More

    ಬದಲಾಗಲಿ ವಿದ್ಯಾವಂತರ ಅಸಡ್ಡೆ -ನ್ಯಾಯಾಧೀಶ ಮಹಾವೀರ ಆಶಯ -ಜಿಲ್ಲಾಡಳಿತದಿಂದ ಮತದಾರ ದಿನ

    ದಾವಣಗೆರೆ: ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿದೆ. ವಿದ್ಯಾವಂತರೇ ಈ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದಾರೆ. ಇದು ಬದಲಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ ಆಶಯ ವ್ಯಕ್ತಪಡಿಸಿದರು.
    ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿದೆ. ಸುಭದ್ರ ಮತ್ತು ಉತ್ತಮ ಸರ್ಕಾರ ರಚನೆಗೆ 18 ವರ್ಷ ತುಂಬಿದ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ಹೇಳಿದರು.
    ಕೇಂದ್ರ ಸರ್ಕಾರ 2011ರಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಘೋಷಣೆ ಮಾಡಿತ್ತು. ಅಂದಿನಿಂದಲೂ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ಬಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಬಹಳಷ್ಟು ಉತ್ತಮ ಸುಧಾರಣೆಗಳು ಆಗುತ್ತಲೇ ಇವೆ. ಒಂದು ದೇಶ ಬಲಿಷ್ಠ ಎನಿಸಿಕೊಳ್ಳಲು ಒಳ್ಳೆಯ ಚುನಾಯಿತ ಸರ್ಕಾರ ಇರಬೇಕು ಎಂದು ಆಶಿಸಿದರು.
    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ ದೇಶದ ಬಲಿಷ್ಠ ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಮೂಲ ಬುನಾದಿಯನ್ನು ಭದ್ರಗೊಳಿಸುವ ಶ್ರೇಷ್ಠ ಶಕ್ತಿ ಮತದಾನದ ಹಕ್ಕಿನಲ್ಲಿದೆ. ಮುಕ್ತ, ನ್ಯಾಯಸಮ್ಮತ ಚುನಾವಣೆಗಳು ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದರ ಜತೆಗೆ ಪ್ರಾಮಾಣಿಕತೆ ತೋರಿಸಿಕೊಟ್ಟಿದೆ ಎಂದರು.
    18 ವರ್ಷ ತುಂಬಿದ ಪ್ರತಿಯೊಬ್ಬರೂ ಕೂಡ ರಾಷ್ಟ್ರೀಯ ಮತದಾರರ ದಿನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಒಂದು ಮತದಿಂದ ವ್ಯತ್ಯಾಸವಾಗದು ಎಂಬ ಭಾವನೆ ಕೆಲವರಲ್ಲಿದೆ. ಒಂದು ಮತವೇ ಕೆಲವರನ್ನು ಸೋಲಿಸಿದ, ಗೆಲ್ಲಿಸಿದ ಹಾಗೂ ಸರ್ಕಾರದ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ ನಿದರ್ಶನಗಳಿವೆ ಎಂದು ತಿಳಿಸಿದರು.
    2023 ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿದೆ. ಅಂಗವಿಕಲರು ಶೇ.80ರಷ್ಟು ಮತ ಚಲಾಯಿಸಿದ್ದಾರೆ. ಅದರಂತೆ ಯುವ ಮತದಾರರನ್ನು ಸೆಳೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತೆಯರು ಸೇರಿ ಎಲ್ಲರನ್ನು ಮತದಾರರ ಪಟ್ಟಿಗೆ ಸೇರಿಸಲು ಸ್ವೀಪ್ ಇತರ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.
    ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಪ್ರಾಸ್ತಾವಿಕ ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಮುಖ್ಯ ಬುನಾದಿ. ಬಹಳಷ್ಟು ದೇಶಗಳಲ್ಲಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಲಾಗಿಲ್ಲ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತ ಚಲಾಯಿಸುವ ವಿಶೇಷ ಹಕ್ಕು ನೀಡಲಾಗಿದೆ ಎಂದರು.
    ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಬಂಧ, ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚುನಾವಣಾ ಪ್ರಕ್ರಿಯೆಯ ಉತ್ತಮ ಕಾರ್ಯಕ್ಕಾಗಿ ಬಿಎಲ್ಒ, ಮೇಲ್ವಿಚಾರಕರನ್ನು ಸನ್ಮಾನಿಸಲಾಯಿತು. 18 ವರ್ಷ ತುಂಬಿದವರಿಗೆ ಎಪಿಕ್ ಕಾರ್ಡ್‌ಗಳನ್ನು ವಿತರಿಸಲಾಯಿತು.
    ಪಾಲಿಕೆ ಆಯುಕ್ತೆ ಎನ್.ರೇಣುಕಾ ಸ್ವಾಗತಿಸಿದರು. ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಶಾರದಾ ಜಿ.ದೊಡ್ಡಗೌಡರ್, ಡಿಡಿಪಿಐ ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts