More

    ನೀರಸಾಗರ ಜಲಾಶಯ ಭರ್ತಿ

    ಹುಬ್ಬಳ್ಳಿ: ಭಾಗಶಃ ಹುಬ್ಬಳ್ಳಿ ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯ ಭರ್ತಿಯಾಗಿದ್ದು, ಕೋಡಿ ಹರಿದಿದೆ.

    ಕಳೆದ ಹಲವು ದಿನಗಳಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜಲಾಶಯ ತುಂಬಿ ಹರಿಯುತ್ತಿದೆ. ಕೋಡಿ ಪ್ರದೇಶದಲ್ಲಿ ಅಂದಾಜು ಒಂದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿರುವುದರಿಂದ ಪಕ್ಕದ ಧಾರವಾಡ-ಕಲಘಟಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಕಳೆದ ವರ್ಷದ ಅತಿವೃಷ್ಟಿ ಸಂದರ್ಭದಲ್ಲಿ ಗಂಭ್ಯಾಪುರ ಬಳಿಯ ಸೇತುವೆಗೆ ಧಕ್ಕೆಯಾಗಿತ್ತು. ಪಕ್ಕದಲ್ಲಿ ಹೊಸ ಸೇತುವೆ ನಿರ್ವಿುಸಲಾಗುತ್ತಿದ್ದು, ತಾತ್ಕಾಲಿಕ ಸೇತುವೆ ಈಗ ಮುಳುಗಡೆಯಾಗಿದೆ. ಇದರಿಂದ ಕಲಘಟಗಿ ತಾಲೂಕಿನ ಗಂಭ್ಯಾಪುರ, ಎಮ್ಮೆಟ್ಟಿ, ಮುತ್ತಗಿ, ಶಿಗಿಗಟ್ಟಿ ಮುಂತಾದ ಹಳ್ಳಿಗಳ ರಸ್ತೆ ಸಂಪರ್ಕ ಕಡಿತವಾದಂತಾಗಿದೆ.

    ಎರಡು ವರ್ಷ ನೀರು:

    ನೀರಸಾಗರ ಜಲಾಶಯ ಅಂದಾಜು 1 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಹುಬ್ಬಳ್ಳಿ ಮಹಾನಗರಕ್ಕೆ ನಿತ್ಯ 40 ಎಂಎಲ್​ಡಿಯಂತೆ ಎರಡು ವರ್ಷದವರೆಗೆ ಪೂರೈಕೆ ಮಾಡಬಹುದಾಗಿದೆ.

    ಗೋಕುಲ ರಸ್ತೆ ಹಾಗೂ ಹಳೇಹುಬ್ಬಳ್ಳಿ ಭಾಗದ ಕೆಲ ಪ್ರದೇಶಗಳಿಗೆ ನೀರಸಾಗರ ಜಲಾಶಯದಿಂದ ನೀರು ಪೂರೈಸಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ 27ಮಿಮೀ ಮಳೆ

    ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಗೆ ಮಹಾನಗರ ಹಾಗೂ ತಾಲೂಕಿನ ಹಳ್ಳಿಗಳು ನಲುಗಿವೆ. ಹಾಗಾಗಿ ಇನ್ನೂ ಕೆಲ ದಿನ ಮಳೆ ಮುಂದುವರಿಯುವ ಲಕ್ಷಣಗಳಿವೆ.

    ಸೋಮವಾರದ ದಾಖಲೆ ಪ್ರಕಾರ, ಹುಬ್ಬಳ್ಳಿಯಲ್ಲಿ 27.6 ಮಿ.ಮೀ., ಛಬ್ಬಿ ಹೋಬಳಿ 20 ಮಿ.ಮೀ., ಶಿರಗುಪ್ಪಿ ಹೋಬಳಿ 16.2 ಮಿ.ಮೀ., ಬ್ಯಾಹಟ್ಟಿ ಹೋಬಳಿ 21 ಮಿ.ಮೀ. ಮಳೆಯಾಗಿದೆ.

    ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪದಲ್ಲಿ ಒಂದು ಮನೆ, ಕುರಡಿಕೇರಿ ಒಂದು, ಬ್ಯಾಹಟ್ಟಿಯಲ್ಲಿ ಆರು ಹಾಗೂ ಸುಳ್ಳದಲ್ಲಿ ಎಂಟು ಸೇರಿ ಒಟ್ಟು 27 ಮನೆಗಳಿಗೆ ಮಳೆಯಿಂದ ಹಾನಿಯಾಗಿವೆ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.

    ವೃದ್ಧನನ್ನು ರಕ್ಷಿಸಿದ ಕಾನ್ಸ್​ಟೇಬಲ್

    ಕುಂದಗೋಳ: ಬೆಣ್ಣಿಹಳ್ಳದ ಸೇತುವೆಯ ಪೈಪ್​ನಲ್ಲಿ ಸಿಲುಕಿದ್ದ ಕಟ್ಟಿಗೆಯನ್ನು ತೆಗೆದುಕೊಳ್ಳಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ ತಾಲೂಕಿನ ಯರಗುಪ್ಪಿ ಗ್ರಾಮದ ಇಮಾಮ್ಾಬ್ ಬೆಳಗಲಿ (70) ಎಂಬಾತನನ್ನು ಸಿಆರ್​ಪಿಎಫ್ ಪೇದೆ ಪ್ರವೀಣ ಅಣ್ಣಿಗೇರಿ ಸೋಮವಾರ ರಕ್ಷಿಸಿದ್ದಾರೆ. ಬೆಣ್ಣಿಹಳ್ಳ ಪಕ್ಕದಲ್ಲಿರುವ ತನ್ನ ಜಮೀನು ನೋಡಿಕೊಂಡು ಮರಳಿ ಬರುವಾಗ ಸೇತುವೆಯ ಪೈಪ್​ನಲ್ಲಿ ಸಿಲುಕಿದ್ದ ಜಾಲಿ ಗಿಡದ ಕಟ್ಟಿಗೆ ತೆಗೆದುಕೊಳ್ಳಲು ಇಮಾಮ್ಾಬ್ ಮುಂದಾಗಿದ್ದರು. ಆದರೆ, ನೀರಿನ ಸೆಳವಿಗೆ ಸಿಲುಕಿ ಕಟ್ಟಿಗೆಯೊಂದಿಗೆ ಸ್ವಲ್ಪ ದೂರ ತೇಲಿ ಹೋಗಿ ಹಳ್ಳದ ದಡದಲ್ಲಿ ನಿಂತಿದ್ದ. ಆಗ ಅದೇ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಪೇದೆ ಹಾಗೂ ಗ್ರಾಮದ ಕೆಲ ಯುವಕರು ಸೇರಿ ಹಗ್ಗದಿಂದ ಸಹಾಯದಿಂದ ವೃದ್ಧನನ್ನು ರಕ್ಷಿಸಿದ್ದಾರೆ. ವೃದ್ಧನನ್ನು ರಕ್ಷಿಸುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts