More

    ನಾಳೆ ದಲಿತರ ಜಿಲ್ಲಾ ಜಾಗೃತಿ ಸಮಾವೇಶ 

    ದಾವಣಗೆರೆ: ದಲಿತ-ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ನಗರಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪದಲ್ಲಿ ಡಿ.28ರಂದು ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.
    ಅಂದು ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರಪಾಲಿಕೆ ಆವರಣದವರೆಗೆ ಮೆರವಣಿಗೆ ನಡೆಸಲಾಗುವುದು. ನಂತರ ಸಮಾವೇಶ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಬಿ.ದುಗ್ಗಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯನ್ನು ರಾಷ್ಟ್ರ ಮಟ್ಟದಲ್ಲಿ ರೂಪಿಸಿ ಬಜೆಟ್‌ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡಬೇಕು. ಜಾತಿ ಜನಗಣತಿ ನಡೆಸಲು ಕೇಂದ್ರ ಸರ್ಕಾರ ಸಾಂವಿಧಾನಿಕ ಕ್ರಮ ಕೈಗೊಳ್ಳಬೇಕು. ಹಿಂದುಳಿದ ವರ್ಗಗಳ ಮಹಿಳೆಯರಿಗೆ ಕಡ್ಡಾಯವಾಗಿ ರಾಜಕೀಯ ಮೀಸಲು ನೀಡಬೇಕು. ಭೂಹೀನ ಕೃಷಿ ಕಾರ್ಮಿಕರಿಗೆ ಭೂಮಿ ಮಂಜೂರು ಮಾಡುವುದು ಮಾತ್ರವಲ್ಲದೆ ಸ್ಥಳೀಯವಾಗಿ ಚಿಕ್ಕನಹಳ್ಳಿ ಸಂತ್ರಸ್ತರ ಸಮಸ್ಯೆ, ಅಂಬೇಡ್ಕರ್ ಭವನ ನಿರ್ಮಾಣ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
    ಸಮಾವೇಶವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸುವರು. ಅಂಬೇಡ್ಕರ್ ಭಾವಚಿತ್ರಕ್ಕೆ ಜಿ.ಬಿ. ವಿನಯಕುಮಾರ್ ಪುಷ್ಪಾರ್ಚನೆ ಮಾಡುವರು. ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮುಖ್ಯ ಭಾಷಣ ಮಾಡುವರು. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ಕೆ.ಎಸ್.ಬಸವಂತಪ್ಪ, ಸಂಘಟನೆಯ ರಾಜ್ಯ ಉಪಪ್ರಧಾನ ಸಂಚಾಲಕ ನಾಗಣ್ಣ ಬಡಿಗೇರ, ಮಹಿಳಾ ಸಂಚಾಲಕಿ ನಿರ್ಮಲಾ, ಮಣಿಪಾಲ್ ರಾಜಪ್ಪ, ಎಚ್.ಜಿ.ಉಮೇಶ್ ಇತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಬಿ.ಹನುಮಂತಪ್ಪ, ಬಸಾಪುರ ತಿಪ್ಪೇಶ್, ಬಸಪ್ಪ, ನಿಟುವಳ್ಳಿ ಗಣೇಶ್, ಲಿಂಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts