More

    ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ

    ಹುಬ್ಬಳ್ಳಿ: ಬಿಜೆಪಿಯಲ್ಲಿ ಮಾಧ್ಯಮ ವಿಭಾಗದ ಪದಾಧಿಕಾರಿಗಳು ಸೇರಿ ಎಲ್ಲರೂ ಪ್ರತಿನಿತ್ಯ ಪತ್ರಿಕೆ ಹಾಗೂ ಪುಸ್ತಕ ಓದಬೇಕು. ಪತ್ರಿಕೆಗಳಿಂದ ನಿತ್ಯದ ವಿದ್ಯಮಾನಗಳ ಮಾಹಿತಿ ಸಿಗುತ್ತದೆ. ಪುಸ್ತಕಗಳಿಂದ ಜ್ಞಾನ ಬೆಳೆಯುತ್ತದೆ. ಸರಿಯಾದ ಮಾಹಿತಿ ಇದ್ದರೆ ಮಾತ್ರ ಪಕ್ಷದ ಅಭಿಪ್ರಾಯವನ್ನು ಯೋಗ್ಯ ರೀತಿಯಲ್ಲಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಬಹುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

    ಬಿಜೆಪಿ ಧಾರವಾಡ ವಿಭಾಗ ವತಿಯಿಂದ ಶನಿವಾರ ಇಲ್ಲಿಯ ಕೆಎಲ್​ಇ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಿಯಾದ ಮಾಹಿತಿ ಹೊಂದಿಲ್ಲದಿದ್ದರೆ ಮಾಧ್ಯಮಗಳಿಗೆ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ರಾಹುಲ ಗಾಂಧಿ ಹಾಗೆಯೂ ಆಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುತ್ತೇವೆ. ದಿ. ಅರುಣ ಜೇಟ್ಲಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಕಾಶ ಜಾವಡೇಕರ, ಸ್ಮೃತಿ ಇರಾನಿ ಸೇರಿ ಅನೇಕರು ವಕ್ತಾರರಾಗಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾಧ್ಯಮಗಳಿಗೂ ಟಿಆರ್​ಪಿ ಮುಖ್ಯವಾಗಿರುತ್ತದೆ. ಸದನದಲ್ಲಿ ಚೆನ್ನಾಗಿ ಮಾತನಾಡಿದ್ದಕ್ಕಿಂತ ಅಂಗಿ ಹರಿದುಕೊಂಡಿದ್ದೇ ಒಮ್ಮೊಮ್ಮೆ ಹೆಚ್ಚು ಪ್ರಸಾರವಾಗುತ್ತದೆ ಎಂದ ಸಚಿವರು, ಸಂದರ್ಭ ಅರಿತು ಪ್ರತಿಕ್ರಿಯಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಪಕ್ಷದ ಸಂಘಟನೆ ಬಲಗೊಳಿಸಲು, ಜನರಲ್ಲಿ ಸರ್ಕಾರ ಮತ್ತು ಪಕ್ಷದ ಕುರಿತು ಸಕಾರಾತ್ಮಕ ಭಾವನೆ ವೃದ್ಧಿಗೆ ಮಾಧ್ಯಮಗಳನ್ನು ಅವಲಂಬಿಸಬೇಕಾಗುತ್ತದೆ. ಹೀಗಾಗಿ, ಪ್ರತಿ ವಿಭಾಗ ಮಟ್ಟದಲ್ಲೂ ಇಡೀ ದಿನದ ಕಾರ್ಯಾಗಾರ ಸಂಘಟಿಸುತ್ತಿದ್ದೇವೆ ಎಂದು ವಿವರಿಸಿದರು.

    ರಾಜ್ಯ ವಕ್ತಾರ ಗಿರಿಧರ ಉಪಾಧ್ಯಾಯ, ಉಪಾಧ್ಯಕ್ಷ ಪಿ. ರಾಜೀವ, ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸದಸ್ಯ ಶ್ರೀಕಾಂತ ಕೆಡಂಜಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ವಿಭಾಗ ಸಹಪ್ರಭಾರಿಗಳಾದ ನಾರಾಯಣ ಜರತಾರಘರ, ಸಿದ್ದು ಮೊಗಲಿಶೆಟ್ಟರ್, ಪ್ರಮುಖರಾದ ಕಿರಣ ಕವನೂರ, ವಿಜಯಾನಂದ ಶೆಟ್ಟಿ, ಮೋಹನ ರಾಮದುರ್ಗ, ಗುರು ಪಾಟೀಲ, ನಾಗನಗೌಡ, ಇತರರು ಇದ್ದರು. ಜಿಲ್ಲಾ ವಕ್ತಾರ ರವಿ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮ ಸಂಚಾಲಕ ಪ್ರಶಾಂತ ಹಾವಣಗಿ ವಂದಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts