More

    ಬಂಡೀಪುರದಲ್ಲಿ ಅನಾರೋಗ್ಯಪೀಡಿತ ಆನೆ ಪತ್ತೆ


    ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿ ಆರಂಭವಾದ ಮೊದಲ ದಿನವೇ ಅನಾರೋಗ್ಯಪೀಡಿತ ಆನೆಯೊಂದು ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.


    ಸೋಮವಾರದಿಂದ ಬಂಡೀಪುರದಲ್ಲಿ ಸಫಾರಿ ಆರಂಭವಾಗಿದ್ದು ಅಂದು ಮಧ್ಯಾಹ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅರಣ್ಯದಲ್ಲಿ ಆನೆಗಳ ಹಿಂಡು ಕಂಡುಬಂದಿವೆ. ಇವುಗಳಲ್ಲಿ ಒಂದು ಹೆಣ್ಣಾನೆಗೆ ಮೈಮೇಲೆ ಗಂಟುಗಳಿರುವುದು ಕಂಡು ಅಚ್ಚರಿಗೊಂಡ ಪ್ರವಾಸಿಗರು ಇವುಗಳ ಫೋಟೋ, ವಿಡಿಯೋ ತೆಗೆದು ‘ವಿಜಯವಾಣಿ’ಗೆ ಕಳುಹಿಸಿದ್ದಾರೆ. ಆ ಆನೆಗೆ ಚಿಕಿತ್ಸೆ ನೀಡಲು ನೆರವಾಗುವಂತೆ ಕೋರಿದ್ದಾರೆ.


    ಇತ್ತೀಚೆಗೆ ವಿಶ್ವವೇ ಕಂಡು ಕೇಳರಿಯದ ಕರೊನಾ ವೈರಸ್‌ನಿಂದ ಬಳಲುತ್ತಿರುವ ಸಂದರ್ಭದಲ್ಲಿ ಕಾಡಿನಲ್ಲಿ ಸ್ವಚ್ಛಂದವಾಗಿ ಜೀವಿಸುವ ದೈತ್ಯಜೀವಿ ಕಾಡಾನೆಯ ಮೈಮೇಲೆ ಗಂಟು ದೊಡ್ಡ ಪ್ರಮಾಣದಲ್ಲಿ ಮೂಡಿವೆ.


    ಕೀಟಬಾಧೆ, ಕಲುಷಿತ ನೀರಿನ ಸೇವನೆ, ಇಲ್ಲವೇ ಅಲರ್ಜಿ ಸಮಸ್ಯೆಯಿಂದ ಉಂಟಾಗಿರುವ ಗಂಟುಗಳಿಂದ ಆನೆಯು ಬಳಲುತ್ತಿರುವಂತಿದೆ. ಮುಂದಿನ ದಿನಗಳಲ್ಲಿ ಈ ಗಂಟುಗಳು ಗಾಯಗಳಾಗಿ ವ್ರಣವಾದರೆ ಆನೆ ಸಾವಿಗೀಡಾಗುವ ಸಂಭವವಿದೆ.


    ಆದ್ದರಿಂದ ಅರಣ್ಯ ಇಲಾಖೆ ಕೂಡಲೇ ಇವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ವನ್ಯಜೀವಿಯನ್ನು ಕಾಯಿಲೆಯಿಂದ ಪಾರು ಮಾಡಬೇಕು ಎಂದು ಪ್ರವಾಸಿಗರಾದ ಮಹೇಶ್, ಪ್ರಕಾಶ್, ಸತೀಶ್ ಆಗ್ರಹಿಸಿದ್ದಾರೆ.

    ಆನೆಯ ಮೈಮೇಲೆ ಗಂಟುಗಳಾಗಿದ್ದು ಮೇಲ್ನೋಟಕ್ಕೆ ಇದು ಗ್ಯಾಡ್ ಫ್ಲೈಸ್ (ಉಂಆ ಈಐಇ)ನಿಂದ ಬಳಲುತ್ತಿರುವಂತೆ ಕಂಡುಬರುತ್ತಿದೆ. ಆನೆಯು ಮರಕ್ಕೆ ಮೈಉಜ್ಜಿಕೊಳ್ಳುವುದರಿಂದ ಗಂಟುಗಳು ಒಡೆದು ಹುಳುಗಳು ಹೆಚ್ಚುತ್ತಾ ಹೋಗುತ್ತವೆ. ರೋಗಪೀಡಿತ ಕಾಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಸ್ಟ್ಯಾಂಡಿಂಗ್ ಅನೆಸ್ತೇಷಿಯಾ ಕೊಟ್ಟು ಒಂದು ಗಂಟನ್ನು ಒಡೆದು ಅದರಲ್ಲಿರುವ ಹುಳುಗಳನ್ನು (ಲಾರ್ವಾ) ಪರೀಕ್ಷಿಸಿದ ನಂತರ ಖಚಿತವಾಗಿ ರೋಗವನ್ನು ಗುರುತಿಸಬಹುದು. ಇದು ಗ್ಯಾಡ್ ಫ್ಲೈಸ್ ಎಂದು ಖಚಿತವಾದರೆ ನಂತರ ಆನೆಯನ್ನು ಕ್ಯಾಂಪಿಗೆ ಸ್ಥಳಾಂತರಿಸಿ ಅದರ ವಯಸ್ಸು, ಗಂಟುಗಳ ಪ್ರಮಾಣ ಹಾಗೂ ಹುಳುಗಳ ಹರಡುವಿಕೆ ಆಧಾರದ ಮೇಲೆ ಹತ್ತರಿಂದ ಇಪ್ಪತ್ತು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಗುಣವಾಗಲಿದೆ.
    ಡಾ.ಎಚ್.ಎಸ್.ಪ್ರಯಾಗ್, ವನ್ಯಜೀವಿ ತಜ್ಞ ಬೆಂಗಳೂರು

    ಮೈಮೇಲಿನ ಕುರುಗಳಿಂದ ಗಂಟುಗಳಾಗಿವೆ ಎಂದು ಅರಣ್ಯ ಇಲಾಖೆಯ ಪಶುವೈದ್ಯರು ತಿಳಿಸಿದ್ದಾರೆ. ಆನೆಯನ್ನು ಪತ್ತೆಹಚ್ಚಿ ಗಮನಿಸಲು ಕ್ರಮಕೈಗೊಳ್ಳಲಾಗುವುದು.
    ಟಿ.ಬಾಲಚಂದ್ರ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts