More

    ಬೀಸುತ್ತಿದೆ ಮದ್ರಾಸ್-ಐ ಸೋಂಕಿನ ಗಾಳಿ – 12 ವರ್ಷದೊಳಗಿನವರೇ ಹೆಚ್ಚು ಬಾಧಿತರು 

    ದಾವಣಗೆರೆ: ಜಿಲ್ಲಾದ್ಯಂತ ಕಳೆದೊಂದು ವಾರದಲ್ಲಿ ಮಳೆ-ಶೀತಗಾಳಿಯ ಬೆನ್ನಲ್ಲೇ ಮದ್ರಾಸ್-ಕಣ್ಣು ಸೋಂಕಿನ ಗಾಳಿಯೂ ಬಿರುಸಿನ ಹಂತದತ್ತ ಸಾಗಿದೆ. 12 ವರ್ಷದೊಳಗಿನ ಮಕ್ಕಳು ಇದಕ್ಕೆ ಹೆಚ್ಚು ಬಾಧಿತರಾಗುತ್ತಿದ್ದಾರೆ.
    ಶಾಲೆ-ಕಾಲೇಜು, ವಸತಿ ಶಾಲೆ, ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಇದು ಕಂಡುಬರುತ್ತಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಕನ್ನಡಕ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
    ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ನಿತ್ಯ 400ಕ್ಕೂ ಹೆಚ್ಚು ಪ್ರಕರಣಗಳು ವರದಿ ಆಗುತ್ತಿವೆ. ಎಂಟ್ಹತ್ತು ದಿನಗಳಲ್ಲಿ 3 ಸಾವಿರದಷ್ಟು ಮಂದಿ ಸೋಂಕಿಗೆ ಒಳಗಾಗಿದ್ದು, ಕೆಲವರು ಗುಣಮುಖರೂ ಆಗಿದ್ದಾರೆ. ಜಾಗರೂಕತೆ ವಹಿಸಿದರೆ 2-3 ದಿನದಲ್ಲಿ ಉಪಶಮನ ಮಾಡಬಹುದು. ಹೆದರಿಕೆ ಅನಗತ್ಯ ಎಂಬುದು ವೈದ್ಯರ ಮಾತು.
    ಸೋಂಕು ಕಾಣಿಸಿಕೊಂಡ ವಿದ್ಯಾರ್ಥಿಗೆ ಕೆಲವು ಶಾಲೆಗಳಲ್ಲಿ ರಜೆ ನೀಡಲಾಗುತ್ತಿದ್ದರೆ ಕೆಲವೆಡೆ ಮುಂಜಾಗ್ರತೆ ವಹಿಸಿ ಆಯಾ ತರಗತಿಗಳಿಗೆ ಸೀಮಿತ ರಜೆ ನೀಡಿರುವ ನಿದರ್ಶನಗಳಿವೆ. ಎಲ್ಲಿಯೂ ಗಂಭೀರ ಸ್ವರೂಪಕ್ಕೆ ತಲುಪಿಲ್ಲ ಎಂಬುದು ಸಮಾಧಾನಕರ ಸಂಗತಿ.
    ಜಿಲ್ಲೆಯಲ್ಲಿ 2 ಸಾರ್ವಜನಿಕ ಆಸ್ಪತ್ರೆ, ತಲಾ 4 ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, 11 ನಗರ ಆರೋಗ್ಯ ಕೇಂದ್ರ, 80 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ದಿನವೊಂದಕ್ಕೆ 5-10 ಸೋಂಕಿತರು ಚಿಕಿತ್ಸೆ ಬಯಸಿ ಬರುತ್ತಿದ್ದಾರೆ.
    100ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು ಅಲ್ಲಿಗೆ ಬರವವರ ಸಂಖ್ಯೆ ಕೂಡ ಏರುಗತಿಯಲ್ಲಿದೆ. ದಾವಣಗೆರೆ ದೃಷ್ಟಿ ಆಸ್ಪತ್ರೆಯ ವೈದ್ಯ ಡಾ. ರವೀಂದ್ರನಾಥ್ ಹೇಳುವ ಪ್ರಕಾರ ಅವರೊಬ್ಬರೇ ಕಳೆದ 10 ದಿನಗಳಲ್ಲಿ 350ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ.
    ಕಳೆದ ಎಂಟು ದಿನದಲ್ಲಿ 280 ಸೋಂಕಿನ ಪ್ರಕರಣ ಚಿಗಟೇರಿ ಜಿಲ್ಲಾಸ್ಪತ್ರೆಯೊಂದರಲ್ಲೇ ವರದಿಯಾಗಿವೆ. 12 ವರ್ಷದ ಮಕ್ಕಳಲ್ಲೇ ಹೆಚ್ಚಿನ ಪ್ರಕರಣ ಕಂಡುಬರುತ್ತಿವೆ. ವೈದ್ಯರ ಸಲಹೆ ಇಲ್ಲದಲೇ ಔಷಧ ಅಂಗಡಿಗಳಲ್ಲಿ ಐ ಡ್ರಾಪ್ಸ್ ಪಡೆಯಬಾರದು. ಇದರಿಂದ ಬೇರೆ ಸಮಸ್ಯೆ ಉದ್ಭವಿಸಬಹುದು ಎನ್ನುತ್ತಾರೆ ಅಲ್ಲಿನ ಹಿರಿಯ ನೇತ್ರ ತಜ್ಞ ಡಾ.ಎಸ್.ಎಸ್.ಕೋಳಕೂರ್ ಅವರು. ಕೈದಿಗಳಿಗೂ ಬೇನೆ
    ಜಿಲ್ಲಾ ಕಾರಾಗೃಹದಲ್ಲಿ 30ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಲ್ಲಿ ಮದ್ರಾಸ್ ಐ ಕಾಣಿಸಿಕೊಂಡಿತ್ತು. ಭಾನುವಾರ ಚಿಗಟೇರಿ ಆಸ್ಪತ್ರೆ ನೇತ್ರ ವೈದ್ಯರ ತಂಡ ತೆರಳಿ ಐ ಡ್ರಾಪ್, ಮಾತ್ರೆಗಳ ಜತೆಯಲ್ಲೇ ಮಾಹಿತಿ ಶಿಕ್ಷಣ ನೀಡಿದೆ. ಸೋಂಕಿತರನ್ನು ಪ್ರತ್ಯೇಕಿಸಿ ಇರಿಸಲಾಗಿದ್ದು ಸೋಂಕಿನ ಪ್ರಮಾಣ ತಗ್ಗಿದೆ ಎಂದು ಕಾರಾಗೃಹದ ಅಧೀಕ್ಷಕಿ ಭಾಗೀರಥಿ ತಿಳಿಸಿದ್ದಾರೆ.
    ಲಕ್ಷಣಗಳೇನು?
    ಕಣ್ಣಲ್ಲಿ ನೀರು ಬರುವಿಕೆ, ಕಣ್ಣಿಗೆ ಚುಚ್ಚಿದ ಹಾಗಾಗುವುದು, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಬಿಳಿ ದ್ರವ ಬರುವುದು ಇವಿಷ್ಟೂ ಮದ್ರಾಸ್ ಐ ರೋಗ ಲಕ್ಷಣಗಳಾಗಿವೆ.
    ಕಾಂಜೆಂಕ್ವಿವಿಟಿಸ್ ಅಥವಾ ಕೆಂಗಣ್ಣು ಬೇನೆ ಎಂದು ಕರೆಯಲ್ಪಡುವ ಈ ಮದ್ರಾಸ್ ಐ ಸೋಂಕಿಗೆ ಗ್ರಾಮ್ಯಭಾಷೆಯಲ್ಲಿ ಕಣ್ಣು ಬಂದಿವೆ ಎಂಬ ಹೆಸರಿದೆ. ಇದೊಂದು ಅಂಟುರೋಗ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು. ಸೋಂಕಿತರ ಕಣ್ಣಿನ ನೀರು ಅಥವಾ ದ್ರವ (ಪಿಸುರು)ದಲ್ಲಿ ರೋಗಾಣು ಇರುವುದರಿಂದ ರೋಗಿ ಬಳಸಿದ ವಸ್ತ್ರ, ಮನೆಗಳಲ್ಲಿನ ವಸ್ತುಗಳನ್ನು ಇತರು ಮುಟ್ಟಬಾರದು.
    ಪರಿಹಾರ
    ಪದೇಪದೇ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವುದು. ನಿತ್ಯ 3-4 ಗಂಟೆಗೊಮ್ಮೆ ಬಿಸಿನೀರಿನಲ್ಲಿ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಬಿಳಿ ದ್ರವ ಬರುತ್ತಿದ್ದರೆ ವೈದ್ಯರ ಸಲಹೆ ಪಡೆದು ಡ್ರಾಪ್ಸ್ ಹಾಕಿಕೊಳ್ಳಬೇಕು.
    ಸೋಂಕಿತರು ಸ್ವಯಂ ಪ್ರತ್ಯೇಕವಾಗಿರಬೇಕು. ಶಾಲೆ ಮಕ್ಕಳಲ್ಲಿ ಸೋಂಕು ಕಂಡುಬಂದರೆ 3 ದಿನಗಳ ಕಾಲ ರಜೆ ನೀಡಬೇಕು. ಮನೆಗಳಲ್ಲಿ ಪ್ರತ್ಯೇಕ ವಸ್ತ್ರ , ಸೋಪು, ಬಳಸಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts