More

    ಬಿತ್ತನೆ ಬೀಜ ಖರೀದಿಗೆ ರೈತರ ಪರದಾಟ

    ಧಾರವಾಡ: ಮುಂಗಾರು ಹಂಗಾಮು ಆರಂಭವಾಗಲಿದ್ದು, ಬಿತ್ತನೆ ಬೀಜದ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಮುಂಗಾರು ಮಳೆಯ ಸಿಂಚನವಾಗುತ್ತಿದ್ದಂತೆ ರೈತರು ಬಿತ್ತನೆ ಬೀಜ ಪಡೆಯಲು ಪರದಾಡುತ್ತಿರುವ ಘಟನೆ ಮರುಕಳಿಸಿದೆ.

    ಸೋಮವಾರ ಎತ್ತುಗಳಿಂದ ಕೃಷಿ ಚಟುವಟಿಕೆ ಇರುವುದಿಲ್ಲ. ಹೀಗಾಗಿ ಬಿತ್ತನೆ ಬೀಜವನ್ನಾದರೂ ಖರೀದಿಸಿದರಾಯಿತು ಎಂದು ರೈತರು ನಗರದ ಹೊಸ ಬಸ್ ನಿಲ್ದಾಣ ಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿದ್ದರು. ಆದರೆ, ಅಲ್ಲಿ ಒಂದು ದಿನ ಚೀಟಿ ಮಾಡಿಸಲು, ಮತ್ತೊಂದು ದಿನ ಬೀಜ ಒಯ್ಯಲು ವ್ಯವಸ್ಥೆ ಮಾಡಿರುವುದು ರೈತರಲ್ಲಿ ಬೇಸರ ಮೂಡಿಸಿತು.

    ಅಳ್ನಾವರ ಪ್ರತ್ಯೇಕ ತಾಲೂಕು ಆಗಿರುವ ಕಾರಣ ಅಳ್ನಾವರ ಹೋಬಳಿ ವ್ಯಾಪ್ತಿಯ ಧಾರವಾಡ ತಾಲೂಕಿನ ರೈತರನ್ನು ಧಾರವಾಡಕ್ಕೆ ಸೇರಿಸಲಾಗಿದೆ. ಹೀಗಾಗಿ 60ಕ್ಕೂ ಹೆಚ್ಚು ಹಳ್ಳಿಗಳಿದ್ದರೂ ಬೀಜ ವಿತರಣಾ ಕೌಂಟರ್ ಒಂದೇ ಇದೆ. ಅಲ್ಲೂ ದಿನಕ್ಕೆ 10 ಜನರಿಗೆ ಮಾತ್ರ ಬೀಜ ವಿತರಣೆ ಮಾಡಲಾಗುತ್ತಿದೆ. ಹಿಂದಿನ ದಿನ ಬೆಳಗ್ಗೆ ಮೊದಲು ಬಂದು ಚೀಟಿ ಪಡೆದ 200 ಜನರಿಗೆ ಮಾತ್ರ ಬೀಜ ವಿತರಣೆಯಾಗುತ್ತಿದೆ. ರೈತರು ಒಂದು ಕೆಲಸಕ್ಕೆ ಎರಡು ದಿನ ಅಲೆದಾಡಬೇಕಾಗಿದೆ.

    ಕೇಂದ್ರದ ಮುಂದೆ ದಿನಗಟ್ಟಲೆ ಕಾಯುವ ದುಸ್ಥಿತಿ ಹುಬ್ಬಳ್ಳಿ: ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಜಮೀನು ಹದಗೊಳಿಸಿ ಬಿತ್ತನೆಗೆ ಅಣಿಯಾಗಬೇಕಿದ್ದ ಕೃಷಿಕರು ರೈತ ಸಂಪರ್ಕ ಕೇಂದ್ರದ ಮುಂದೆ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಬಂದಿದೆ.

    ಸಮರ್ಪಕ ಬಿತ್ತನೆ ಬೀಜ ಪೂರೈಕೆಯಾಗದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಆರ್​ಎಸ್​ಕೆ, ಹೆಚ್ಚುವರಿ ವಿತರಣೆ ಕೇಂದ್ರಗಳ ಎದುರು ರೈತ ಸಮೂಹ ಬೀಡು ಬಿಟ್ಟು ಶತಾಯಗತಾಯ ಬೀಜ ಕೊಂಡೊಯ್ಯಲು ಹರಸಾಹಸ ಪಡುತ್ತಿದ್ದಾರೆ. ಇಲ್ಲಿಯ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದ ಎದುರು ಕಳೆದ ನಾಲ್ಕೈದು ದಿನದಿಂದ ಜನದಟ್ಟಣೆ ಕಂಡು ಬರುತ್ತಿದೆ. ಮಳೆ ಹೆಚ್ಚಾಗುತ್ತಿರುವುದರಿಂದ ‘ಎಲ್ಲಿ ಹೊಲದ ಹದ ತಪ್ಪಿ ಹೋಗುತ್ತದೆಯೋ’ ಎಂಬ ಆತಂಕದಲ್ಲಿ ರೈತರು ಉಳುಮೆ ಮಾಡುವುದನ್ನು ಬಿಟ್ಟು ಬೀಜ ಖರೀದಿಗೆ ಪಾಳಿಯಲ್ಲಿ ನಿಲ್ಲುತ್ತಿದ್ದಾರೆ.

    ಆದರೆ, ಕೃಷಿ ಅಧಿಕಾರಿಗಳು ಬೀಜ ವಿತರಣೆಗೆ ಸರಿಯಾದ ವ್ಯವಸ್ಥೆ ಮಾಡದೇ ಮಾಡದೇ ಇರುವುದರಿಂದ ನಿತ್ಯವೂ ಸಮಸ್ಯೆ ಎದುರಾಗುತ್ತಿದೆ. ದಿನೇದಿನೆ ಬೀಜ ಕೊಂಡೊಯ್ಯುವವರು ಹೆಚ್ಚಾಗುತ್ತಿದ್ದಾರೆ. ಅದರಲ್ಲೂ ಸೋಮವಾರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ಎಲ್ಲ ರೈತರಿಗೆ ಬಿತ್ತನೆ ಬೀಜ ಸಿಗುವ ಭರವಸೆ ಸಿಗದ್ದರಿಂದ ಆಕ್ರೋಶ ವ್ಯಕ್ತಪಡಿಸಿದರು.

    ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದರೂ ಯಾರೊಬ್ಬರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಒಟ್ಟಾರೆ ದಿನದಿಂದ ದಿನಕ್ಕೆ ಬೀಜ ಖರೀದಿ ಗೊಂದಲ ಹೆಚ್ಚಾಗುತ್ತಿದೆ. ಅಧಿಕಾರಿಗಳು ವ್ಯವಸ್ಥೆ ಸರಿಪಡಿಸುವರೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts