More

    ನಿಜಾಮುದ್ದೀನ್​ಗೆ ಹೋದವರು ಮುಚ್ಚಿಡಬೇಡಿ

    ಗದಗ:ಕರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ. ಮುಖ್ಯವಾಗಿ ದೆಹಲಿಯಲ್ಲಿ ಆಯೋಜಿಸಿದ್ದ ನಿಜಾಮುದ್ದೀನ್ ಮರ್ಕಜ್ ಜಮಾತ್​ನಲ್ಲಿ ಪಾಲ್ಗೊಂಡು ಬಂದವರು ಜಿಲ್ಲೆಯಲ್ಲಿ ಇದ್ದರೆ ಕೂಡಲೇ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಎಸ್ಪಿ ಯತೀಶ್.ಎನ್. ಮನವಿ ಮಾಡಿಕೊಂಡಿದ್ದಾರೆ.

    ದೆಹಲಿಗೆ ತೆರಳಿ ತವರಿಗೆ ಮರಳಿದವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಅಗತ್ಯ ಬಿದ್ದರೆ ಚಿಕಿತ್ಸೆಯನ್ನೂ ಪಡೆಯಬೇಕು. ದೆಹಲಿಗೆ ಹೋಗಿ ಬಂದಿರುವುದನ್ನು ಮುಚ್ಚಿಟ್ಟಿರುವ ವಿಷಯ ಪೊಲೀಸರಿಗೆ ಗೊತ್ತಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಸಹಕಾರ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

    ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಮೆಸೇಜ್​ಗಳನ್ನು ಪೋಸ್ಟ್ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೋಮುದ್ವೇಷ ಹರಡುವಂತಹ ಆಡಿಯೋ, ವಿಡಿಯೋ ಜಾಲತಾಣಗಳಲ್ಲಿ ಹರಿಬಿಟ್ಟರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ, ಹಣ ಪಡೆಯಲು ಬ್ಯಾಂಕ್​ಗಳ ಮುಂದೆ ಜನರು ಜಮಾಯಿಸುವುದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ ಎಂಬ ವಿಷಯ ಗೊತ್ತಾಗಿದೆ. ನ್ಯಾಯಬೆಲೆ ಅಂಗಡಿಯವರು ಮತ್ತು ಬ್ಯಾಂಕ್ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಹೇಳಬೇಕು ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.

    ಲಾಕ್​ಡೌನ್ ಸಮಯದಲ್ಲಿ ಮಹಿಳೆಯರು ಆಸ್ಪತ್ರೆ ಮತ್ತಿತರ ಅವಶ್ಯಕತೆ ಕೆಲಸ ಕಾರ್ಯಗಳಿಗೆ ತೆರಳಬೇಕಿದ್ದರೆ ಪೊಲೀಸ್ ಇಲಾಖೆ ವಾಹನ ಸಂಚಾರ ಕಾರ್ಯವನ್ನು ಆರಂಭಿಸಿದೆ. ಅವಶ್ಯಕತೆ ಇದ್ದವರು 100 ಕರೆ ಮಾಡಬಹುದು ಇಲ್ಲವೇ 9480804400 ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಎಸ್ಪಿ ಯತೀಶ್ ತಿಳಿಸಿದ್ದಾರೆ.

    ಸಂಚಾರ ನಿಷೇಧ:ಮಹಿಳೆಯೊಬ್ಬರಿಗೆ ಕರೊನಾ ವೈರಸ್ ದೃಢಪಟ್ಟ ಮೇಲೆ ಅವಳಿನಗರದಲ್ಲಿ ಲಾಕ್​ಡೌನ್ ಬಿಗಿಗೊಳಿಸುವ ಕಾರ್ಯ ಆರಂಭವಾಗಿದೆ. ಮುಖ್ಯ ರಸ್ತೆ ಹೊರತುಪಡಿಸಿ ಉಳಿದೆಲ್ಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರವನ್ನು ನಿಷೇಧಿಸಿದ್ದಾರೆ.

    ಕರೊನಾ ವೈರಸ್​ನಿಂದ ಮೃತಪಟ್ಟ ವೃದ್ಧೆ ವಾಸಿಸುತ್ತಿದ್ದ ನಗರದ ರಂಗನವಾಡಿ ಪ್ರದೇಶ ಹಾಗೂ ಎಸ್.ಎಂ. ಕೃಷ್ಣಾ ನಗರದಲ್ಲಿ ನಿಷೇಧ ಮುಂದುವರಿದಿದೆ. ಈ ಎರಡೂ ಪ್ರದೇಶದಲ್ಲಿ 500 ಮೀಟರ್ ಒಳಗಿರುವ ಮನೆಗಳ ಜನರಿಗೆ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಯಲ್ಲಿರುವ ಜನರಿಗೆ ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ವಿುಕರ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ.

    ಎಸ್.ಎಂ. ಕೃಷ್ಣಾ ನಗರದಲ್ಲಿ ರಾಜಕೀಯ ವ್ಯಕ್ತಿಗಳು ನಿಗದಿತ ಮನೆಗಳಿಗೆ ತೆರಳಿ ಅಗತ್ಯ ವಸ್ತುಗಳ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನಿಷೇಧಿತ ಪ್ರದೇಶದಲ್ಲಿ ಅನಗತ್ಯ ಸಂಚಾರ ಮಾಡುವುದು, ವಸ್ತುಗಳನ್ನು ಹಂಚುವುದನ್ನು ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಎಸ್.ಎಂ. ಕೃಷ್ಣಾ ನಗರ ನಿಷೇಧಿತ ಪ್ರದೇಶ ಎಂದು ಘೊಷಣೆ ಮಾಡಿದ್ದರೂ ಜನರು ಜನರು ರಾಜಾರೋಷಾಗಿ ಓಡುತ್ತಿದ್ದಾರೆ. ಅಲ್ಲದೆ, ಎಸ್.ಎಂ. ಕೃಷ್ಣಾ ನಗರದಲ್ಲಿ ಆಹಾರ ಸಿಗದೆ ಪ್ರಾಣಿಗಳ ಪರದಾಡುತ್ತಿರುವುದು ಕಂಡುಬಂದಿತು. ಶ್ವಾನಗಳು, ದನಕರುಗಳು ಆಹಾರಕ್ಕಾಗಿ ಚಡಪಡಿಸತೊಡಗಿವೆ.

    24 ಜನರ ಮಾದರಿ ಪರೀಕ್ಷೆಗೆ;ನಗರದ ರಂಗನವಾಡಿ ಗಲ್ಲಿ ನಿವಾಸಿ ಕರೊನಾ ಸೋಂಕಿತ ಮಹಿಳೆ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಈ ಮಹಿಳೆಗೆ ಸೋಂಕು ತಗುಲಿದ್ದು ಹೇಗೆ ಎಂಬ ಸಂಗತಿ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಮಹಿಳೆಯ ಜತೆ ಸಂಪರ್ಕದಲ್ಲಿದ್ದ 35 ಜನರ ವೈದ್ಯಕೀಯ ವರದಿ ಸಹ ನೆಗೆಟಿವ್ ಬಂದಿದೆ. ಇಷ್ಟಾದರೂ ಕರೊನಾ ಮಾರಿ ಮಹಿಳೆಯ ದೇಹ ಪ್ರವೇಶಿಸಿದ ಮೂಲ ಯಾವುದು ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಮಹಿಳೆಯ ವಾಸಿಸುತ್ತಿದ್ದ ರಂಗನವಾಡಿ ಗಲ್ಲಿ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು ನಾಲ್ಕು ಕುಟುಂಬದ ಜನರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿದೆ. ಈ ಕುರಿತು ಏ.8ಕ್ಕೆ 11 ಜನರು ಮತ್ತು ಏ. 9ಕ್ಕೆ 13 ಜನರು ಸೇರಿ 24 ಜನರ ಗಂಟಲ ಮಾದರಿಯನ್ನು ಜಿಲ್ಲಾಡಳಿತ ಪರೀಕ್ಷೆಗಾಗಿ ಕಳಿಸಿಕೊಟ್ಟಿದೆ. ಕರೊನಾ ಸೋಂಕಿತ ಮಹಿಳೆಯ ಸಾವು ಅವಳಿ ನಗರದ ಜನರ ನಿದ್ದೆಗೆಡಿಸಿದೆ. ಮಹಿಳೆಗೆ ಸೋಂಕು ಹೇಗೆ ತಗುಲಿತು ಎಂಬ ಸ್ಪಷ್ಟ ಮೂಲ ಸಿಗುವವರೆಗೂ ಅವಳಿ ನಗರದಲ್ಲಿ ದುಗುಡ ಮುಂದುವರಿಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts