More

    ಬೇಕು ಹಿರಿಯ ನಾಗರಿಕರ ಮಾರ್ಗದರ್ಶನ -ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ್ – ಕ್ರೀಡಾಕೂಟ

    ದಾವಣಗೆರೆ: ಹಿರಿಯ ನಾಗರಿಕರು ಸಮಾಜಕ್ಕೆ ತಮ್ಮ ಅನುಭವವನ್ನು ಧಾರೆ ಎರೆಯಬೇಕು. ಇದರಿಂದ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ್ ಹೇಳಿದರು.
    ಜಿಲ್ಲಾಡಳಿತ, ಜಿಪಂ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಎಂಸಿಸಿ ಬಿ ಬ್ಲಾಕ್‌ನ ಬಾಪೂಜಿ ಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಳೇ ಬೇರು-ಹೊಸ ಚಿಗರು ಕೂಡಿದರೆ ಮರ ಸೊಬಗು ಎಂಬ ಕವಿವಾಣಿಯಂತೆ ಹಿರಿಯರ ಮಾತಿನಲ್ಲಿ ವೈಜ್ಞಾನಿಕ ಸತ್ಯ ಅಡಗಿರುತ್ತದೆ. ಆರೋಗ್ಯಯುತ ಬದುಕಿನೊಂದಿಗೆ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಸಮಾಜಕ್ಕೆ ಹೆಚ್ಚು ಲಾಭವಿದೆ ಎಂದು ತಿಳಿಸಿದರು.
    ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರ ಬಗ್ಗೆ ನಿರ್ಲಕ್ಷೃ ವಹಿಸುತ್ತಿರುವ ಘಟನೆಗಳು ಕಂಡುಬರುತ್ತಿದ್ದು, ಪ್ರತಿಯೊಬ್ಬರೂ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು, ಅವರಿಗೆ ಸರ್ಕಾರ ಹಾಗೂ ವಿವಿಧ ಇಲಾಖೆಗಳ ಮಾಹಿತಿ ಮತ್ತು ಸೌಲಭ್ಯ ಒದಗಿಸಬೇಕು. ನಿರಂತರ ಆರೋಗ್ಯ ಮತ್ತು ಯೋಗಕ್ಷೇಮ ನೋಡಿಕೊಳ್ಳಬೇಕು ಎಂದರು.
    ದೇಶದ ಸಂವಿಧಾನದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದ್ದು ಹಿರಿಯ ನಾಗರಿಕರ ಅಭಿವೃದ್ಧಿ ಇಲಾಖೆಯಿಂದ ಅವರ ಕ್ಷೇಮಾಭಿವೃದ್ಧಿಗೆ ಬೇಕಾದ ಕಾರ್ಯಕ್ರಮ ಹಾಗೂ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಹಿರಿಯ ನಾಗರಿಕರ ಕಾನೂನು ಮೂಲಕ ಜೀವನಾಂಶ, ಆಸ್ತಿಹಕ್ಕು ಹಾಗೂ ರಕ್ಷಣೆ ವ್ಯವಸ್ಥೆಯೂ ಇದೆ ಎಂದು ಹೇಳಿದರು.
    ಇಂದು 10-15ರ ವಯಸ್ಸಿನ ಮಕ್ಕಳಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮೊದಲಾದ ಕಾಯಿಲೆ ಬರುತ್ತಿದ್ದು ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ ಇದಕ್ಕೆ ಕಾರಣ. ಇಂದು ಸೊಪ್ಪು, ತರಕಾರಿ ಕೊಳಚೆಯಲ್ಲಿ ಬೆಳೆದು ತಿನ್ನುತ್ತಿದ್ದೇವೆ. ಕ್ರಿಯಾಶೀಲತೆಯಿಂದ ಕೂಡಿರಲು ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಅವಶ್ಯಕ. ತಮ್ಮ ವಯಸ್ಸನ್ನು ಬದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
    ಜಿಲ್ಲಾ ಹಿರಿಯ ನಾಗರಿಕರ ಸಂಘದ ಗೌ.ಕಾರ್ಯದರ್ಶಿ ಎಸ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಟುಂಬದ ಎಲ್ಲರೂ ಸೇರಿ ಹಿರಿಯ ನಾಗರಿಕರ ದಿನ ಆಚರಿಸುವಂತಾಗಬೇಕು. ಕಿರಿಯರ ತಪ್ಪು ಸುಧಾರಿಸಿಕೊಳ್ಳುವ ಮೂಲಕ ಹಿರಿಯರು ಜವಾಬ್ಧಾರಿ ಪ್ರದರ್ಶಿಸಬೇಕು ಎಂದು ಹೇಳಿದರು.
    ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಜಿ. ಭರತ್‌ರಾಜ್ ಇದ್ದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್ ಸ್ವಾಗತಿಸಿ, ನಿರೂಪಿಸಿದರು.

    ವೇಗದ ನಡಿಗೆಗೆ ವಯೋವೃದ್ಧೆಯರು ಹೆಜ್ಜೆಯಾದರು. ಬಕೆಟ್ ಗೆ ರಿಂಗ್ ಎಸೆಯುವುದು, ಟೆನ್ನಿಸ್ ಬಾಲ್ ಎಸೆತ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts