More

    ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಪ್ರತಿಭಟನೆ

    ಮದ್ದೂರು: ತಾಲೂಕು ಮತ್ತು ಹೋಬಳಿಗಳಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.

    ಭತ್ತ ಖರೀದಿ ಕೇಂದ್ರ ಆರಂಭಿಸದ ಸರ್ಕಾರ, ತಾಲೂಕು ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಸೋಮವಾರ ಆಕ್ರೋಶವ್ಯಕ್ತಪಡಿಸಿದರು.

    ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಈಗಾಗಲೇ ತಾಲೂಕಿನಾದ್ಯಂತ ಭತ್ತ ಕಟಾವು ಪ್ರಾರಂಭಗೊಂಡಿದ್ದು, ರೈತರು ನಿಗದಿತ ಅವಧಿಯಲ್ಲಿ ಭತ್ತ ಕೊಯ್ಲು ಮಾಡಿ ಭತ್ತ ಖರೀದಿ ಕೇಂದ್ರಕ್ಕೆ ಸರಬರಾಜು ಮಾಡಬೇಕು. ಆದರೆ ಸಂಬಂಧಿಸಿದ ಅಧಿಕಾರಿಗಳು ಭತ್ತ ಖರೀದಿ ಕೇಂದ್ರ ಆರಂಭಿಸಿದ ಹಿನ್ನೆಲೆಯಲ್ಲಿ ರೈತರು ಕಡಿಮೆ ಬೆಲೆಗೆ ದಲ್ಲಾಳಿಗೆ ನೀಡಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿ ವರ್ಷವೂ ಸರ್ಕಾರ ನಿಗದಿತ ಸಮಯಕ್ಕೆ ಭತ್ತ ಖರೀದಿ ಕೇಂದ್ರ ಆರಂಭ ಮಾಡದೆ ರೈತರು ದಲ್ಲಾಳಿಗೆ ಮಾರಾಟದ ಮಾಡಿದ ನಂತರ ನೆಪಮಾತ್ರಕ್ಕೆ ಕೇಂದ್ರ ತೆರೆಯುತ್ತಿದ್ದು, ಇದರಿಂದ ಕಷ್ಟಪಟ್ಟು ಭತ್ತ ಬೆಳೆದ ರೈತರಿಗೆ ಮೂರು ಕಾಸು, ದಲ್ಲಾಳಿಗಳಿಗೆ ಆರು ಕಾಸು ಎಂಬಂತೆ ಆಗುವ ಮೂಲಕ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಸರ್ಕಾರ ಉಡುಪಿ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಂಬಲ ಬೆಳೆ ಹೆಚ್ಚಳ ಮಾಡಿದೆ ಅದೇ ಮಾದರಿಯಲ್ಲಿ ಎಲ್ಲ ಜಿಲ್ಲೆಗಳಿಗೂ ಕ್ವಿಂಟಾಲ್ ಭತ್ತಕ್ಕೆ 500 ರೂ. ಬೆಂಬಲ ಬೆಳೆ ಹೆಚ್ಚಳ ಮಾಡಬೇಕು ಮತ್ತು ಶೀಘ್ರವಾಗಿ ಭತ್ತ ಖರೀದಿ ಕೇಂದ್ರ ಆರಂಭ ಮಾಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರವಾಗಿ ಭತ್ತ ಖರೀದಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ವೇದಿಕೆಯ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗೌರವ ಅಧ್ಯಕ್ಷ ವಿ.ಎಚ್.ಶಿವಲಿಂಗಯ್ಯ, ಮುಖಂಡರಾದ ಸಾಗರ್, ಸೋಂಪುರ ಉಮೇಶ್, ಪ್ರಸಾದ್, ಶ್ರೀನಿವಾಸ್, ಸಿದ್ದಪ್ಪಾಜಿ, ಪುಟ್ಟಸ್ವಾಮಿ, ಜಗದೀಶ್, ಯಾಕೂಬ್, ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts