ಲಿ ಶೇ.45ರಷ್ಟು ಮಳೆಯಾಗಿದ್ದು, 67 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ (ಶೇ.36ರಷ್ಟು) ಬಿತ್ತನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
    ರೈತರಿಗೆ ಬೀಜ-ಗೊಬ್ಬರದ ಕೊರತೆಯಾಗದಂತೆಯೂ, ಕಳಪೆ ಕುರಿತಂತೆ ದೂರು ಬಾರದಂತೆಯೂ ಗಮನ ಹರಿಸಬೇಕು. ಹಳೆ ಕಾಲದ ವ್ಯವಸ್ಥೆ ಬಿಟ್ಟು ಹೊಸ ತಾಂತ್ರಿಕ ಪ್ರಯೋಗಗಳನ್ನು ಮಾಡಿ, ಕ್ಷೇತ್ರಗಳಿಗೆ ಸಂಚರಿಸಿ ಎಂದು ಸಚಿವರು ಸಲಹೆ ನೀಡಿದರು. ಮಳೆಗಾಲ ಆರಂಭವಾದ್ದರಿಂದ ಕುಡಿವ ನೀರಿಗೆ ಆದ್ಯತೆ ನೀಡಿ. ಗ್ರಾಮೀಣ ಪ್ರದೇಶದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿ ಎಂದರು.
    * ಡಯಾಲಿಸಿಸ್ ನಿರ್ವಹಣೆಗೆ ಬದಲಿ ಸಿಬ್ಬಂದಿ
    ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 13 ಡಯಾಲಿಸಿಸ್ ಯಂತ್ರಗಳ ಪೈಕಿ 7 ಕಾರ್ಯನಿರತವಾಗಿವೆ. ಉಳಿದವು ದುರಸ್ತಿಯಲ್ಲಿವೆ. ತಿಂಗಳಿಗೆ 182 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಯಂತ್ರಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇದೆ. ಎಂಆರ್‌ಐ ಸ್ಕಾೃನ್ ಯಂತ್ರ ತರಿಸಲು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ. ಸುಭಾಷ್ ಹೇಳಿದರು.
    ಬಾಪೂಜಿ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಡಯಾಲಿಸಿಸ್ ಮಾಡುತ್ತಿದ್ದೇವೆ. ಅಲ್ಲದೆ ಸಿಎಂಗೆ ಮನವರಿಕೆ ಮಾಡಿ ಡಯಾಲಿಸಿಸ್ ಯಂತ್ರಗಳನ್ನು ಕೊಡಿಸಿದ್ದೇವೆ, ಅವನ್ನು ಸರಿಯಾಗಿ ಬಳಸಿಕೊಳ್ಳಿ. ಬಾಪೂಜಿ ಆಸ್ಪತ್ರೆಯಿಂದ ತಾಂತ್ರಿಕ ಪರಿಣತರು, ನರ್ಸಿಂಗ್ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
    * ಖಾಸಗಿ ಆಂಬುಲೆನ್ಸ್‌ಗಳ ಹಾವಳಿ
    ಜಿಲ್ಲಾಸ್ಪತ್ರೆಗೆ ಶಾಸಕರೂ ಸೇರಿ ಸರ್ಕಾರ ನೀಡಿದ ಆಂಬುಲೆನ್ಸ್‌ಗಳು ಧೂಳೆದ್ದು ಹೋಗಿವೆ. ಆದರೆ 5 ಸಾವಿರ ರೂ.ನಿಂದ 16 ಸಾವಿರ ರೂ.ವರೆಗೆ ಸುಲಿಗೆ ಮಾಡು ಖಾಸಗಿ ಆಂಬುಲೆನ್ಸ್‌ನವರಿಗೆ ಆಸ್ಪತ್ರೆ ಸಿಬ್ಬಂದಿ ಕೂಡ ಇವರಿಗೆ ಸಹಕಾರ ನೀಡುತ್ತಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳು ನಿಲ್ಲದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಎಸ್ಪಿ ಡಾ. ಅರುಣ್ ಅವರಿಗೆ ಸೂಚನೆ ನೀಡಿದರು.
    ಸಿಜಿ ಆಸ್ಪತ್ರೆಯಲ್ಲಿ ಬ್ಯಾಂಡೇಜ್‌ಗೆ 100 ರೂ. ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ. ಬೇರೆ ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಯೇ ಬಂದು ರೆಫರೆಲ್ ಪಡೆಯಬೇಕೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಅಂಗನವಾಡಿ ಮಕ್ಕಳಿಗೆ ನೀಡುವ ಧಾನ್ಯಗಳ ಪ್ರಮಾಣ ಕಡಿಮೆಯಾಗಿದೆ ಎಂದು ದೂರಿದರು.
    ಮಾಯಕೊಂಡ ಭಾಗದಲ್ಲಿ ಪಶುಗಳಿಗೆ ಚರ್ಮಗಂಟು ರೋಗವಿದ್ದು ಅಧಿಕಾರಿಗಳು ಕ್ರಮ ವಹಿಸಬೇಕು. ನರೇಗಾ ಯೋಜನೆಯಡಿ ದಾವಣಗೆರೆ ತಾಲೂಕಿನಲ್ಲಿಯೂ ಜಗಳೂರು ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಹೀಗಾಗಿ ಕನಿಷ್ಟ ಅವಧಿವರೆಗೆ ಅಲ್ಲಿನ ಪಿಡಿಒಗಳನ್ನು ಇಲ್ಲಿಗೆ ವರ್ಗಾವಣೆ ಮಾಡಿ ಎಂದರು.
    * ಕರೊನಾ ವೇಳೆ ದುರ್ಬಳಕೆ
    ಕರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರ ಬಗ್ಗೆ ನನಗೆ ಮಾಹಿತಿ ಇದೆ ಎಂದು ಕಿಡಿ ಕಾರಿದ ಸಚಿವರು, ಕರೊನಾ ನಿಯಂತ್ರಣ ವಿಚಾರದಲ್ಲಿ ಹಿಂದಿನ ಜಿಲ್ಲಾಡಳಿತ ಕೂಡ ವಿಫಲವಾಯಿತು ಎಂದು ದೂರಿದರು.
    ಕರೊನಾ ಕಾಲದಲ್ಲಿ ಬಡವರು ಪಾತಾಳಕ್ಕೆ ಹೋದರೆ ಶ್ರೀಮಂತರು ಹೆಚ್ಚಿನ ಶ್ರೀಮಂತರಾದರು. ಲಸಿಕೆ, ಆಕ್ಸಿಜನ್ ಪ್ಲಾಂಟ್ ಕತೆ ಏನಾದವು ಎಂಬುದು ನನಗೆ ತಿಳಿದಿದೆ. ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದಿರಿ. ಟ್ರಸ್ಟ್ ಹೆಸರಲ್ಲಿ ದುರ್ಬಳಕೆ ಮಾಡಿದಿರಿ.
    300 ರೂ. ಬೆಲೆಯ ರೆಮ್‌ಡಿಸಿವರ್ ಮಾತ್ರೆಯನ್ನು 5ರಿಂದ 6 ಸಾವಿರ ರೂ.ಗೆ ಮಾರಿದಿರಿ. ಬೇಡಿಕೆ ಬಂದಾಗ ತರಿಸುವಂತೆ ಹೇಳಿದಾಗ ಅದನ್ನು ನಿಲ್ಲಿಸಿಬಿಟ್ಟಿರಿ. ಜನರಿಂದ ರೊಕ್ಕ ಹೊಡೆದವರು ಉಳಿತಾರೇನ್ರಿ.. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    * ಔಷಧಕ್ಕೆ ಚೀಟಿ
    ಸಂತೆಬೆನ್ನೂರು ಪಿಎಚ್‌ಸಿಯಲ್ಲಿ ಔಷಧವನ್ನು ಹೊರಗಡೆ ಬರೆದುಕೊಡುವುದನ್ನು ಕಣ್ಣಾರೆ ಕಂಡಿದ್ದಾಗಿ ಶಾಸಕ ಬಸವರಾಜ್ ಶಿವಗಂಗಾ ಪ್ರಸ್ತಾಪಿಸಿ ಅಗತ್ಯ ಔಷಧ ಖರೀದಿಸಬೇಕೆಂದರು. ಚನ್ನಗಿರಿ ಭಾಗದಲ್ಲಿ ಮಲಿನ ನೀರು ಸರಬರಾಜಾಗುತ್ತಿದ್ದು ಶುದ್ಧೀಕರಣ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದರೆ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಬಲ ಬರದು ಎಂದೂ ಹೇಳಿದರು.
    ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಪಂ ಸಿಇಒ ಸುರೇಶ್ ಇಟ್ನಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts