More

    ನೂತನ ಗೃಹ ಪ್ರವೇಶಿಸಿದ ಧವಳಗಿರಿ

    ಗೋಕರ್ಣ: ಇಲ್ಲಿನ ಪುರಾಣ ಖ್ಯಾತ ಆತ್ಮಲಿಂಗ ಸನ್ನಿಧಿ ಮಹಾಬಲೇಶ್ವರ ಮಂದಿರಕ್ಕೆ ಪಶ್ಚಿಮ ದ್ವಾರದಿಂದ ಪ್ರವೇಶ ಮಾಡುವ ಪ್ರತಿ ಭಕ್ತರು ಆತ್ಮಲಿಂಗಕ್ಕಿಂತ ಮೊದಲು ಧವಳಗಿರಿಯ ದರ್ಶನ ಪಡೆದೇ ಮುಂದೆ ತೆರಳುತ್ತಾರೆ. ಅದು ಯಾರೆಂದುಕೊಂಡಿರಾ? ಅದುವೇ ಕಳೆದ ಮೂರು ವರ್ಷಗಳಿಂದ ಮಂದಿರದ ಪ್ರಮುಖ ಆಕರ್ಷಣೆಯಾಗಿ ಕಂಗೊಳಿಸುತ್ತಿರುವ ಮಹಾನಂದಿ.

    ಈ ಮಹಾನಂದಿ ಧವಳಗಿರಿ ಗುರುವಾರ ಪ್ರತ್ಯೇಕ ವಾಸಗೃಹ ಪ್ರವೇಶಿಸಿದೆ.

    ಮಹಾಬಲೇಶ್ವರನ ವರದಾನ: ಮಂದಿರಕ್ಕೆ ಬಂದ ಆಂಧ್ರದ ಓಂಗೊಲ್ ತಳಿಗೆ ಸೇರಿದ ಈ ಮಹಾನಂದಿಗೆ ಧವಳಗಿರಿ ಎಂದು ನಾಮಕರಣವಿತ್ತವರು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ. ಇಂತಹ ಧವಳಗಿರಿಯ ಬದುಕಿನ ಪಯಣವೇ ಬಹು ರೋಚಕವಾದುದು. ಈ ಧವಳಗಿರಿ ಮೂರು ವರ್ಷದ ಹಿಂದೆ ಮಂದಿರಕ್ಕೆ ಬರುವ ಮುನ್ನ ಇದನ್ನೇ ಹೋಲುವ ಮಹಾನಂದಿ ಮಂದಿರದಲ್ಲಿತ್ತು. ವಯೋಮಾನ ಕಾರಣದಿಂದ ಇಹಲೋಕ ಯಾತ್ರೆ ಮುಗಿಸಿದ ಆ ಮಹಾನಂದಿ ತರುವಾಯ ಈಶ ಸನ್ನಿಧಿಯಲ್ಲಿ ನಂದಿ ಇಲ್ಲವಲ್ಲ ಎಂಬ ಕೊರಗು ಶ್ರೀಗಳನ್ನು ಕಾಡತೊಡಗಿತ್ತು. ಇಂತಹ ಸಮಯದಲ್ಲಿ ಶ್ರೀಗಳ ತಪಸ್ಸಿನ ಪ್ರಭಾವವೋ ಎನ್ನುವಂತೆ ಮಹಾಬಲೇಶ್ವರನ ವರದಾನವಾಗಿ ಏಳು ಅಡಿ ಎತ್ತರದ ಅಪರೂಪದ ಧವಳಗಿರಿ ಪ್ರತ್ಯಕ್ಷನಾದ!

    ಕಟುಕರ ಕೈಗೆ ಸಿಕ್ಕು ವಧಾಸ್ಥಾನಕ್ಕೆ ಅಕ್ರಮವಾಗಿ ಒಯ್ಯಲಾಗುತ್ತಿದ್ದ ಓಂಗೊಲ್ ತಳಿಯ ನಾಲ್ಕು ನಂದಿಗಳನ್ನು ರಾಷ್ಟ್ರೀಯ ಹೆದ್ದಾರಿ ಮೇಲೆ ಮಠದ ಗೋ ಸೇವಕರು ಪತ್ತೆ ಹಚ್ಚಿ ರಕ್ಷಿಸಿದರು. ಅದರಲ್ಲಿ ಒಂದು ನಂದಿ ಮಠಕ್ಕೆ ಬಂದಿತು. ಆ ವೇಳೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಶ್ರೀಗಳ ಚಾತುರ್ವಸ್ಯದಲ್ಲಿ ಹೊಸ ನಾಮಕರಣದೊಂದಿಗೆ ‘ಧವಳಗಿರಿ’ ಚಾತುರ್ವಸ್ಯ ಮುಗಿಯುವವರೆಗೆ ವಾಸ್ತವ್ಯ ಮಾಡಿ ಆ ನಂತರ ಮಹಾಬಲೇಶ್ವರ ದೇಗುಲಕ್ಕೆ ಬಂದ. ಹೀಗೆ ಬಂದ ಧವಳಗಿರಿ ನಿತ್ಯ ನಡೆಯುವ ಮಹಾಪೂಜೆ ಸಮಯದಲ್ಲಿ ಮಂದಿರಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿ ಆತ್ಮಲಿಂಗಕ್ಕೆ ನಮಿಸುವ ಪರಿಪಾಠಕ್ಕೆ ಮುಂದಾದ. ರಾಜ ಗಾಂಭೀರ್ಯದಲ್ಲಿ ಆತ ಮಂದಿರ ಪ್ರದಕ್ಷಿಣೆ ಮಾಡುವುದನ್ನು ನೋಡುವುದೇ ಒಂದು ಮಹದಾನಂದ.

    ವಿಶಾಲ ಗೃಹ: ಇಂತಹ ಮಹಾನಂದಿಗೆ ತನ್ನದೇ ಆದ ವಾಸತಾಣ ಇಲ್ಲವಲ್ಲ ಎಂಬ ಕೊರಗಿತ್ತು. ಧವಳಗಿರಿ ಮಂದಿರದ ಪಶ್ಚಿಮ ದ್ವಾರದಲ್ಲಿ ನೆಲೆಸಿದ್ದ ಮಹಾನಂದಿಗೆ ಪ್ರತ್ಯೇಕ ವಾಸಸ್ಥಳ ಇರಲಿಲ್ಲ. ಹೀಗಾಗಿ ಅವನಿರುವ ಜಾಗದಲ್ಲಿಯೇ ಧವಳಗಿರಿಗಾಗಿ ವಿಶಾಲವಾದ ಮನೆ ಸಿದ್ಧಪಡಿಸಲಾಗಿತ್ತು. ಗುರುವಾರ ವಿಧ್ಯುಕ್ತವಾಗಿ ಶಾಸ್ತ್ರರೀತ್ಯಾ ಹೊಸ ಮನೆಗೆ ಧವಳಗಿರಿಯ ಪ್ರವೇಶವೂ ನಡೆಯಿತು.

    ಪರಶಿವನಿಗೆ ಅತ್ಯಂತ ಪ್ರಿಯನಾದ ಶಾಂತ ಗುಣಲಕ್ಷಣದ ಧವಳಗಿರಿಗೆ ಪ್ರತ್ಯೇಕ ವಾಸ ಸ್ಥಾನ ಬೇಕೆಂಬ ಸದಿಚ್ಛೆ ಶ್ರೀಗಳದ್ದಾಗಿತ್ತು. ಅವರ ಆಶೀರ್ವಾದ ಬಲದಿಂದ ಅದು ಗುರುವಾರ ನಡೆದ ನೂತನ ಗೃಹ ಪ್ರವೇಶದಿಂದ ಪರಿಪೂರ್ಣವಾದಂತಾಗಿದೆ.

    | ಜಿ.ಕೆ. ಹೆಗಡೆ, ಆಡಳಿತಾಧಿಕಾರಿ, ಮಹಾಬಲೇಶ್ವರ ಮಂದಿರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts