More

    ಪಟಾಕಿ ಸಿಡಿತ ಜೀವ ಸಂಕುಲಕ್ಕೆ ಮಾರಕ

    ಕುಶಾಲನಗರ: ಪಟಾಕಿ ಸಿಡಿತದಿಂದ ಕ್ಯಾನ್ಸರ್ ಸೇರಿದಂತೆ ವಿಷಕಾರಿ ಅನಿಲ ಬಿಡುಗಡೆಗೊಂಡು ಪಕ್ಷಿ-ಪ್ರಾಣಿ ಜೀವ ಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.


    ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್, ಎನ್‌ಎಸ್‌ಎಸ್ ಘಟಕ, ಎಸ್‌ಡಿಎಂಸಿ ವತಿಯಿಂದ ಶನಿವಾರ ಆಯೋಜಿಸಿದ್ದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಜಾಗೃತಿ ಆಂದೋಲನದಲ್ಲಿ ಮಾತನಾಡಿ, ಪಟಾಕಿ ಸಿಡಿಸುವುದರಿಂದ ಹಣದ ದುಂದು ವೆಚ್ಚದ ಜತೆಗೆ ಪರಿಸರ ಮತ್ತು ಆರೋಗ್ಯಕ್ಕೆ ಹಾನಿ, ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಹಾನಿಕಾರಕವಾದ ಅಂಧತ್ವದ ಅಪಾಯಗಳನ್ನು ಸೃಷ್ಟಿಸುವ ಮಾಲಿನ್ಯಕಾರಿ ಪಟಾಕಿಯನ್ನು ಬಿಟ್ಟು ದೀಪಾವಳಿ ಆಚರಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕಿದೆ ಎಂದು ಸಲಹೆ ನೀಡಿದರು.


    ಇದಕ್ಕೂ ಮೊದಲು ಹಸಿರು ದೀಪಾವಳಿ ಆಚರಣೆಗೆ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ ಚಾಲನೆ ನೀಡಿದರು.
    ವಿದ್ಯಾರ್ಥಿಗಳು ಮಣ್ಣಿನ ದೀಪ(ಹಣತೆ) ಗಳನ್ನು ಹಚ್ಚಿ ಸಂಭ್ರಮಿಸಿದರು. ವಿದ್ಯಾರ್ಥಿಗಳು ಹಸಿರು ಪಟಾಕಿ ಆಚರಿಸುವ ಕುರಿತು ಪರಿಸರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.


    ಜಿಲ್ಲಾಡಳಿತ, ಜಿ.ಪಂ., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್‌ನ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಮ್ಮ ನಡೆ ಹಸಿರೆಡೆಗೆ ಗೋ ಗ್ರೀನ್ ಅಭಿಯಾನದಡಿ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಪೂರ್ವಭಾವಿಯಾಗಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ 2022ರ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ನಡೆಸಲಾಯಿತು.


    ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯಾ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಮಾತನಾಡಿದರು. ಶಿಕ್ಷಕಿಯರಾದ ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸರಸ್ವತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts