More

    ಪರಿಹಾರಕ್ಕಾಗಿ ಜಲಾಗಾರ ಏರಿದ ರೈತರು

    ರಾಣೆಬೆನ್ನೂರ: ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ನಿರ್ವಣಕ್ಕೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಒತ್ತಾಯಿಸಿ ಮೇಲ್ಮಟ್ಟದ ಜಲಾಗಾರ ಏರಿ ಕುಳಿತ ಘಟನೆ ತಾಲೂಕಿನ ಮಾಗೋಡ ರಸ್ತೆಯ ಯುಟಿಪಿ ಕಾರ್ಯಾಲಯದ ಎದುರು ಬುಧವಾರ ನಡೆದಿದೆ.

    ಪರಿಹಾರಕ್ಕಾಗಿ ಒತ್ತಾಯಿಸಿ ತಿಂಗಳಿಂದ ಪ್ರತಿಭಟನೆ, ಧರಣಿ ನಡೆಸುತ್ತಿದ್ದೇವೆ. ಆದರೆ, ಈವರೆಗೂ ನಯಾಪೈಸೆ ಪರಿಹಾರ ನೀಡಿಲ್ಲ. ಯಾವ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ರೈತರು, ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಆಯುಕ್ತರ ವಿರುದ್ಧ ಘೊಷಣೆ ಕೂಗಿದರು.

    ಪರಿಹಾರ ವಿಳಂಬ ಹಾಗೂ ತಾರತಮ್ಯದ ವಿರುದ್ಧ ರೈತರು ನ್ಯಾಯಾಲಯದ ಮೊರೆ ಹೋಗಿದ್ದೇವೆ. 28(ಎ) ಪ್ರಕರಣದಲ್ಲಿ 36 ರೈತರ ಪರವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಆದೇಶ ಮಾಡಿದ್ದಾರೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ? ನಮಗೆ ನ್ಯಾಯ ಸಿಗುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

    ವಕೀಲ ಎಸ್.ಡಿ. ಹಿರೇಮಠ ಮಾತನಾಡಿ, 28(ಎ) ಪ್ರಕರಣದಲ್ಲಿ 800ಕ್ಕೂ ಅಧಿಕ ರೈತರಿಗೆ 52 ಕೋಟಿ ರೂ. ನೀಡಬೇಕಿದೆ. ಈಗ 36 ರೈತರ ಪ್ರಕರಣವನ್ನು ವಿಶೇಷ ಭೂ ಸ್ವಾಧೀನಾಧಿಕಾರಿ ಇತ್ಯರ್ಥಗೊಳಿಸಿದರೂ ಪರಿಹಾರ ನೀಡಿಲ್ಲ. ಇಷ್ಟು ದಿನ ಕೊಡುತ್ತೇನೆ ಎಂದವರು ಈಗ ಹೈಕೋರ್ಟ್ ಮೊರೆ ಹೋಗುವ ಕ್ಯಾತೆ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೂ ರೈತರು ಕೆಳಗೆ ಇಳಿಯುವುದಿಲ್ಲ ಎಂದರು. ಸ್ಥಳಕ್ಕೆ ಬಂದ ಪೊಲೀಸರು ರೈತರ ಮನವೊಲಿಸಿ, ಕೆಳಗಿಳಿಸಿದರು. ನಂತರ ಕಚೇರಿ ಎದುರು ರೈತರು ಧರಣಿ ಮುಂದುವರಿಸಿದರು.

    ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡ, ರೈತರಾದ ಪ್ರಭುಗೌಡ ಸೊರಟೂರ, ಶರಣಪ್ಪ ಕಾಗೇರ, ಬಸಪ್ಪ ಮಾಳಗಿ, ಬೋಜರಾಜ ಆರೇರ, ನಾಂಗಪ್ಪ ವೆಂಕಣ್ಣನವರ, ಕರಬಸಪ್ಪ ಬನ್ನಿಕೋಡ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts