More

    ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

    ಕಲಬುರಗಿ: ಬೆಳೆಹಾನಿಗೊಳಗಾದ ರೈತರ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡುವುದೂ ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಜಾತ್ಯತೀತ ಜನತಾದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ನಿಗಮ-ಮಂಡಳಿ ನೇಮಕಾತಿ ಸ್ಥಗಿತಗೊಳಿಸಿ ಮಳೆಯಿಂದ ಹಾನಿಗೊಳಗಾದ ಹೊಲ, ಗದ್ದೆ ಬದುಗಳ ದುರಸ್ತಿ ಕಾರ್ಯವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಬೇಕು, ಕಳೆದ ಒಂದು ವರ್ಷದ ಬೆಳೆ ಪರಿಹಾರ ನೀಡಬೇಕು, ಈ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
    ಪಕ್ಷದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಮತ್ತು ಮಾಜಿ ಅಧ್ಯಕ್ಷ ಬಸವರಾಜ ತಡಕಲ್ ನೇತೃತ್ವದಲ್ಲಿ ಪದಾಧಿಕಾರಿಗಳು ಸೇರಿ ಪ್ರತಿ ತಾಲೂಕಿನ ಅತಿವೃಷ್ಟಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಬೆಳೆಯುವ ಹಂತದಲ್ಲಿ ತೊಗರಿ, ಉದ್ದು, ಹೆಸರು ಮಳೆ ನೀರಿನಿಂದ ಜಲಾವೃತಗೊಂಡು ಸುಮಾರು ಶೇ.70ರಷ್ಟು ಬೆಳೆ ಹಾನಿಗೊಳಗಾಗಿದೆ. ಒಂದು ತಿಂಗಳು ಮೊದಲು ಮರುಬಿತ್ತನೆಗೆ ಸರ್ಕಾರ ಪರಿಹಾರ ಕೊಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
    ಕಳೆದ ವರ್ಷ ಬೆಳೆಹಾನಿಗೆ ಪರಿಹಾರ ಘೋಷಣೆ ಮಾಡಿ ಸುಮಾರು ಶೇ.60ರಷ್ಟು ರೈತರಿಗೂ ಪರಿಹಾರ ದೊರೆಯಲಿಲ್ಲ. ಸರ್ಕಾರ ಕರೊನಾ ನೆಪವೊಡ್ಡಿ ರೈತರ ಕಾಳಜಿ ಮಾಡುತ್ತಿಲ್ಲ. ಕಷ್ಟದಲ್ಲಿರುವ ರೈತರ ಕಣ್ಣೀರೊರೆಸುವುದನ್ನು ಬಿಟ್ಟು ನಿಗಮ, ಮಂಡಳಿ ನೇಮಕದಲ್ಲಿ ಸರ್ಕಾರ ತೊಡಗಿಸಿಕೊಂಡಿರುವುದು ಖಂಡನೀಯ ಎಂದರು.
    ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಪಕ್ಷದ ಕಾರ್ಯಾಧ್ಯಕ್ಷ ದೇವೇಗೌಡ ತೆಲ್ಲೂರ, ಜಿಲ್ಲಾ ವಕ್ತಾರ ಮನೋಹರ ಪೋದ್ದಾರ್, ಕಾರ್ಯಾಧ್ಯಕ್ಷ ಸೈಯದ್ ಜಫರ್ ಹುಸೇನ್, ಯುವ ಘಟಕದ ಅಧ್ಯಕ್ಷ ಅಲೀಂ ಇನಾಂದಾರ್, ರಾಜು ಬಡದಾಳ, ಆನಂದ ಪಾಟೀಲ್ ಲಿಂಗನವಾಡಿ, ಅರವಿಂದ ರಂಜೋಳ, ಪಾಂಡುರಂಗ ದನ್ನಿ, ಸುನಿತಾ ಕೋರವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts