More

    ನೀರಿನ ಸಮಸ್ಯೆ ಪರಿಹಾರಕ್ಕೆ ಸನ್ನದ್ಧ

    ಹಾವೇರಿ: ಪ್ರಸ್ತುತ ಬೇಸಿಗೆಯಲ್ಲಿ ಈವರೆಗೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿಯೂ ಇಲ್ಲ. ಆದರೂ ಹಿಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾದ ಪರಿಸ್ಥಿತಿಯನ್ನು ಗಮನಿಸಿ 32ಹಳ್ಳಿಗಳಿಗೆ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಸಮಸ್ಯೆ ಕಂಡುಬಂದ ತಕ್ಷಣ ಪರ್ಯಾಯ ಮಾರ್ಗಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ತಿಳಿಸಿದರು.

    ನಗರದ ವಾರ್ತಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 169ಶುದ್ಧ ನೀರಿನ ಘಟಕಗಳಿದ್ದು, 104 ಕಾರ್ಯನಿರ್ವಹಿಸುತ್ತಿವೆ. ಕೆಲ ಘಟಕಗಳ ದುರಸ್ತಿ ಕಾರ್ಯ ನಡೆದಿದೆ. 10ರಿಂದ 20ಘಟಕಗಳಲ್ಲಿ ತಾಂತ್ರಿಕ ತೊಂದರೆಯಾಗಿದ್ದು, ದುರಸ್ತಿ ಬದಲು ಹೊಸದಾಗಿ ಘಟಕ ಆರಂಭಿಸುವ ಚಿಂತನೆ ನಡೆದಿದೆ ಎಂದರು.

    ಜಿಲ್ಲೆಯ ಎಲ್ಲ 224ಗ್ರಾಪಂಗಳಲ್ಲಿ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿಗೆ ಘಟಕಗಳನ್ನ ಸ್ಥಾಪಿಸಲು ಪ್ರತಿ ಗ್ರಾಪಂನಲ್ಲಿ 10 ಗುಂಟೆಯಿಂದ ಒಂದು ಎಕರೆವರೆಗೆ ಜಾಗ ಗುರುತಿಸಲು ಸೂಚಿಸಲಾಗಿದೆ. ಈಗಾಗಲೇ 40ಗ್ರಾಪಂಗಳಿಗೆ ತಲಾ 20ಲಕ್ಷ ರೂ. ಅನುದಾನ ನೀಡಲಾಗಿದೆ. 10ರಿಂದ 12ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ವೈಜ್ಞಾನಿಕ ಕಸ ವಿಲೇವಾರಿ ಅನುಷ್ಠಾನಗೊಂಡಿದೆ. ಒಂದು ವರ್ಷದಲ್ಲಿ ಎಲ್ಲ ಗ್ರಾಪಂಗಳಲ್ಲೂ ವೈಜ್ಞಾನಿಕ ಮಾದರಿಯಲ್ಲಿ ಕಸ ವಿಂಗಡಿಸಿ ವಿಲೇವಾರಿಗೊಳಿಸಲು ಕ್ರಮವಹಿಸಲಾಗುವುದು. ಗ್ರಾಮೀಣ ಭಾಗದ ತಿಪ್ಪೆಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುವ ಕುರಿತು ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಿ ಅಧ್ಯಯನ ಮಾಡಿಸಲಾಗಿದೆ ಎಂದರು.

    ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ನೈಸರ್ಗಿಕ ಸಂಪನ್ಮೂಲ ರಕ್ಷಣೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ನೀರು ಇಂಗಿಸುವಿಕೆ, ಹಸಿರೀಕರಣ, ಭೂಫಲವತ್ತತೆ ಹೆಚ್ಚಳಕ್ಕೆ ಆದ್ಯತೆ ನೀಡಿ 12ಸಾವಿರ ಎಕರೆಯಲ್ಲಿ ಬಂಡಿಂಗ್, ಟ್ರಂಚಿಂಗ್, ಕೃಷಿಹೊಂಡ, ಗೋ ಕಟ್ಟೆ, ಜಲಮೂಲಗಳ ಪುನಶ್ಚೇತನ, ಕಾಲುವೆಗಳ ನಿರ್ವಣದ ಮೂಲಕ ಜಲ ಮೂಲಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ತಯಾರಿಸಲಾಗಿದೆ. ಮೇಲ್ಪಟ್ಟದ, ಮಧ್ಯಮ ಹಾಗೂ ಕೆಳಮಟ್ಟದ ಜಲಮೂಲಗಳೆಂದು ವರ್ಗೀಕರಿಸಿ ಪುನಃಶ್ಚೇತನ ಮತ್ತು ವಿವಿಧ ಜಲಮೂಲಗಳ ಸಂರ್ಪಸಲು ಕಾಲುವೆಗಳ ನಿರ್ವಿುಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

    ಪ್ರವಾಹದಿಂದ ಕೊಚ್ಚಿಹೋದ ವರದಾ ನದಿಯ ದಡದಲ್ಲಿ 300ರಿಂದ 500ಮೀಟರ್ ವಿಸ್ತೀರ್ಣದಲ್ಲಿ 129ಕಿಮೀ ನದಿ ಉದ್ದಕ್ಕೂ ನರೇಗಾ, ವರದಾ ಕರೆ ಯೋಜನೆಯಡಿ ಭೂ ಸವಕಳಿ ತಡೆಯಲು ಪ್ಲಾಂಟೇಷನ್ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಯ ತಾಂತ್ರಿಕ ಒಗ್ಗೂಡುವಿಕೆಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದರು.

    ತಾಲೂಕು ಕೇಂದ್ರದಲ್ಲಿ ಫೀವರ್ ಕ್ಲಿನಿಕ್ : ಕರೊನಾ ಲಾಕ್​ಡೌನ್ ಸಮಯದಲ್ಲಿ ಜಿಲ್ಲೆಗೆ 11ಸಾವಿರದಷ್ಟು ಜನ ವಿದೇಶ, ಹೊರರಾಜ್ಯ, ಜಿಲ್ಲೆಗಳಿಂದ ಆಗಮಿಸಿದ್ದು, ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಗ್ರಾಪಂಗಳಲ್ಲಿ ರಚಿಸಿದ್ದ ಟಾಸ್ಕ್​ಪೋರ್ಸ್ ತಂಡಗಳು ಈ ಸಮಯದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ. ಮುಂದಿನ ದಿನಗಳಲ್ಲಿ ಮನೆಮನೆಗೆ ತೆರಳಿ ಎಲ್ಲ ಆರೋಗ್ಯ ತಪಾಸಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದು, ಆ ಕಾರ್ಯವನ್ನು ಆರಂಭಿಸಲಾಗುವುದು. ಪ್ರತಿ ತಾಲೂಕು ಕೇಂದ್ರದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಿ ದಿನದ 24 ತಾಸುಗಳ ಕಾಲ ತಪಾಸಣೆ ನಡೆಸಲಾಗುವುದು. ಯಾವುದಾರೂ ವ್ಯಕ್ತಿಯಲ್ಲಿ ಕರೊನಾ ಪಾಸಿಟಿವ್ ಬಂದರೆ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ 3ಬೆಡ್​ಗಳ ಐಸೋಲೇಷನ್ ಸೆಂಟರ್ ತೆರೆಯಲಾಗಿದೆ. ಮುಂದೆ 10ಬೆಡ್​ಗಳ ಐಸೋಲೇಷನ್ ತೆರೆಯಲು ಕ್ರಮ ವಹಿಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್ ಸೆಂಟರ್ ತೆರೆದು ಸೋಂಕಿತ ವ್ಯಕ್ತಿಗಳನ್ನು 48ತಾಸುಗಳ ನಿಗಾಕ್ಕೆ ಕ್ರಮ ವಹಿಸಲಾಗಿದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts