More

    ಭದ್ರೆಗಾಗಿ ಚಿತ್ರದುರ್ಗ ಬಂದ್‌ಗೆ ಬಿಜೆಪಿ ಬೆಂಬಲ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳು ಜ. 23ರಂದು ಕರೆ ನೀಡಿರುವ ಚಿತ್ರದುರ್ಗ ಬಂದ್ ಬಿಜೆಪಿ ಬೆಂಬಲಿಸಲಿದೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ತಿಳಿಸಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆಗೆ ಮೊದಲು ಅನುದಾನ ಬಿಡುಗಡೆ ಮಾಡಿದ್ದು, ಬಿಜೆಪಿ. ರಾಜ್ಯದಲ್ಲಿ ಎರಡು ಬಾರಿ ಅಧಿಕಾರದಲ್ಲಿದ್ದ ವೇಳೆಯೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದಗೌಡ ಅವರು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದೆ ಎಂದು ದೂರಿದರು.

    ಈ ಯೋಜನೆ ಪೂರ್ಣಗೊಂಡ ಬಳಿಕ ಕೃಷಿ ಸಿಂಚಾಯಿ ಯೋಜನೆಯಡಿ ರೈತರ ಜಮೀನುಗಳಿಗೆ ನೀರು ಹರಿಸಲು ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ 5,300 ಕೋಟಿ ರೂ. ಅನುದಾನ ಮೀಸಲಿಟ್ಟಿದೆಯೇ ಹೊರತು ಮುಖ್ಯ ಕಾಮಗಾರಿಗಾಗಿ ಅಲ್ಲ. ಆದರೆ, ಕಾಂಗ್ರೆಸ್ ನಾಯಕರು ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ರಾಜ್ಯ ಸರ್ಕಾರವೂ ತನ್ನ ಬಜೆಟ್‌ನಲ್ಲಿ 2,700 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಎಷ್ಟು ಬಿಡುಗಡೆ ಮಾಡಿದೆ, ಕಾಮಗಾರಿ ಯಾವ ಹಂತದಲ್ಲಿದೆ ಎಂಬುದನ್ನೇ ಸ್ಪಷ್ಟಪಡಿಸುತ್ತಿಲ್ಲ. ಮೊದಲು ಈ ಕುರಿತು ಡಿಸಿಎಂ ದಾಖಲೆ ಸಮೇತ ಮಾಹಿತಿ ನೀಡಲಿ. ಚಿತ್ರದುರ್ಗಕ್ಕೆ ಅವರು ಭೇಟಿ ನೀಡಿದರೆ, ನಾನೇ ಪ್ರಶ್ನಿಸುತ್ತೇನೆ ಎಂದರು.

    50 ವರ್ಷದ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಯಲು ಬಿಜೆಪಿ ಕಾರಣ. ತುಂಗಾದಿಂದ ಭದ್ರಾಗೆ ನೀರು ಲಿಫ್ಟ್ ಮಾಡುವ ಕಾಮಗಾರಿಯನ್ನೇ ಈಗಿನ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಸಿದ್ದರಾಮಯ್ಯ ಅವರು ತ್ವರಿತವಾಗಿ ವೇಗ ನೀಡಿ, ಮುಖ್ಯ ಕಾಮಗಾರಿ ಪೂರ್ಣಗೊಳಿಸಿದರೆ, ಕೇಂದ್ರ ಸರ್ಕಾರದಿಂದ ಅನುದಾನ ತರುವುದು ನಿಶ್ಚಿತ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಸೇರಿ ಬಿಜೆಪಿಗರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಎಸ್.ಅನಿತ್‌ಕುಮಾರ್, ಸಂಪತ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts