More

    ನೀರು ಕೇಳಿದ್ರೆ ಏಕೆ ಸ್ವಾಮಿ ಕೊಡುತ್ತಿಲ್ಲ

    ಚಿತ್ರದುರ್ಗ: ಬಾರ್, ಸರಾಯಿ ಇನ್ನಿತರೆ ಮದ್ಯ ಕೊಡ್ರಿ ಅಂಥ ಕೇಳದಿದ್ರು ಕೊಡ್ತೀರಿ. ಆದರೆ, ನೀರು ಕೇಳಿದ್ರೆ ಏಕೆ ಸ್ವಾಮಿ ಕೊಡುತ್ತಿಲ್ಲ. ಚಳವಳಿ ಆರಂಭವಾಗಿ 31 ದಿನವಾಯ್ತು ಸರ್ಕಾರಗಳು ಮಾತ್ರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಕಿಡಿಕಾರಿದರು.

    ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಜಿಪಂನ ಸಂಸದರ ಕಚೇರಿ ಮುಂಭಾಗ 31 ದಿನಗಳಿಂದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸೇರಿ ವಿವಿಧ ಸಂಘಟನೆಗಳ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.

    ಮಳೆಗಾಲದಲ್ಲಿ ತುಂಗಾ ನದಿ ತುಂಬಿ ಹೆಚ್ಚಾಗಿ ಸಮುದ್ರಕ್ಕೆ ಹರಿಯುವ ನೀರನ್ನು ಭದ್ರಾ ಯೋಜನೆ ಮೂಲಕ ಲಕ್ಷಾಂತರ ರೈತರ ಜಮೀನುಗಳಿಗೆ ಹರಿಸಿ ಎಂಬುದಾಗಿ ಕೇಳುವುದು ತಪ್ಪೇ. ಪ್ರಧಾನಿ ನರೇಂದ್ರಮೋದಿ ಅವರ ಎದುರು ನಿಂತು ಸ್ವಲ್ಪವಾದರೂ ಹಣ ತರುವ ತಾಕತ್ತು ನಿಮಗಿಲ್ಲವೇ. ರೈತರ ಹಿತ ಕಾಪಾಡಲು ಸಾಧ್ಯವಾಗದ ಮೇಲೆ ಸಂಸದ, ಸಚಿವರಾಗಿ ಏನು ಪ್ರಯೋಜನ. ರಾಜೀನಾಮೆ ನೀಡಿ ಮನೆಗೆ ಹೋಗಿ. ಅದನ್ನು ಬಿಟ್ಟು ಅಧಿಕಾರಕ್ಕೆ ಅಂಟಿಕೊಳ್ಳುವುದು ಯಾವ ನ್ಯಾಯ ಎಂದು ಸಚಿವರು ಪ್ರತಿಭಟನಾ ಸ್ಥಳಕ್ಕೆ ಬರುವ ಮುನ್ನ ಪ್ರಶ್ನಿಸಿದರು.

    ಪ್ರಗತಿಯಲ್ಲಿರುವ ಯೋಜನೆಗಳನ್ನು ಮುಂದುವರೆಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದ್ದರಿಂದ ಅನುದಾನ ತರುವ ಮೂಲಕ ಸಹಕರಿಸಿ. ನಾಲೆ ಕೆಲಸ ತುಂಬಾ ಕಡೆ ಬಾಕಿ ಇದೆ. ಅದನ್ನು ಪೂರ್ಣಗೊಳಿಸಿದರೆ, ಮಳೆಗಾಲದಲ್ಲಿ ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

    ಯೋಜನೆಗೆ ಕೇಂದ್ರ ತನ್ನ 5,300 ಕೋಟಿ ರೂ. ಪಾಲು ನೀಡಿದರೆ, ರಾಜ್ಯ ಸರ್ಕಾರ ಪಾಲು ನೀಡುವುದಾಗಿ ಸಿಎಂ, ಡಿಸಿಎಂ ಭರವಸೆ ನೀಡಿದ್ದಾರೆ. ಪರಸ್ಪರ ಸರ್ಕಾರಗಳು ರಾಜಕಾರಣ ಮಾಡುತ್ತ ರೈತರನ್ನು ಮಂಗ್ಯಾ ಮಾಡಲು ಹೊರಟಂತಿದೆ. ಇದನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಬೇಕು. ಇದನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ಹಣ ಬಿಡುಗಡೆಯಾಗದೆ, ಇಲ್ಲಿಂದ ಕದಲುವುದಿಲ್ಲವೆಂದು ರೈತರು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನ ಕೂಡ ಸೆಳೆದಿದ್ದೇವೆ. ಕೇಂದ್ರದಲ್ಲಿ ನಿಮ್ಮದೆ ಸರ್ಕಾರವಿದ್ದು, ಅನುದಾನ ತನ್ನಿ. ಬೆಳೆ ವಿಮೆ ಸಂಬಂಧ ಸಭೆ ಕರೆದು ಬಗೆಹರಿಸಿ ಎಂದು ಮನವಿ ಮಾಡಿದರು.

    ರೈತರು ಭಯೋತ್ಪಾದಕರಲ್ಲ: ಭಯೋತ್ಪಾದನೆ ನಿಗ್ರಹಕ್ಕೆ ಬಂದೋಬಸ್ತ್ ಮಾಡಿದ ರೀತಿ ರೈತ ಹೋರಾಟಕ್ಕೂ ಮಾಡುವುದು ಸರಿಯಲ್ಲ. ದೆಹಲಿಗೆ ಬರುತ್ತೇವೆ ಎಂದರೆ, ಮೊಳೆ ಒಡೆಸುತ್ತೀರಿ, ಕಾಂಕ್ರಿಟ್ ಬ್ಯಾಕ್ ಹಾಕುತ್ತೀರಾ, ಮೇಲಿನಿಂದ ಗುಂಡು ಸಿಡಿಸುತ್ತೀರಾ, ಹತ್ಯೆ ಮಾಡುತ್ತೀರಿ. ರೈತರ ಹೋರಾಟ ಹತ್ತಿಕ್ಕುವುದು ಸರಿಯಲ್ಲ ಎಂದು ಬಸವರಾಜಪ್ಪ ಒತ್ತಾಯಿಸಿದರು.

    ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಪೊಲೀಸರು ಒಕ್ಕಲು ಕುಟುಂಬದಿಂದಲೇ ಬಂದವರು. ಮುಂಬರುವ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಜಿಲ್ಲೆಯ ಜನರ ಪರವಾಗಿ ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಕೈಜೋಡಿಸುವ ಬದಲು ದಬ್ಬಾಳಿಕೆ ನಡೆಸುವುದು ಸರಿಯಲ್ಲ. ನೀರಾವರಿ ಯೋಜನೆಗಾಗಿ ಸಾಯಲು ಸಿದ್ಧ ಎಂದರು.

    ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಎಂಎಲ್ಸಿ ಕೆ.ಎಸ್.ನವೀನ್, ಸಂಘದ ಗೌರವಾಧ್ಯಕ್ಷ ಕುರುವ ಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್, ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಹೆಚ್ಚುವರಿ ಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‌ಪಿಗಳಾದ ಕೆ.ದಿನಕರ್, ಎಸ್.ಚೈತ್ರಾ, ಗಣೇಶ್ ಇನ್ನಿತರೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts