More

    ನೈಜ ಇತಿಹಾಸ ತಿಳಿಸಿಕೊಡಲಿದೆ ಎನ್ಇಪಿ

    ಕಲಬುರಗಿ: ಬಸವಾದಿ ಶರಣರು ಸೇರಿದಂತೆ ದೇಶದ ಸಂತರು, ಮಹಾತ್ಮರ ಬಗ್ಗೆ ಬ್ರಿಟಿಷರು ನಮ್ಮ ಇತಿಹಾಸವನ್ನು ಮರೆಮಾಚಿದ್ದರು. ಅದನ್ನು ಪ್ರಸ್ತುತ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಿಂದ ಸರಿಪಡಿಸುವ ಕೆಲಸವಾಗುತ್ತಿದೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪ್ರತಿಪಾದಿಸಿದರು.

    ಜಯನಗರ ಅನುಭವ ಮಂಟಪದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ಬಸವ ಸಮಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ `ವಚನಗಳ ವೈವಿಧ್ಯಮಯ ಆಯಾಮಗಳು’ ಕುರಿತ ಎರಡು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ನಾವು ತುಂಬ ಮುಂದುವರಿದಿದ್ದೇವೆ ಎಂದು ಬೀಗುತ್ತಿದ್ದ ಪಶ್ಚಿಮದ ರಾಷ್ಟ್ರಗಳನ್ನು ಸಹ ಭಾರತದತ್ತ ನೋಡುವಂತೆ ವಚನ ಸಾಹಿತ್ಯ ಮಾಡಿದೆ. ಜೀವನ ಸಾಧನೆಗೆ ಮಾರ್ಗವನ್ನು ತೋರಿ, ಸಮಾಜ ಹೇಗೆ ಸಾಗಬೇಕು, ಜನರ ಕರ್ತವ್ಯವೇನು ಎಂಬುದು ವಚನ ಸಾರಿವೆ ಎಂದರು.

    ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಮಾತನಾಡಿ, ಬಸವಾದಿ ಶರಣರ ವಚನಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಾಗಿದೆ. ಶರಣರ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಇನ್ನಷ್ಟು ಪರಿಣಾಮಕಾರಿ ನಡೆಯಬೇಕು. ಉತ್ತಮ ಭವಿಷ್ಯಕ್ಕಾಗಿ ಇದು ಜರೂರಿಯಿದೆ ಎಂದು ಹೇಳಿದರು.

    ಕೇಂದ್ರೀಯ ವಿವಿ ಕಾನೂನು ನಿಕಾಯ ಡೀನ್ ಪ್ರೊ.ಎಂ.ವಿ.ಅಳಗವಾಡಿ ಮಾತನಾಡಿ, ಸಾವಿರಾರು ವರ್ಷದಿಂದ ನಮ್ಮ ಸಂತರು, ಋಷಿಗಳ ಜ್ಞಾನ ಪರಂಪರೆ ಹೊರಹೊಮ್ಮಲು ಆಗಲಿಲ್ಲ. ನಾವು ಇಂಗ್ಲಿಷ್ ಮೊರೆ ಹೋಗಿದ್ದರಿಂದ ಈ ಎಡವಟ್ಟುಗಳಾಗಿವೆ. ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿದಾಗ ಇತಿಹಾಸವನ್ನು ಅರಿತು, ಅಭಿವೃದ್ಧಿ ಆಗಲು ಸಾಧ್ಯ ಎಂದರು.

    ಬಸವಾದಿ ಶರಣರ ಕಾಲದಲ್ಲಿ ಶೇ.90ರಷ್ಟು ಕಾಯಕ ಜೀವಿಗಳ ಶ್ರಮದಲ್ಲಿ ಶೇ.10 ಜನರು ಆಡಳಿತ ನಡೆಸುತ್ತಿದ್ದರು. ಇದನ್ನು ವಿರೋಧಿಸಿದ ಶರಣರು ಕಾಯಕಕ್ಕೆ ಘನತೆ, ಗೌರವ ತಂದುಕೊಟ್ಟರು. ಎಲ್ಲ ಕಾಯಕಗಳು ಸಮಾನ ಎಂಬ ಸರಳ ಸೂತ್ರ ಹೇಳಿಕೊಟ್ಟರು. ಜೀವನದಲ್ಲಿ ಹೇಗಿರಬೇಕು, ಏನು ಮಾಡಬೇಕು, ಮಾಡಬಾರದೆಂಬ ಸಂದೇಶ ನೀಡಿದ್ದಾರೆ. ಅದನ್ನು ಪಾಲಿಸಿದರೆ ಸಮಾಜದ ಒಳಿತು ನಿಶ್ಚಿತ ಎಂದರು.

    ಕೇಂದ್ರೀಯ ವಿವಿ ಕುಲಸಚಿವ ಪ್ರೊ.ಬಸವರಾಜ ಡೋಣೂರ ಮಾತನಾಡಿ, ಸಂಘ-ಸಂಸ್ಥೆಗಳು, ವಿವಿಗಳು, ವ್ಯಕ್ತಿಗಳು ಸೇರಿ ಹಲವರು ಪ್ರಯತ್ನಿಸಿದರೂ ವಚನಗಳು ಜನರಿಗೆ ತಲುಪುತ್ತಿಲ್ಲ. ಇದಕ್ಕೆ ಕಾರಣ ಹೇಳುವವರು ಅಳವಡಿಸಿಕೊಳ್ಳದಿರುವುದು. ಬೇರೆಯವರಿಗೆ ಹೋಲಿಕೆ ಮಾಡಲು ವಚನಗಳನ್ನು ಬರೆದಿಲ್ಲ, ಮೊದಲು ನಾವು ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಪ್ರಖರವಾದ ಅರಿವು ಇದೆ ಎಂದು ಹೇಳಿದರು.

    ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬಿ.ಡಿ.ಜತ್ತಿ ವಚನ ಅಧ್ಯಯನ, ಸಂಶೋಧನಾ ಕೇಂದ್ರದ ಪ್ರೊ.ವೀರಣ್ಣ ದಂಡೆ ಇತರರಿದ್ದರು. ಕೇಂದ್ರೀಯ ವಿವಿ ಬಸವ ಪೀಠದ ಸಂಯೋಜಕ ಡಾ.ಗಣಪತಿ ಸಿನ್ನೂರ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts