More

    ಬಿಜೆಪಿ ಸರ್ಕಾರ ಒಂದೇ ಒಂದು ಮನೆ ನೀಡಲಿಲ್ಲ

    ಹನೂರು: 15 ವರ್ಷದ ಅಧಿಕಾರವಧಿಯಲ್ಲಿ ಕ್ಷೇತ್ರದ ಅಭಿವೃದ್ಧ್ದಿಗೆ ಹೆಚ್ಚು ಒತ್ತು ನೀಡಿರುವುದರ ಜತೆಗೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಆರ್.ನರೇಂದ್ರ ಮನವಿ ಮಾಡಿದರು.
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌದಳ್ಳಿ ಹಾಗೂ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಆಯೋಜಿಸಿದ್ಧ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಹನೂರು ಕ್ಷೇತ್ರ ಹೆಚ್ಚು ವಿಸ್ತೀರ್ಣವಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೆ-ಶಿಪ್‌ಯೋಜನೆಯಡಿ ರಸ್ತೆ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಬಸ್ ನಿಲ್ದಾಣ, 213 ಸಮುದಾಯ ಭವನಗಳ ನಿರ್ಮಾಣ, ಏಕಲವ್ಯ, ಮುರಾರ್ಜಿ, ಇಂದಿರಾಗಾಂಧಿ ವಸತಿ ಶಾಲೆಗಳ ಸ್ಥಾಪನೆ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದ ಶೇ.85ರಷ್ಟು ಸೋಲಿಗರ ಹಾಡಿಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿದೆ. 1,800 ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕು ಪತ್ರ ನೀಡಲಾಗಿದೆ. 38 ಸಾವಿರ ಜನರಿಗೆ ಗ್ಯಾಸ್ ವಿತರಿಸಲಾಗಿದೆ. ಜತೆಗೆ ಸಿದ್ದರಾಮಯ್ಯ ಅವರು ಮ.ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಈ ಭಾಗದ ಬೇಡಗಂಪಣ ಸಮುದಾಯದ ಜನತೆ ಮನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ದಿಸೆಯಲ್ಲಿ 2 ಹಂತದಲ್ಲಿ 1,550 ಮನೆಗಳನ್ನು ಮಂಜೂರು ಮಾಡಲಾಗಿದೆ. ಆದರೆ 4 ವರ್ಷದಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಮನೆಯನ್ನು ಸಹ ನೀಡಲಿಲ್ಲ. ಕಾಂಗ್ರೆಸ್ ಶಾಸಕ ಎಂಬ ಧೋರಣೆ ಹೊಂದಿ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಗ್ಯಾಸ್ ಬೆಲೆ ಏರಿಕೆಯಿಂದ ಈ ಭಾಗದ ಬಹುತೇಕ ಕಾಡಂಚಿನ ಜನರು ಅಡುಗೆ ಮಾಡಲು ಸೌದೆ ಒಲೆಯ ಮೊರೆ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಹಾಗಾಗಿ ಕಾಂಗ್ರೆಸ್‌ನಿಂದ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲೂ ಹನೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ತಿಳಿಸಿದರು.
    ಯೋಜನೆಗಳು ಸ್ಥಗಿತ: ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಕೆಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದೆ. ಇನ್ನು ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಿದೆ. ನಮ್ಮ ಸರ್ಕಾರ ಪಡಿತರದಾರರಿಗೆ ನೀಡುತ್ತಿದ್ದ 7ಕೆ.ಜಿ ಅಕ್ಕಿಗೆ ಬದಲಾಗಿ 5 ಕೆ.ಜಿ ನೀಡುತ್ತಿದೆ. ಎಸ್ಟಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪಿಎಚ್.ಡಿ ಸಂಶೋಧನಾರ್ಥಿಗಳಿಗೆ ಫೇಲೋಶಿಪ್ ಸ್ಥಗಿತಗೊಳಿಸಿದೆ. ಈ ಮೂಲಕ ಬಿಜೆಪಿ ಜನತೆಗೆ ಅನ್ಯಾಯವೆಸಗುತ್ತಿದೆ ಎಂದರು.
    ಹುಸಿಯಾದ ಭರವಸೆ: ಹನೂರು ತಾಲೂಕಾಗಿ ರಚನೆಯಾಗಿ 5 ವರ್ಷ ಕಳೆದಿದೆ. ಆದರೆ ತಾಲೂಕು ಕೇಂದ್ರದಲ್ಲಿ ಗ್ರಾಮ ಮಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ತುರ್ತು ಚಿಕಿತ್ಸೆಗಷ್ಟೇ ಸೀಮಿತವಾಗಿದೆ. ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಆದ್ದರಿಂದ 100 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ 100 ಕೋಟಿ ರೂ. ವೆಚ್ಚದಲ್ಲಿ ಹನೂರು-ಮ.ಬೆಟ್ಟದ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಜತೆಗೆ 170 ಕೋಟಿ ರೂ. ವೆಚ್ಚದಲ್ಲಿ ನದಿ ಮೂಲದಿಂದ ಉಡುತೊರೆ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಇತ್ತೀಚೆಗೆ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗಿದ್ದು, ಜಾರಿಗೊಳಿಸುವುದಾಗಿ ಜನತೆಯ ಮುಂದೆ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿರಿಸಲಿಲ್ಲ ಎಂದು ದೂರಿದರು.
    ಪಕ್ಷಕ್ಕೆ ಸೇರ್ಪಡೆ: ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಾದ ಗೊರಸಾಣೆ ಗ್ರಾಮದ ರವಿ, ಮಾದೇವ, ಗಿರಿಯ, ಕೊಂಬುಡಿಕ್ಕಿಯ ಚಿನ್ನಪ್ಪಿ, ಲಕ್ಷ್ಮಣ, ನಾಗರಾಜು, ಪುಟ್ಟಪ್ಪ, ಮೆಂದರೆ ಗ್ರಾಮದ ಬೇರಾ, ಶಿವಕುಮಾರ್, ಮಾದಯ್ಯ, ವೀರಣ್ಣ, ಮುರುಗ, ಕೆಂಪರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೌದಳ್ಳಿ ಗ್ರಾಮದಲ್ಲಿ ಮುದಾಸೀರ್, ಸಮೀರ್, ಅಸಾದ್ ಫೀರ್, ಸಾಹೀದ್, ನೌಷಾದ್, ತನ್ವೀರ್, ನದೀಮ್, ವಾಸಿಮ್ ಇನ್ನಿತರರು ಪಕ್ಷ ಸೇರ್ಪಡೆಗೊಂಡರು.

    ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಈಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಪಪಂ ಉಪಾಧ್ಯಕ್ಷ ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷೆ ಯಶೋದಮ್ಮ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ಮುಖಂಡರಾದ ಕೆಂಪಣ್ಣ, ಮೆಹಬೂಬ್, ಮಾದಯ್ಯ ಹಾಗೂ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts