More

    ಫ್ಲೈ ಓವರ್ ವಿನ್ಯಾಸ ನಿರ್ಧರಿಸಲಿದೆ ಮಣ್ಣು ಪರೀಕ್ಷೆ

    ಆನಂದ ಅಂಗಡಿ ಹುಬ್ಬಳ್ಳಿ

    ಉತ್ತರ ಕರ್ನಾಟಕದ ಮೊದಲ ಫ್ಲೈ ಓವರ್ ನಿರ್ವಣಕ್ಕಾಗಿ ಹುಬ್ಬಳ್ಳಿಯ ನಿಯೋಜಿತ ಸ್ಥಳದ ಮಣ್ಣು ಸಂಗ್ರಹಿಸುವ ಕಾರ್ಯ ನಡೆದಿದೆ. ಈ ಕೆಲಸವೇ 2 ತಿಂಗಳಾಗಲಿದೆ. ಬಳಿಕ ಮಣ್ಣಿನ ಪರೀಕ್ಷೆ ನಡೆಯಲಿದ್ದು, ಫ್ಲೈ ಓವರ್ ವಿನ್ಯಾಸ ಹೇಗಿರಬೇಕು ಎನ್ನುವುದನ್ನು ಇದು ನಿರ್ಧರಿಸಲಿದೆ.

    ಕಳೆದ ಜ. 15ರಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಸೇರುವ ರಸ್ತೆಗಳಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಅಂದಾಜು 322 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ವಣದ ಗುತ್ತಿಗೆಯನ್ನು ಹರಿಯಾಣ ಮೂಲದ ಜಾಂಡು ಕನ್​ಸ್ಟ್ರಕ್ಷನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ.

    ಫ್ಲೈ ಓವರ್ ನಿರ್ವಣಕ್ಕೆ ಗಟ್ಟಿಯಾದ ನೆಲದಲ್ಲಿ ಪಿಲ್ಲರ್ ನಿರ್ವಿುಸುವುದು ಅಗತ್ಯ. ಪಿಲ್ಲರ್​ಗಳಿಗೆ ಭೂಮಿಯ ಎಷ್ಟು ಆಳದಲ್ಲಿ ಅಡಿಪಾಯ ಹಾಕಬೇಕು ಹಾಗೂ ಎಷ್ಟು ಅಗಲದ ಪಿಲ್ಲರ್​ಗಳನ್ನು ನಿರ್ವಿುಸಬೇಕು ಎಂಬುದನ್ನು ಮಣ್ಣು ಪರೀಕ್ಷೆಯ ವರದಿ ನಿರ್ಧರಿಸಲಿದೆ. ದೆಹಲಿಯಲ್ಲಿರುವ ಪ್ರಯೋಗಾಲಯಕ್ಕೆ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮಣ್ಣು ಪರೀಕ್ಷೆ ವರದಿಯನ್ನಾಧರಿಸಿಯೇ ಪ್ರತಿಯೊಂದು ಪಿಲ್ಲರ್ ತಲೆ ಎತ್ತಲಿದೆ.

    ಕಳೆದ 10 ದಿನಗಳಿಂದ ಲ್ಯಾಮಿಂಗ್ಟನ್ ರಸ್ತೆಯಲ್ಲಿನ ಭೂಮಿಯ ಆಳದಿಂದ ಮಣ್ಣು ತೆಗೆಯುವ ಕಾರ್ಯವನ್ನು ಜಾಂಡು ಕನ್​ಸ್ಟ್ರಕ್ಷನ್ ಕಂಪನಿ ಪ್ರಾರಂಭಿಸಿದೆ. ಚನ್ನಮ್ಮ ವೃತ್ತದಿಂದ ವಿಜಯಪುರ ರಸ್ತೆ, ಗದಗ ರಸ್ತೆ, ಧಾರವಾಡ ರಸ್ತೆ, ಗೋಕುಲ ರಸ್ತೆ ಹಾಗೂ ಬೆಂಗಳೂರು ರಸ್ತೆಯಲ್ಲಿ ಫ್ಲೈ ಓವರ್ ನಿರ್ವಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪಿಲ್ಲರ್ ತಲೆ ಎತ್ತಲಿರುವ ಪ್ರತಿ 1.5 ಮೀಟರ್ ಅಂತರದಲ್ಲಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ಕೆಲವೆಡೆ 10 ಮೀಟರ್, ಇನ್ನೂ ಕೆಲವೆಡೆ 15-20 ಮೀಟರ್ ಆಳದ ತಗ್ಗು ತೋಡಿ ಮಣ್ಣು, ಕಲ್ಲು ಸಂಗ್ರಹಿಸಲಾಗುತ್ತಿದೆ. ಈ ಐದೂ ರಸ್ತೆಗಳಲ್ಲಿ ಫ್ಲೈ ಓವರ್​ಗಾಗಿ ಕನಿಷ್ಠ 70 ಪಿಲ್ಲರ್​ಗಳು ತಲೆ ಎತ್ತಲಿವೆ. ಬಂಕಾಪುರ ಚೌಕ್ ಮಾರ್ಗದಲ್ಲಿ ಪ್ರಾಥಮಿಕ ಹಂತದಲ್ಲಿ 1 ಪಿಲ್ಲರ್ ಮಾತ್ರ ನಿರ್ವಿುಸುವ ಯೋಜನೆ ಇದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಫ್ಲೈ ಓವರ್ ನಿರ್ವಣದ ಕಾಮಗಾರಿ ಪ್ರಾರಂಭಗೊಳ್ಳಲಿದೆ.

    ರಾಜ್ಯದಲ್ಲಿ ಮೊದಲ ಕಾಮಗಾರಿ
    ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ನಿರ್ವಣದ ಗುತ್ತಿಗೆ ಪಡೆದಿರುವ ಹರಿಯಾಣ ಮೂಲದ ಜಾಂಡು ಕನ್​ಸ್ಟ್ರಕ್ಸನ್ ಕಂಪನಿ ಮಹಾರಾಷ್ಟ್ರದಲ್ಲಿ 7, ಅಂಡಮಾನ್ ಮತ್ತು ನಿಕೋಬಾರ್​ನಲ್ಲಿ 1, ಹರಿಯಾಣದಲ್ಲಿ 4, ಹಿಮಾಚಲ ಪ್ರದೇಶದ 3 ಸ್ಥಳಗಳಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿದೆ. ಕೆಲವೆಡೆ ಕಾಮಗಾರಿ ಮುಗಿದಿದ್ದರೆ, ಇನ್ನೂ ಕೆಲವೆಡೆ ನಿರ್ಮಾಣ ಹಂತದಲ್ಲಿದೆ. ಹುಬ್ಬಳ್ಳಿಯಲ್ಲಿ ನಿರ್ವಿುಸುತ್ತಿರುವ ಫ್ಲೈ ಓವರ್ ಈ ಕಂಪನಿಗೆ ಕರ್ನಾಟಕದಲ್ಲಿಯೇ ಮೊದಲನೆಯದ್ದು.

    ಮಣ್ಣು ಪರೀಕ್ಷೆಯ ವರದಿ ಬಂದ ನಂತರ ವಿನ್ಯಾಸ ರಚನೆಕಾರರು, ಇಂಜಿನಿಯರ್​ಗಳು ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳ ತಂಡ ಹುಬ್ಬಳ್ಳಿಗೆ ಬರಲಿದೆ. ನಿಗದಿತ ಅವಧಿಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ನಮ್ಮ ತಂಡ ಬದ್ಧವಾಗಿದೆ.
    ರಾಹುಲ್ ಬಿಸು, ಜಾಂಡು ಕನ್​ಸ್ಟ್ರಕ್ಷನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್​ನ ಸಂಯೋಜಕ

    ದೆಹಲಿಯಲ್ಲಿರುವ ಪ್ರಯೋಗಾಲಯಕ್ಕೆ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ನಂತರವಷ್ಟೇ ಫ್ಲೈ ಓವರ್​ನ ವಿನ್ಯಾಸ ಸಿದ್ಧಗೊಳ್ಳಲಿದೆ. ಪಿಲ್ಲರ್ ನಿರ್ವಣಗೊಳ್ಳಲಿರುವ ಪ್ರತಿ ಸ್ಥಳದ ಮಣ್ಣು ಪರೀಕ್ಷೆ ನಡೆಸುವುದು ಕಡ್ಡಾಯ.
    ವಸಂತ ನಾಯಕ, ಪಿಡಬ್ಲ್ಯೂಡಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧೀಕ್ಷಕ ಇಂಜಿನಿಯರ್, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts