More

    ಬುಡಮೇಲಾಗುತ್ತಿದೆ ಸಂವಿಧಾನದ ಆಶಯ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಆತಂಕ

    ಸಾಗರ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಜೆಗಳಿಗಾಗಿ ಕಟ್ಟಿಕೊಂಡ ಸಂವಿಧಾನದ ಮೂಲ ಆಶಯವೇ ಬುಡಮೇಲಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
    ಸಾಗರದಲ್ಲಿ ಮಂಗಳವಾರ ದೇಶಿ ಸೇವಾ ಪ್ರತಿಷ್ಠಾನವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
    ಸಂವಿಧಾನವನ್ನು ರಚಿಸುವಾಗ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಮಹತ್ವವನ್ನು ಅತ್ಯಂತ ವ್ಯವಸ್ಥಿತವಾಗಿ ಕಟ್ಟಿಕೊಟ್ಟಿದ್ದಾರೆ. ಜನತಂತ್ರದಲ್ಲಿ ಆಯ್ಕೆಯಾಗುವವರಿಗೆ ವಿದ್ಯಾರ್ಹತೆಯ ಮಾನದಂಡಕ್ಕಿಂತ ಅನುಭವ ಮತ್ತು ಸೇವೆಗೆ ಪ್ರಾತಿನಿಧ್ಯ ನೀಡುವ ಮಹತ್ತರ ನಿರ್ಧಾರವನ್ನು ಅಂದು ಕೈಗೊಳ್ಳಲಾಯಿತು. ಆದರೆ ಇಂದು ಶ್ರೀಮಂತಿಕೆ ಮತ್ತು ಅಧಿಕಾರದ ಲಾಲಸೆಯಿಂದ ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ. ಮನುಷ್ಯನಿಗೆ ತೃಪ್ತಿ ಎಂಬುದು ಇಲ್ಲದೇ ಹೋದರೆ ಎಂತಹ ಅಪಾಯವನ್ನು ತಲುಪುತ್ತಾನೆ ಎಂಬುದಕ್ಕೆ ಇಂದಿನ ವ್ಯವಸ್ಥೆಯೇ ಸಾಕ್ಷಿ. ಇದಕ್ಕೆ ನಾವು ಕೂಡ ಕಾರಣ ಎಂದರು.
    ಕಮಿಷನ್ ಪರ್ಸಂಟೇಜ್ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಂತೂ ನಾಚಿಗ್ಗೇಡಿನ ಸಂಗತಿ. ಶೇ.40 ಪರ್ಸಂಟೇಜ್ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಈ ಹಿಂದೆ ಕೇವಲ ಶೇ.10 ಇತ್ತು ಎಂದು ಹೇಳುವುದು ಎಷ್ಟು ಸರಿ? ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ದೇಶದ ಪ್ರಮುಖ ನಗರಗಳಿಗೆ ಕೋಟ್ಯಂತರ ರೂ. ವಿನಿಯೋಗಿಸಲಾಗುತ್ತಿದೆ. ಬೆಂಗಳೂರಲ್ಲಿ ಮಾಡಿರುವ ರಸ್ತೆಗಳು ಒಂದೇ ಮಳೆಗೆ ಕೊಚ್ಚಿ ಹೋಗಿವೆ ಎಂದು ಆರೋಪಿಸಿದರು.
    ದೇಶಿ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಶ್ರೀಧರಮೂರ್ತಿ ಮಾತನಾಡಿ, ಮಕ್ಕಳು ಪ್ರಬಂಧ ಸ್ಪರ್ಧೆಯಲ್ಲಿ ಕೇಳಿರುವ ಪ್ರಶ್ನೆಗಳು ನಮಗೆ ಬೇಸರ ಹುಟ್ಟಿಸುತ್ತವೆ. ಬರುವ ದಿನಗಳಲ್ಲಿ ಲಂಚ ತೆಗೆದುಕೊಳ್ಳುವ ಬಗ್ಗೆಯೇ ಪಠ್ಯಗಳು ಓದಲು ಬಂದುಬಿಡಬಹುದು. ಎಲ್ಲ ಕೆಲಸಕ್ಕೂ ಲಂಚದ ಪಟ್ಟಿಹಾಕುವ ಅಪಾಯಗಳು ಎದುರಾಗುತ್ತವೆ ಎಂದೆಲ್ಲಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಯುವಪೀಳಿಗೆಯನ್ನು ನಿರ್ದಿಷ್ಟ ಗುರಿಯೊಂದಿಗೆ ಕರೆದುಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
    ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಯಾವ ವ್ಯಕ್ತಿ ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಾನೋ ಆತನನ್ನು ಸಮಾಜ ಬೆಂಬಲಿಸುತ್ತದೆ. ಭ್ರಷ್ಟಾಚಾರ ತೊಲಗಬೇಕು ಎಂದರೆ ಎಲ್ಲ ಆಡಳಿತದ ವ್ಯವಸ್ಥೆ, ಹಣದ ವ್ಯವಹಾರವನ್ನು ಆನ್‌ಲೈನ್ ಮಾಡಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts