More

    ಪರೀಕ್ಷೆಗೂ ಮೊದಲು ಆರೋಗ್ಯ ತಪಾಸಣೆ

    ವಣೂರ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ತಪಾಸಣೆ ಕೈಗೊಂಡು ಪರೀಕ್ಷೆಗೆ ಹಾಜರಾತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.

    ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಹಾಗೂ ನಕಲು ತಡೆಯಲು ಮಹಿಳಾ ಸಿಬ್ಬಂದಿ ನೇಮಕ ಮಾಡಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅಳವಡಿಸುವುದು, ಮೊಬೈಲ್ ಹಾಗೂ ಪಾಲಕರನ್ನು ದೂರ ಉಳಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್​ನಲ್ಲಿ ಪರೀಕ್ಷೆ ನಡೆಸಬೇಕು. ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ತಪಾಸಣೆ ಕೈಗೊಳ್ಳುವ ಕಾರಣ ವಿದ್ಯಾರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಸೂಚಿಸಬೇಕು. ಉಪವಿಭಾಗದ(ಸವಣೂರ, ಶಿಗ್ಗಾಂವ, ಹಾನಗಲ್ಲ) ವ್ಯಾಪ್ತಿಯಲ್ಲಿ ಮಾ. 31ರವರೆಗೆ 144 ಜಾರಿ ಇರುವ ಕಾರಣ ಪರೀಕ್ಷಾ ಸಿದ್ಧತೆಯನ್ನು ಗೊಂದಲಕ್ಕೆ ಅವಕಾಶ ನೀಡದ ಹಾಗೆ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಬಿಇಒ ಐ.ಬಿ. ಬೆನಕೊಪ್ಪ ಮಾತನಾಡಿ, ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಮಾ. 23ರಿಂದ ಏ. 9ರವರೆಗೆ ಜರುಗಲಿವೆ. ತಾಲೂಕಿನಲ್ಲಿ 19 ಸರ್ಕಾರಿ ಪ್ರೌಢಶಾಲೆ, 10 ಅನುದಾನಿತ ಪ್ರೌಢಶಾಲೆ, 7 ಅನುದಾನರಹಿತ ಪ್ರೌಢಶಾಲೆ ಸೇರಿ ಒಟ್ಟು 36 (28 ಕನ್ನಡ, 2 ಉರ್ದು, 6 ಆಂಗ್ಲ ಮಾಧ್ಯಮ) ಪ್ರೌಢಶಾಲೆಗಳ 2,047 ವಿದ್ಯಾರ್ಥಿಗಳು (1,082 ಬಾಲಕರು, 965 ಬಾಲಕಿಯರು) ಪರೀಕ್ಷೆ ಬರೆಯಲಿದ್ದಾರೆ ಎಂದರು.

    ವಿದ್ಯಾರ್ಥಿಗಳು ಕರೊನಾ ವೈರಸ್ ಬಗ್ಗೆ ಭಯಬೀತರಾಗುವುದು ಬೇಡ. ಶುಚಿತ್ವದೊಂದಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು.ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ ಪಿ., ಬಿಆರ್​ಸಿ ನಾಗರಾಜ ಬಣಕಾರ, ಸಿಡಿಪಿಒ ಅಣ್ಣಪ್ಪ ಹೆಗಡೆ, ಅಕ್ಷರ ದಾಸೋಹ ನಿರ್ದೇಶಕ ಕಲ್ಮೇಶ ಸುಣದೋಳಿ, ಪರೀಕ್ಷಾ ಮೆಲ್ವೀಚಾರಕರು, ವಿವಿಧ ಪ್ರೌಢಶಾಲೆಗಳ ಮುಖ್ಯಗುರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts