More

    ಬಂದೋಬಸ್ತ್ ನಡುವೆ ಪರೀಕ್ಷೆ

    ವಿರಾಜಪೇಟೆ: ತಾಲೂಕಿನಾದ್ಯಂತ ಎಂಟು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು.

    ವಿರಾಜಪೇಟೆಯ ಜೂನಿಯರ್ ಕಾಲೇಜಿನಲ್ಲಿ 448 ಹಾಗೂ ಸಂತ ಅನ್ನಮ್ಮ ಶಾಲೆಯಲ್ಲಿ 431 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನೀತಾ ಕುಮಾರಿ ಹಾಗೂ ಇಲ್ಲಿನ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಬೆನ್ನಿ ಜೋಸೆಫ್ ಪರೀಕ್ಷಾ ಕೇಂದ್ರದ ಉಸ್ತುವಾರಿಯಲ್ಲಿದ್ದರು.

    ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ 7.30ರಿಂದಲೇ ಪರೀಕ್ಷಾ ಕೇಂದ್ರಕ್ಕೆ ಬರಲು ಆರಂಭಿಸಿದ್ದರು. ಸುಮಾರು 9.30ರವರೆಗೂ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಯಿತು.

    ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸರದಿ ಪ್ರಕಾರ ಪರಸ್ಪರ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಯಿತು.

    ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ತಾಲೂಕಿನ ವಿವಿಧೆಡೆಗಳಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು 16 ಮಾರ್ಗಗಳಿಗೆ 28 ಖಾಸಗಿ ಬಸ್ಸುಗಳನ್ನು ಗೊತ್ತುಪಡಿಸಲಾಗಿದೆ. ಬಸ್‌ನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲಾಗಿತ್ತು. ಕುಟ್ಟದ ಗಡಿ ಭಾಗದಲ್ಲಿರುವ ವಿದ್ಯಾರ್ಥಿಗಳನ್ನು ಬುಧವಾರ ಸಂಜೆಯೇ ಪರೀಕ್ಷಾ ಕೇಂದ್ರದ ಬಳಿಗೆ ಕರೆದೊಯ್ಯಲಾಗಿದೆ. ತಾಲೂಕಿನ ಎಂಟು ಪರೀಕ್ಷಾ ಕೇಂದ್ರಗಳ ವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಿಬ್ಬಂದಿ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದರು. ವಿದ್ಯಾರ್ಥಿಗಳ ಆರೋಗ್ಯದ ಕಡೆಗೂ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಕ್ಯಾತೆಗೌಡ ಅವರ ನೇತೃತ್ವದಲ್ಲಿ ವಿರಾಜಪೇಟೆ ವಿಭಾಗದ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರದ ನೂರು ಮೀಟರ್ ಅಂತರದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts