More

    ಭಕ್ತಿಯಿಂದ ಭಗವಂತನ ಸಾಕ್ಷಾತ್ಕಾರ -ಉಜ್ಜಯಿನಿ ಶ್ರೀಗಳ ಹೇಳಿಕೆ- ಮಹಿಳಾ ರಥೋತ್ಸವದ ಧರ್ಮಸಭೆ

    ದಾವಣಗೆರೆ: ದೇವರ ಬಗ್ಗೆ ಭಕ್ತಿ, ಶ್ರದ್ಧೆ ಹಾಗೂ ನಂಬಿಕೆ ಇರಬೇಕು. ಭಕ್ತಿಯಿಂದ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಉಜ್ಜಯನಿ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
    ಸಮೀಪದ ಯರಗುಂಟೆ ಶ್ರೀಕ್ಷೇತ್ರದಲ್ಲಿ ಭಾನುವಾರ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಪುಣ್ಯಕ್ಷೇತ್ರ ಹಾಗೂ ದೇವಾಲಯಗಳಿಗೆ ಹೋದಾಗ ಮನಸ್ಸಿನಲ್ಲಿ ಭಕ್ತಿ ಹಾಗೂ ಹೃದಯದಲ್ಲಿ ಪ್ರೇಮ ಉತ್ಕಟವಾಗಿದ್ದಾಗ ಭಗವಂತನ ಸ್ವರೂಪ ಕಾಣಲು ಸಾಧ್ಯ. ಇಲ್ಲದಿದ್ದರೆ ಕಲ್ಲಿನ ಮೂರ್ತಿಯೇ ಕಣ್ಣಿಗೆ ಗೋಚರಿಸುತ್ತದೆ ಎಂದು ತಿಳಿಸಿದರು.
    ಭಕ್ತಿಯ ಸ್ವರೂಪ ಅಗಾಧವಾದದ್ದು. ಭಕ್ತನಿಗೆ ಭಗವಂತನನ್ನು ತನ್ನೆಡೆಗೆ ಕರೆಸಿಕೊಳ್ಳುವ ಶಕ್ತಿಯಿದೆ ಎಂದು ಕೋಳೂರು ಕೊಡಗೂಸು, ಏಕಲವ್ಯ ಹಾಗೂ ಭಕ್ತ ಪ್ರಹ್ಲಾದ ಇವರು ಹೊಂದಿದ್ದ ಭಕ್ತಿ, ಶ್ರದ್ಧೆ ಹಾಗೂ ನಂಬಿಕೆ ಕುರಿತು ಉದಾಹರಿಸಿದರು.
    ಜಗತ್ತಿನ ಜೀವರಾಶಿಯಲ್ಲೇ ಮನುಷ್ಯ ಜನ್ಮ ಶ್ರೇಷ್ಠವಾದುದು. ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ. ಭಗವಂತನಲ್ಲಿ ಒಳ್ಳೆಯ ಮನಸ್ಸು ಹಾಗೂ ದುಡಿದು ಉಣ್ಣುವಂತ ಗುಣ ಕೊಡು ಎಂದು ಬೇಡುವವನೇ ನಿಜವಾದ ಭಕ್ತ ಎಂದರು.
    ವೀರಶೈವ ಪರಂಪರೆಯಲ್ಲಿ ಧರ್ಮ ಸ್ಥಾಪನೆಯ ಸಂದರ್ಭದಲ್ಲೇ ಮಹಿಳೆಯರಿಗೆ ಪುರುಷನಿಗೆ ಸರಿಸಮಾನ ಸ್ಥಾನ ನೀಡಲಾಗಿದೆ. ಶ್ರೀ ಕ್ಷೇತ್ರದಲ್ಲಿ ಮಹಿಳೆಯರೇ ತೇರು ಎಳೆಯುವುದು ವಿಶೇಷ ಎಂದು ಹೇಳಿದರು.
    ಯರಗುಂಟೆ ಶ್ರೀಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಮಾತನಾಡಿ, ಪುಣ್ಯಕ್ಷೇತ್ರ ಹಾಗೂ ದೇವಾಲಯಗಳ ದರ್ಶನದಿಂದ ಮನುಷ್ಯ ಜೀವನದ ಜಂಜಾಟದಿಂದ ಹೊರಬಂದು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಪಡೆಯಲು ಸಾಧ್ಯ. ಮಾನವ ಕಲ್ಯಾಣಕ್ಕಾಗಿ ಪಂಚಪೀಠಾಧೀಶ್ವರರು ನಿರಂತರ ಧರ್ಮ ಪ್ರಚಾರ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
    ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಬಿಲ್ ಜಾರಿಯಿಂದ ರಾಜ್ಯದ ಏಳೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧೆ ಮಾಡಬಹುದಾಗಿದ್ದು, ರಾಜಕೀಯ ಪ್ರಗತಿ ಸಾಧಿಸಲು ಅನುಕೂಲವಾಗಲಿದೆ ಎಂದರು.
    ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್‌ಕುಮಾರ್ ಮಾತನಾಡಿ, ಸಮಾಜ ಸೇವೆ ಮೂಲಕ ಮತ್ತೊಬ್ಬರ ಒಳಿತಿಗೆ ದುಡಿದಾಗ ಮಾತ್ರ ಪುಣ್ಯದ ಫಲ ಲಭಿಸುತ್ತದೆ ಎಂದು ಶಿಕ್ಷಣ ಮತ್ತು ಸೇವಾ ಕಾರ್ಯದ ಮಹತ್ವದ ಬಗ್ಗೆ ತಿಳಿಸಿದರು.
    ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಖಾನಮಡುಗು ದ.ಮ. ಶರಣಾರ್ಯರು, ಹಗರಿಬೊಮ್ಮನಹಳ್ಳಿ ಹಾಲಸಿದ್ದೇಶ್ವರ ಸ್ವಾಮೀಜಿ, ಹಜರತ್ ಸೈಯದ್ ರಹಮತ್‌ವುಲ್ಲಾ, ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎನ್.ಎಸ್. ರಾಜು ಇತರರು ಇದ್ದರು. ಸಿದ್ದಪ್ಪ ಮಾಸ್ತರ್ ಸ್ವಾಗತಿಸಿದರು. ಕಲ್ಲೂರು ಮಹಾಂತೇಶ್ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಮಹಿಳೆಯರು ಕರಿಬಸವೇಶ್ವರ ಸ್ವಾಮಿಯ ರಥವನ್ನು ಎಳೆಯುವ ಸಂಪ್ರದಾಯದೊಂದಿಗೆ ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts