More

    ನೀರಲ್ಲಿ ಬೆವರು ಹರಿಸುತ್ತಿರುವ ಅಗ್ನಿಶಾಮಕ ತಂಡ

    ಕೇಶವಮೂರ್ತಿ ವಿ.ಬಿ.

    ಹುಬ್ಬಳ್ಳಿ: ಈ ವರ್ಷವೂ ಭಾರಿ ಮಳೆ-ಪ್ರವಾಹ ಪರಿಸ್ಥಿತಿ ತಲೆದೋರಿದರೆ ಕ್ಷಿಪ್ರಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಪೂರಕವಾಗಿ ಧಾರವಾಡ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇಲ್ಲಿಯ ಉಣಕಲ್ಲ ಕೆರೆಯಲ್ಲಿ 1 ತಿಂಗಳಿನಿಂದ ಕಠಿಣ ತರಬೇತಿ ನಡೆಸುತ್ತಿದೆ. ಜಿಲ್ಲೆಯ 150ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಅಕ್ಷರಶಃ ಬೆವರು ಹರಿಸುತ್ತಿದ್ದಾರೆ.

    ಪ್ರವಾಹ ಸಂದರ್ಭದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ಜನರ ಜೀವ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ಪ್ರತಿಯೊಬ್ಬ ಸಿಬ್ಬಂದಿಗೆ ಪ್ರಾತ್ಯಕ್ಷಿಕೆಯೊಂದಿಗೆ ಕ್ರಿಯಾತ್ಮಕವಾಗಿ ತಿಳಿಸಿಕೊಡಲಾಗುತ್ತಿದೆ. ಬೋಟ್​ನಲ್ಲಿ ತೆರಳಿ ನೀರಿಗೆ ಧುಮುಕಿ ಜೀವ ರಕ್ಷಣೆ, ಲೈಫ್ ಜಾಕೆಟ್ ಮತ್ತು ಲೈಫ್ ಬಾಯ್ ಬಳಸಿ ರಕ್ಷಣಾ ಕಾರ್ಯಾಚರಣೆ, ಪ್ರವಾಹದ ವಿರುದ್ಧ ಬೋಟ್ ಚಾಲನೆ, ಪ್ರವಾಹದೊಟ್ಟಿಗೆ ಚಾಲನೆ, ಸಮಾನಾಂತರ ಬೋಟ್ ಬ್ಯಾಲೆನ್ಸ್, ಬೋಟ್ ಮೂಲಕ ಗಂಜಿಕೇಂದ್ರ ತಲುಪುವಿಕೆ ಮುಂತಾದ ತರಬೇತಿ ನೀಡಲಾಗುತ್ತಿದೆ.

    ಈ ಬಾರಿ ಪ್ರವಾಹ ಸಂಭವಿಸಿದರೆ, ಎಂಥದ್ದೇ ಪರಿಸ್ಥಿತಿಯನ್ನೂ ಎದುರಿಸಲು ಅಗ್ನಿಶಾಮಕ ತಂಡ ಸಜ್ಜಾಗಿದೆ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ (ಡಿಎಫ್​ಒ) ವಿನಾಯಕ ಕಲ್ಗುಟಕರ.

    ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್, ಅಕ್ಟೋಬರ್​ನಲ್ಲಿ ವರುಣ ರೌದ್ರಾವತಾರ ತಾಳಿದ್ದ. ಬೆಣ್ಣೆ ಹಳ್ಳ, ಜೇವೂರ, ತುಪ್ಪರಿ ಹಳ್ಳ, ಉಣಕಲ್ಲ ಕೆರೆ, ಹಿರೇಹಳ್ಳ, ಅಳ್ನಾವರ ಹುಲಿಕೆರೆ ಸೇರಿ ಅನೇಕ ಕಡೆ ನೀರು ಉಕ್ಕಿ ಹರಿದು ಜನ, ಜಾನುವಾರು ಕೊಚ್ಚಿ ಹೋಗಿ ಅಧ್ವಾನವಾಗಿತ್ತು. ಆಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಈ ಸಲ ಅಂಥ ಸಂದರ್ಭ ಬಂದರೆ ಜೀವ ಹಾನಿ ತಪ್ಪಿಸುವ ಗುರಿಯೊಂದಿಗೆ ತರಬೇತಿ ನಡೆದಿದೆ.

    ದೀಪಾ ಚೋಳನ್ ಕೊಡುಗೆ: ಕಳೆದ ವರ್ಷ ಪ್ರವಾಹದಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಅನಾಹುತ ಸಂಭವಿಸಿತ್ತು. ಆಗ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ವಿಪತ್ತು ನಿರ್ವಹಣಾ ಅನುದಾನದಡಿ 25 ಲಕ್ಷ ರೂ. ಘೊಷಿಸಿದ್ದರು. ಆ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. 4 ಇನ್​ಫ್ಲ್ಯಾಟೇಬಲ್ ಬೋಟ್, 1 ಏರಿಯಲ್ ಲೈಟ್ ಸಿಸ್ಟಂ, 30 ಲೈಫ್ ಜಾಕೆಟ್, 30 ಲೈಫ್ ಬಾಯ್, 6 ಬೋಲ್ಟ್ ಕಟರ್, 200 ರೇನ್ ಕೋಟ್ ಇತ್ಯಾದಿಯನ್ನು ಖರೀದಿಸಲಾಗಿದೆ. ಆಧುನಿಕ ಸಲಕರಣೆಗಳಿಂದ ಅಗ್ನಿಶಾಮಕ ದಳದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ವೃದ್ಧಿಯಾಗಿದೆ.

    ಯಾವುದೇ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲೆಯ ಅಗ್ನಿಶಾಮಕ ದಳ ಸಜ್ಜಾಗಿದೆ. ಇದಕ್ಕಾಗಿ ಸಿಬ್ಬಂದಿಗೆ 1 ತಿಂಗಳಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಾನಸಿಕ ದೃಢತೆ, ದೈಹಿಕ ಕ್ಷಮತೆ ಹಾಗೂ ನೈಪುಣ್ಯ ಹೆಚ್ಚಿಸಲಾಗಿದೆ.

    | ವಿನಾಯಕ ಕಲ್ಗುಟಕರ, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ, ಅಮರಗೋಳ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts