More

    ಬೀದರ್​ ಓಲ್ಡ್ ಸಿಟಿ ಜನಕ್ಕೆ ಅಗತ್ಯ ಸೌಲಭ್ಯ

    ಬೀದರ್: ರಂಜಾನ್ ಹಬ್ಬ ಮತ್ತು ನಗರದ ಹಳೇ ಭಾಗದ (ಓಲ್ಡ್ ಸಿಟಿ) ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಂಬಂಧ ಜಿಲ್ಲಾಡಳಿತದಿಂದ ಗುರುವಾರ ಡಿಸಿ ಕಚೇರಿ ಆವರಣದ ಖುಲ್ಲಾ ಪ್ರದೇಶದಲ್ಲಿ ಸಭೆ ನಡೆಯಿತು.
    ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅಧ್ಯಕ್ಷತೆಯ ಸಭೆಯಲ್ಲಿ ಶಾಸಕ ರಹೀಮ್ ಖಾನ್, ಎಸ್ಪಿ ನಾಗೇಶ, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಹಳೇ ಭಾಗದ ನೋಡಲ್ ಅಧಿಕಾರಿ ಎಸಿ ಅಕ್ಷಯ ಶ್ರೀಧರ್, ನಗರಸಭೆ ಆಯುಕ್ತ ಬಸಪ್ಪ ಸೇರಿ ಮುಸ್ಲಿಂ ಸಮಾಜದ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
    ನಗರದ ಹಳೇ ಭಾಗ ಕರೊನಾ ಸೋಂಕುಪೀಡಿತ ಪ್ರದೇಶ(ಕಂಟೈನ್ಮೆಂಟ್ ಏರಿಯಾ) ಎಂದು ಘೋಷಿತವಾಗಿದೆ. ಇಲ್ಲಿ ಪತ್ತೆಯಾಗಿದ್ದ 15 ಪ್ರಕರಣಗಳಲ್ಲಿ 14 ಜನರು ಹಳೇ ಭಾಗಕ್ಕೆ ಸೇರಿದ್ದವು. ಚಿಕಿತ್ಸೆ ನಂತರ 9 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದ 6 ಪಾಸಿಟಿವ್ ಪ್ರಕರಣ ಇದೇ ಪ್ರದೇಶಕ್ಕೆ ಸೇರಿವೆ. ಹೀಗಾಗಿ ಲಾಕ್ಡೌನ್ ಕಟ್ಟುನಿಟ್ಟಿನ ಪಾಲನೆಯಿಂದ ರಂಜಾನ್ ವೇಳೆ ಜನರಿಗೆ ನಾನಾ ಸಮಸ್ಯೆ ಎದುರಾಗಿರುವ ಆರೋಪ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಭೆ ಕರೆದು ಸುದೀರ್ಘ ಸಮಾಲೋಚನೆ ನಡೆಸಿತು.
    ನಮಗೆ ಆರೋಗ್ಯ ತಪಾಸಣೆ, ಕಿರಾಣಿ, ತರಕಾರಿ, ಹಣ್ಣು ಸೇರಿ ಎಲ್ಲವೂ ಸಮರ್ಪಕ ರೀತಿಯಲ್ಲಿ ಸಿಗುತ್ತಿಲ್ಲ. ಹೀಗಾಗಿ ನಿತ್ಯವೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಪೊಲೀಸರು ಹೊರಗೆ ಬಂದರೆ ಬೆದರಿಸುತ್ತಿದ್ದಾರೆ, ಥಳಿಸುತ್ತಿದ್ದಾರೆ. ನಮ್ಮ ಗೋಳು ಕೇಳುತ್ತಿಲ್ಲ. ಮನೆ ಮನೆಗೆ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದರೂ ಇದ್ಯಾವುದು ಪರಿಣಾಮಕಾರಿ ನಡೆದಿಲ್ಲ. ನಾವು ಹತ್ತಾರು ಸಂಕಷ್ಟಗಳನ್ನು ನಿತ್ಯ ಎದುರಿಸುತ್ತಿದ್ದೇವೆ. ಇದಕ್ಕೆಲ್ಲ ಪರಿಹಾರ ಒದಗಿಸಿ ಎಂದು ಸ್ಥಳೀಯ ಪ್ರಮುಖರು ಕೋರಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಮಹಾದೇವ, ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ಹಳೇ ಭಾಗದ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರತಿದಿನ ವೈದ್ಯಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾಗ ಅಲ್ಲಿನ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುತ್ತದೆ. ಜನರಿಗೆ ತೊಂದರೆ ಆಗದಂತೆ ಅಗತ್ಯ ವಸ್ತು ಸಿಗುವಂತೆ ನೋಡಿಕೊಳ್ಳಲು ಸಂಬಂಧಿತರೆಲ್ಲರೂ ಕಾರ್ಯಪ್ರವೃತ್ತರಾಗಿದ್ದಾರೆ. ಏನಾದರೂ ಕೊರತೆಯಿದೆ ಎಂದು ತಿಳಿದ ಕೂಡಲೇ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ. ಆದರೂ ಕೆಲವೆಡೆ ತೊಂದರೆ ಆಗಿರಬಹುದು. ಇದನ್ನು ಸಹ ಅಧಿಕಾರಿಗಳಿಗೆ ಸೂಚಿಸಿ ಸರಿಪಡಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts