More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

    ಕುಂದಗೋಳ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ಕಾಂಗ್ರೆಸ್ ಕಿಸಾನ್ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಸವರಾಜ ಮೆಳವಂಕಿ ಅವರಿಗೆ ಮನವಿ ಸಲ್ಲಿಸಿದರು.

    ಘಟಕದ ತಾಲೂಕಾಧ್ಯಕ್ಷ ಗಂಗಾಧರ ಪಾಣಿಗಟ್ಟಿ ಮಾತನಾಡಿ, ರಾಜ್ಯ ಸರ್ಕಾರ ರೈತರ ಭೂಮಿ ಮಾರಾಟ ಮಾಡಲು ಮುಂದಾಗಿದೆ. ಫಲವತ್ತಾದ ಭೂಮಿಯನ್ನು ವಾಣಿಜ್ಯ ಚಟುವಟಿಕೆಗೆ ಬಳಸುವುದು ಹಾಗೂ ರೈತರಿಗೆ ಭೂಮಿಯನ್ನು 108 ಎಕರೆಗೆ ಸೀಮಿತ ಮಾಡಿರುವುದು ಖಂಡನೀಯ. ಇದರಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಅನ್ಯಾಯವಾಗುತ್ತದೆ. ಕೂಡಲೆ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿವೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ವಿತರಿಸುತ್ತಿರುವ ಬಿತ್ತನೆ ಬೀಜಗಳು ಕಳಪೆಯಾಗಿವೆ. ರೈತರು ಬಿತ್ತನೆ ಮಾಡಿದರೂ ಮೊಳಕೆಯೊಡೆಯುತ್ತಿಲ್ಲ. ಇದರಿಂದ ರೈತರಿಗೆ ತುಂಬಾ ಮೋಸವಾಗುತ್ತಿದೆ. ಬೀಜ ವಿತರಿಸಿರುವ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಸಮರ್ಪಕವಾಗಿ ಪರಿಹಾರ ದೊರಕುತ್ತಿಲ್ಲ. ಇದೊಂದು ರೈತರಿಗೆ ಮೋಸ ಮಾಡುವ ಯೋಜನೆಯಾಗಿದೆ ಎಂದು ಆರೋಪಿಸಿದರು.

    ಪ್ರತಿಭಟನೆಯಲ್ಲಿ ರಾಘವೇಂದ್ರ ನೆರ್ತಿ, ಜಿ.ಡಿ. ಘೊರ್ಪಡೆ, ನಿಂಗಪ್ಪ ಹಳ್ಳಿಕೇರಿ, ಗುರು ಚಲವಾದಿ, ಸಚಿನ್ ಪೂಜಾರ, ಸಲೀಂ ಕಡ್ಲಿ, ನನ್ನಾಸಾಬ್ ಕಿಲ್ಲೆದಾರ, ಚಂದ್ರು ಮಡಿವಾಳರ, ಇತರರಿದ್ದರು.

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ: ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ)ದ ವತಿಯಿಂದ ಹುಬ್ಬಳ್ಳಿ ನಗರದ ಮಿನಿ ವಿಧಾನಸೌಧ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ಸಂಕಷ್ಟದ ಸಂದರ್ಭದ ದುರುಪಯೋಗ ಪಡಿಸಿಕೊಂಡು ದೇಶದ ಕೃಷಿ ಉತ್ಪಾದನೆ, ಕೃಷಿ ಭೂಮಿ ಮತ್ತು ಕೃಷಿ ಮಾರುಕಟ್ಟೆಗಳನ್ನು ಕಾಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಅಗತ್ಯವಿರುವ ಕಾನೂನು ತಿದ್ದುಪಡಿಗೆ ಮುಂದಾಗಿವೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗಾಗಿ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡಬೇಕು. ಆದಾಯ ತೆರಿಗೆ ಮಿತಿ ಹೊಂದಿರುವ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 7500 ರೂ. ನೀಡಬೇಕು. ಪ್ರತಿ ತಿಂಗಳು ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕನಿಷ್ಠ 200 ದಿನ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಪದಾಧಿಕಾರಿಗಳಾದ ಎಂ.ಎಚ್. ಮುಲ್ಲಾ, ಬಿ.ಎಸ್. ಸೊಪ್ಪಿನ, ಬಿ.ಎನ್. ಪೂಜಾರಿ, ಬಿ.ಐ. ಈಳಿಗೇರ, ಎ.ಎಂ. ಖಾನ್, ಮಂಜುನಾಥ ಹುಜರಿತ್ತಿ, ಗುರುಸಿದ್ದಪ್ಪ ಅಂಬಿಗೇರ, ಗಂಗಾಧರ ಗಡಾದ, ಇತರರಿದ್ದರು.

    ರೈತ ಸಂಘದಿಂದ ಧರಣಿ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದನ್ನು ಕೈ ಬಿಡುವಂತೆ ಆಗ್ರಹಿಸಿ ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಂದಾಯ ಸಚಿವರು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ. ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಜನರ ಹಿತದೃಷ್ಟಿ ಮುಖ್ಯ. ಆದರೆ, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಜನರ ಹಿತಕ್ಕೆ ಪೂರಕವಾಗಿಲ್ಲ. ಹೀಗಾಗಿ ಈ ತಿದ್ದುಪಡಿಯನ್ನು ಕೂಡಲೆ ಕೈಬಿಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು. ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನಾಗಪ್ಪ ಉಂಡಿ, ಈರಣ್ಣ ಬಳಿಗೇರ, ಪದಾಧಿಕಾರಿಗಳು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts