More

    ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು ಚಾಂಪಿಯನ್

    ಗೋಣಿಕೊಪ್ಪ: ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸೆವೆನ್ ಎ ಸೈಡ್ ಅಂತರ್ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದು, ಅತಿಥೇಯ ಗೋಣಿಕೊಪ್ಪ ಕಾವೇರಿ ಕಾಲೇಜು (ಬ್ಲೂ ) ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.

    ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಕಾವೇರಿ ಕಾಲೇಜು ತಂಡದ ವಿರುದ್ಧ 3-1 ಗೋಲುಗಳ ಅಂತರದ ಜಯ ಸಾಧಿಸಿತು. ಬೆಂಗಳೂರು ತಂಡದ ನೇಹಲ್ ತಿಮ್ಮಯ್ಯ , ಪ್ರತೀಕ್ ಪೂವಣ್ಣ ಮತ್ತು ನರೇನ್ ಕಾರ್ಯಪ್ಪ ತಲಾ ಒಂದೊಂದು ಗೋಲು ಗಳಿಸಿ ಮಿಂಚಿದರು. ಕಾವೇರಿ ಕಾಲೇಜು ತಂಡದ ವಿನೀತ್ ನಾಣಯ್ಯ ಏಕೈಕ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
    ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು, ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜು ವಿರುದ್ಧ 1-0 ಗೋಲಿನಿಂದ ಜಯಿಸಿತು. 2ನೇ ಸೆಮಿಫೈನಲ್‌ನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು (ಬ್ಲೂ ) ತಂಡವು ಗೋಣಿಕೊಪ್ಪ ಕಾವೇರಿ ಕಾಲೇಜು (ವೈಟ್ ) ತಂಡದ ವಿರುದ್ಧ 3-1 ಗೋಲುಗಳಿಂದ ಭರ್ಜರಿ ಗೋಲು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
    ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜು ತಂಡವು ತೃತೀಯ ಸ್ಥಾನ ಪಡೆದುಕೊಂಡಿತು. ಗೋಣಿಕೊಪ್ಪ ಕಾವೇರಿ ಕಾಲೇಜು (ವೈಟ್ ) ವಿರುದ್ಧ 5-0 ಗೋಲು ದಾಖಲಿಸಿ ಸಾಧನೆ ಮಾಡಿತು. ಗೋಣಿಕೊಪ್ಪ ಕಾವೇರಿ ಕಾಲೇಜು (ವೈಟ್) 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

    ಫೇರ್ ಪ್ಲೇ ಟ್ರೋಫಿಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು. ಬೆಸ್ಟ್ ಗೋಲ್ ಕೀಪರ್ ಆಗಿ ಬೆಂಗಳೂರು ಸೆಂಟ್ ಜೋಸೆಫ್ ತಂಡದ ಧರ್ಮೇಂದ್ರ, ಬೆಸ್ಟ್ ಡಿಪೆಂಡರ್ ಆಗಿ ಗೋಣಿಕೊಪ್ಪ ಕಾವೇರಿ ಕಾಲೇಜು (ಬ್ಲೂ) ತಂಡದ ವಿನೀತ್ ನಾಣಯ್ಯ, ಹೆಚ್ಚು ಗೋಲು ಸಾಧಕರಾಗಿ ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜು ತಂಡದ ಚಸ್ವಿನ್ ಮುತ್ತಪ್ಪ ಹೊರಹೊಮ್ಮಿದರು.

    ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಪಾಲ್ಗೊಂಡ ಮಾತನಾಡಿ, ಶಿಕ್ಷಣಕ್ಕೆ ಮಹತ್ವ ಹೆಚ್ಚಿದೆ. ಯುವ ಜನತೆ ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಇತರ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಸರ್ವತೋಮುಖ ಬೆಳವಣಿಗೆಯನ್ನು ವೃದ್ಧಿಗೊಳಿಸಿಕೊಳ್ಳಬೇಕು. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟೀರ ಕೆ.ಬಿದ್ದಪ್ಪ, ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿರಿಯಪಂಡ ರಾಕೇಶ್ ಪೂವಯ್ಯ, ದಾನಿಗಳಾದ ಬಯವಂಡ ಮಹಾಬಲ, ಎನ್.ಗಿರೀಶ್, ಪ್ರಾಂಶುಪಾಲ ಡಾ.ಮಾಳೇಟಿರ ಬಿ.ಕಾವೇರಪ್ಪ, ಉಪ ಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಎಂ.ಎಸ್.ಭಾರತಿ, ಪಂದ್ಯಾವಳಿ ಸಂಚಾಲಕ ಮಿನ್ನಂಡ ಜೋಯಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲಮಾಡ ಸಂತೋಷ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts