More

    ಪ್ರಜಾಪ್ರಭುತ್ವದ ಮೌಲ್ಯ ಕಣ್ಮರೆ

    ತುಮಕೂರು: ಧಾರ್ಮಿಕ ಮೂಲಭೂತವಾದವು ಈ ದೇಶದೊಳಗಡೆ ಸಂವಾದವನ್ನು ನಾಶ ಮಾಡುತ್ತಿರುವ ದುಷ್ಟಶಕ್ತಿಯಾಗಿ ಬೆಳೆಯುತ್ತಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

    ನಗರದ ಕನ್ನಡ ಭವನದಲ್ಲಿ ಭಾನುವಾರ ಪ್ರೊ.ಬರಗೂರು ಗೆಳೆಯರ ಬಳಗದ ವತಿಯಿಂದ ಬರಗೂರು ರಾಮಚಂದ್ರಪ್ಪ ಅವರ ‘ಕಾಗೆ ಕಾರುಣ್ಯದ ಕಣ್ಣು’ (ಆಯ್ದ ಅನುಭವಗಳ ಕಥನ) ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಅದರ ಮೂಲ ಲಕ್ಷಣವೇ ಸಂವಾದ. ಆದರೆ, ಸಂವಾದವೇ ಸಾಧ್ಯವಾಗದಿರುವ ಸನ್ನಿವೇಶವನ್ನು ನಾವು ಕಾಣುತ್ತಿದ್ದು ಪ್ರಜಾಪ್ರಭುತ್ವದ ಮೌಲ್ಯಗಳೇ ನಮ್ಮಲ್ಲಿ ಮರೆಯಾಗುತ್ತಿವೆ ಎಂದು ಬೇಸರಿಸಿದರು.
    ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯಗಳು ಇರುವುದು ನಿಜ. ಪರಸ್ಪರ ಸಂವಾದ, ಮಾತನಾಡುವ ಪರಿಸ್ಥಿತಿಯೇ ನಮ್ಮ ನಡುವೆ ಇಲ್ಲವಾಗಿದೆ. ಹಾಗಾಗಿ, ಭಿನ್ನಾಭಿಪ್ರಾಯಗಳನ್ನು ಭಾಷಿಕ ಹಲ್ಲೆಯಾಗಿ ರೂಪಾಂತರಗೊಳಿಸುವ ಧಾರ್ಮಿಕ ಮೂಲಭೂತವಾದಿಗಳ ದೌರ್ಜನ್ಯ ಹೆಚ್ಚಾಗುತ್ತಿದೆ. ಇಂತಹ ಧಾರ್ಮಿಕ ಮೂಲಭೂತವಾದ ಯಾವ ಧರ್ಮದಲ್ಲಿದ್ದರೂ ಅದನ್ನು ವಿರೋಧಿಸಬೇಕು. ಇಂತಹ ಮೂಲಭೂತವಾದವು ಸಮಾಜದಲ್ಲಿ ದ್ವೇಷ ಬಿತ್ತುತ್ತದೆ, ವಿಭಜನೆಯನ್ನು ಉಂಟುಮಾಡುತ್ತದೆ. ಸಂವಾದವನ್ನು ಹಾಳುಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಚಿಂತಕ ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ನಟ ಸುಂದರರಾಜ್, ಲೇಖಕ ಡಾ.ರಾಜಪ್ಪ ದಳವಾಯಿ, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಆಕಾಂಕ್ಷ್ ಬರಗೂರು ಉಪಸ್ಥಿತರಿದ್ದರು.

    ಪಿಡುಗುಗಳಾಗಿವೆ: ಪ್ರಜಾಪ್ರಭುತ್ವ ಹೆಸರಿನೊಳಗಡೆ ಸರ್ವಾಧಿಕಾರ ನಡೆಸುತ್ತಿರುವವರು ನಮ್ಮ ನಡುವೆ ಇದ್ದಾರೆ. ಧರ್ಮ-ಧರ್ಮ, ಜಾತಿ-ಜಾತಿಗಳ ನಡುವೆ ದ್ವೇಷ ಹುಟ್ಟು ಹಾಕಲಾಗುತ್ತಿದೆ. ಒಂದು ಕಡೆ ಭಯೋತ್ಪಾದನೆ ಜಾಗತಿಕವಾಗುತ್ತದೆ. ಇನ್ನೊಂದು ಕಡೆ ದ್ವೇಷೋತ್ಪಾದನೆ ಹೆಚ್ಚುತ್ತಿದೆ. ದ್ವೇಷೋತ್ಪಾದನೆ ಫಲಿತಕ್ಕೆ ಮಣಿಪುರ ಒಂದು ಉದಾಹರಣೆ. ದ್ವೇಷೋತ್ಪಾದನೆ-ಭಯೋತ್ಪಾದನೆ ಎರಡು ಪಿಡುಗುಗಳಾಗಿ ಕಾಡುತ್ತಿವೆ ಎಂದು ಬರಗೂರು ಹೇಳಿದರು. ಹುಟ್ಟು ಮತ್ತು ಸಾವಿನ ನಡುವೆ ನಾವೆಲ್ಲಾ ಸಮಾಜಕ್ಕೆ ಕೊಡುಗೆ ಕೊಟ್ಟಿರುತ್ತೇವೊ ಸಾವಿನ ನಂತರವೂ ಚಿರಸ್ಥಾಯಿ ಆಗಿ ಇರಬೇಕು. ನಾವು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಬರಗೂರು ಬರಹಗಳು ಬಡವರು, ಶೋಷಿತರು, ಶ್ರಮಿಕರ ಪರ ಧ್ವನಿಯಾಗಿವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

    ಪಿಕ್ ಪಾಕೆಟ್ ಮಾಡುವವರೂ ಪರಿಷತ್‌ಗೆ !: ವಿಧಾನಪರಿಷತ್‌ಗೆ ಎಂತೆಂಥವರನ್ನೋ ನಾಮಕರಣ ಮಾಡಲಾಗುತ್ತಿದೆ. ಪಿಕ್‌ಪಾಕೆಟ್ ಮಾಡುವವರನ್ನೂ ನೇಮಕ ಮಾಡಲಾಗಿದೆ. ಬರಗೂರು ರಾಮಚಂದ್ರಪ್ಪ ಅವರನ್ನು ಪರಿಷತ್‌ಗೆ ನಾಮಿನಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ. ಎಲ್ಲರಿಗಿಂತ ಸಿದ್ದರಾಮಯ್ಯಗೆ ಬರಗೂರು ಅಚ್ಚುಮೆಚ್ಚು. ಅವರನ್ನು ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಿದರೆ ಆ ಸ್ಥಾನಕ್ಕೂ ಗೌರವ ಬರಲಿದೆ. ಆದರೆ, ಈ ಪತ್ರಿಕೆಯವರು ಬೇರೆ ಹೇಳಿದ್ದನ್ನೆಲ್ಲಾ ಬಿಟ್ಟು ಪಿಕ್ ಪಾಕೇಟ್‌ನವರನ್ನು ಪರಿಷತ್‌ಗೆ ನೇಮಿಸಿದ್ದಾರೆ ಅಂತ ರಾಜಣ್ಣ ಹೇಳಿದರು ಅಂತ ಬರೀತಾರೆ ನೋಡಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದು ಸಭೆಯಲ್ಲಿ ನಗೆ ಉಕ್ಕುವಂತೆ ಮಾಡಿತು.

    ವೋಟಿಗಾಗಿ ಬಳಸಿಕೊಳ್ಳಲಿಲ್ಲ !: ಶ್ರೀರಾಮನ ಭಕ್ತರಾಗಿದ್ದ ಗಾಂಧೀಜಿ ಎಂದಿಗೂ ಶ್ರೀರಾಮನನ್ನು ಸ್ವಾರ್ಥಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಬಳಸಿಕೊಂಡವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲೂ ದೈವತ್ವ ತರಲಿಲ್ಲ. ಗಾಂಧೀಜಿ ಶ್ರೀರಾಮನನ್ನು ವೋಟಿಗಾಗಿ ಬಳಸಿಕೊಳ್ಳಲಿಲ್ಲ ಎಂದು ಬರಗೂರು ರಾಮಚಂದ್ರಪ್ಪ ಅವರು ಆಂಧ್ರದ ಪ್ರಖರ ನಾಸ್ತಿಕವಾದಿ ಗೋರಾ ಹಾಗೂ ಆಸ್ತಿಕವಾದಿ ಗಾಂಧೀಜಿ ನಡುವಿನ ಸಂವಾದವನ್ನು ವಿವರಿಸಿದ ಸಂದರ್ಭದಲ್ಲಿ ಹೇಳಿದ್ದು ವಿಶೇಷವಾಗಿತ್ತು.

    ಎಷ್ಟೋ ಸಾರಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದ ಎಂಎಲ್​ಸಿ ಸ್ಥಾನವನ್ನು ಬಿಟ್ಟಿದ್ದೇನೆ. ಅದು ಬೇರೆಯ ವಿಷಯ. ಈ ಸಮಾರಂಭವನ್ನು ಏರ್ಪಡಿಸಿರುವುದು ನನ್ನನ್ನು ಎಂಎಲ್​ಸಿ ಮಾಡಲಿಕ್ಕೆ ಅಲ್ಲ. ತಪ್ಪು ವ್ಯಾಖ್ಯಾನಗಳನ್ನು ಮಾಡುವ ಕಾಲದಲ್ಲಿ ಇಂತಹವುಗಳು ನಡೆಯುತ್ತವೆ. ಹಾಗೆ ಅರ್ಥ ಮಾಡಿಕೊಳ್ಳುವುದು ಬೇಡ.| ನಾಡೋಜ ಬರಗೂರು ರಾಮಚಂದ್ರಪ್ಪ, ಸಾಹಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts