More

    ನೈಸರ್ಗಿಕ ಅವಘಡ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಕಳಚೆಯಲ್ಲಿ ಉಂಟಾದ ಭೀಕರ ಭೂಕುಸಿತ ಸೇರಿದಂತೆ ಜಿಲ್ಲೆಯ ನೈಸರ್ಗಿಕ ಅವಘಡಗಳನ್ನು ರಾಷ್ಟ್ರೀಯ ವಿಪತ್ತು ಎಂದು ಸರ್ಕಾರ ಘೊಷಿಸಬೇಕು ಎಂದು ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಒತ್ತಾಯಿಸಿದ್ದಾರೆ.
    ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಆಯೋಜಿಸಿದ್ದ ತುರ್ತು ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ‘ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಪ್ರಕೃತಿ ಅವಘಡಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಬೇಕು. ನಾಶವಾದ ಮನೆಗಳನ್ನು ಬೇರೆ ಸ್ಥಳಗಳಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು. ತೋಟ-ಗದ್ದೆ ಸಂಪೂರ್ಣ ನಾಶವಾದ ರೈತರಿಗೆ ಬೇರೆ ಸ್ಥಳದಲ್ಲಿ ಕೃಷಿ ಜಮೀನು ನೀಡಬೇಕು. ರಸ್ತೆ ಪುನರ್ ನಿರ್ಮಾಣ ಆಗಬೇಕು. ಮತ್ತಿಘಟ್ಟ-ಹಳವಳ್ಳಿ ರಸ್ತೆ ನಿರ್ಮಾಣ ಅತ್ಯವಶ್ಯಕವಾಗಿ ಮಾಡಬೇಕು. ಪ್ರವಾಹ, ಭೂ ಕುಸಿತ ಸಂತ್ರಸ್ತರಿಗೆ ಸಮಾಜ ಅಪಾರ ನೆರವಿನ ಹಸ್ತ ಚಾಚಬೇಕು. ಸಂಪೂರ್ಣ ಕೃಷಿ ಭೂಮಿ ನಾಶವಾದ ರೈತರ ಸಾಲ ಮನ್ನಾ ಮಾಡಬೇಕು’ ಎಂದರು.
    ಸ್ವರ್ಣವಲ್ಲೀ ಸಂಸ್ಥಾನ ಇನ್ನಷ್ಟು ಸೇವೆ ನೀಡಲು ನಿರ್ಧರಿಸಿದೆ ಎಂದ ಶ್ರೀಗಳು, ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಸ್ಥೆಗಳು, ಟಿಎಸ್​ಎಸ್, ಟಿಎಂಎಸ್, ಕೆಡಿಸಿಸಿ ಬ್ಯಾಂಕ್, ಉದ್ದಿಮೆಗಳು ಸಂಸ್ಥಾನದ ಜತೆ ಸೇವಾ ಕಾರ್ಯಕ್ಕೆ ನೆರವು ನೀಡಲು ಕರೆ ನೀಡಿದರು.
    ಸಭೆಯಲ್ಲಿ ಮಠದ ವಿವಿಧ ಸೀಮಾ ಮುಖ್ಯಸ್ಥರು, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಉಪಸಮಿತಿಗಳ ಕಾರ್ಯಕರ್ತರು ತಮ್ಮ ಸೀಮೆಯಲ್ಲಿ ಆಗಿರುವ ಭೂಕುಸಿತ, ಪ್ರವಾಹ ಹಾನಿ ವಿವರ ಮಂಡಿಸಿದರು. ಮಠದ ಮುಖ್ಯ ವ್ಯವಸ್ಥಾಪಕ ಎಸ್.ಎನ್. ಗಾಂವಕರ ಹಾನಿಯ ಸಂಗ್ರಹ ವರದಿ ಸಭೆಯ ಮುಂದೆ ಮಂಡಿಸಿದರು. ಕಳಚೆ ಪ್ರದೇಶದಲ್ಲಿ ಮನೆ ನೆಲಸಮವಾದ 20 ಕುಟುಂಬಗಳು ಮನೆ ತೊರೆದಿದ್ದಾರೆ. ಇನ್ನೂ 30 ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಲ್ಲಿನ 60 ಮನೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಇಲ್ಲ. ರಸ್ತೆ, ವಿದ್ಯುತ್, ನೀರು, ದೂರವಾಣಿ ಸಂಪರ್ಕ ಕಡಿತವಾಗಿದೆ. ಹಳವಳ್ಳಿ, ಸುಂಕಸಾಳ, ಅಚವೆ, ಹಿಲ್ಲೂರು ಹಳ್ಳಿಗಳ ಕೃಷಿಕಾರ್ವಿುಕರ 300 ಮನೆಗಳು ಹಾನಿಗೆ ಒಳಗಾಗಿವೆ. ಬಾಳೂರು, ಕರೂರು, ಮತ್ತೀಘಟ್ಟ ಪ್ರದೇಶದಲ್ಲಿ ಹತ್ತು ಮನೆಗಳು ನಾಶವಾಗಿವೆ. 25 ಎಕರೆ ತೋಟ ನೆಲಸಮವಾಗಿದೆ. ಕಳಚೆ ಸೇರಿದಂತೆ ಯಲ್ಲಾಪುರ, ಸಿದ್ದಾಪುರ, ಶಿರಸಿ ಪ್ರದೇಶಗಳ ಐದುನೂರು ಎಕರೆಗಿಂತಲೂ ಹೆಚ್ಚು ಅಡಕೆ ತೋಟಗಳು ಸಂಪೂರ್ಣ ನಾಶವಾಗಿದೆ ಎಂದು ವಿವರಿಸಿದರು.
    ಸಭೆಯಲ್ಲಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸರ್ಕಾರಕ್ಕೆ ಭೂಕುಸಿತ ಅಧ್ಯಯನ ಸಮಿತಿ ಏಪ್ರಿಲ್​ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ತಾಲೂಕುಗಳ ಸೇರ್ಪಡೆಯಾಗಿದೆ. ಕೃಷಿ ಭೂಮಿ ಸಂಪೂರ್ಣ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.
    ಆಡಳಿತ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರ್ಕಾರ ನೆರವು ಘೊಷಿಸಿದೆ. ಇನ್ನಷ್ಟು ಹಾನಿ ವಿವರ ಸೇರ್ಪಡೆಯಾಗಬೇಕು. ಪುನರ್ವಸತಿ ಬಗ್ಗೆ ಇನ್ನಷ್ಟು ಒತ್ತಡ ತರಬೇಕು. ರಾಷ್ಟ್ರದ ಗಮನ ಸೆಳೆಯಬೇಕು ಎಂದರು.
    ವೆಂಕಟರಮಣ ಬೆಳ್ಳಿ, ಗಂಗಾಧರ ಕಡಕಿನಬೈಲು, ಸೀತಾರಾಮ ನೀರ್ನಳ್ಳಿ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಡಿ. ಶಂಕರ ಭಟ್ಟ, ಸದಾನಂದ ಹಳವಳ್ಳಿ ಇತರರು ಮಾತನಾಡಿದರು. ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೕಶ್ವರ ಹೆಗಡೆ ಸ್ವಾಗತಿಸಿದರು. ಜಿ.ವಿ. ಹೆಗಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts