More

    ನಾಡಿನ ಮೇಲೆ ಅಭಿಮಾನ ಇರಲಿ – ಶಾಸಕ ಬಾಲಚಂದ್ರ ಜಾರಕಿಹೊಳಿ

    ಮೂಡಲಗಿ: ಕರ್ನಾಟಕ ರಾಜ್ಯೋತ್ಸವ ಆಚರಣೆಯೊಂದಿಗೆ ಕನ್ನಡ ನಾಡು, ನುಡಿ ಬಗ್ಗೆ ಪ್ರೀತಿ, ಅಭಿಮಾನ ಹಾಗೂ ಬದ್ಧತೆ ಇರಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಕನ್ನಡಪರ ಸಂಘಟನೆಗಳ ಆಶ್ರಯದೊಂದಿಗೆ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ ಮೆರವಣಿಗೆ ನಿಮಿತ್ತ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡದ ಹಿರಿಮೆಯು ವಿಶ್ವವ್ಯಾಪಿಯಾಗಿ ಬೆಳೆದಿದೆ ಎಂದರು.

    ಕಲೆ, ಸಾಹಿತ್ಯ, ವಿಜ್ಞಾನ, ಕೃಷಿ, ತಂತ್ರಜ್ಞಾನದಲ್ಲಿ ಕನ್ನಡ ನೆಲದ ಕೀರ್ತಿ ವಿಜೃಂಭಿಸಿದೆ. ಯುವ ಪೀಳಿಗೆಯು ತಾವು ಬೆಳೆಯುವುದರೊಂದಿಗೆ ಕನ್ನಡ ನಾಡು, ನುಡಿಯ ಬೆಳವಣಿಗೆಗೂ ಅರ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಬಾಲಚಂದ್ರ, ಪುನೀತ್ ಅಗಲಿಕೆಯಿಂದ ಇಡಿ ಭಾರತೀಯ ಚಲನಚಿತ್ರೋದ್ಯಮಕ್ಕೆ ಅಪಾರ ಹಾನಿಯಾಗಿದೆ. ರೈತರ ಹೆಮ್ಮೆಯ ಸಹಕಾರ ಸಂಸ್ಥೆಯಾದ ಕೆಎಂಎಫ್‌ನ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಸಂಸ್ಥೆಯು ಪ್ರಗತಿಯತ್ತ ಸಾಗಲು ಅವರು ಕಾರಣೀಕರ್ತರಾಗಿದ್ದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ ಎಂದು ಜಾರಕಿಹೊಳಿ ಹೇಳಿದರು. ಮೂಡಲಗಿ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ.ಸಂಗಮೇಶ ಗುಜಗೊಂಡ, ಕಸಾಪ ಮಾಜಿ ತಾಲೂಕಾಧ್ಯಕ್ಷ ಬಾಲಶೇಖರ ಬಂದಿ, ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ಪುರಸಭೆ ಮಾಜಿ ಉಪಾಧ್ಯಕ್ಷರಾದ ಆರ್.ಪಿ.ಸೋನವಾಲ್ಕರ, ಅಜೀಜ್ ಡಾಂಗೆ, ಹುಸೇನಸಾಬ ಶೇಖ್, ಮುಖಂಡರಾದ ಬಿ.ಬಿ.ಹಂದಿಗುಂದ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಅರಬಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ದೀಪಕ ಹರ್ದಿ, ತಾಲೂಕುಮಟ್ಟದ ವಿವಿಧ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

    ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಆರ್ ಕಾಲೇಜ್‌ನಿಂದ ಆರಂಭಗೊಂಡ ಕನ್ನಡ ನಾಡು-ನುಡಿ ಬಿಂಬಿಸುವ ರೂಪಕಗಳನ್ನೊಳಗೊಂಡ ಮೆರವಣಿಗೆಯು ವಿವಿಧ ವಾದ್ಯವೃಂದಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ನಂತರ ಕಲ್ಮೇಶ್ವರ ವೃತ್ತದಲ್ಲಿ ಕಲ್ಮೇಶ್ವರ ಪುತ್ಥಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡುವ ಮೂಲಕ ರಾಜ್ಯೋತ್ಸವ ಮೆರವಣಿಗೆಗೆ ತೆರೆಬಿತ್ತು.

    ಕನ್ನಡದಲ್ಲಿ ಮಾತನಾಡುವುದು ಮತ್ತು ವ್ಯವಹರಿಸುವ ಮೂಲಕ ನಮ್ಮ ಭಾಷೆ ಬೆಳೆಸಬೇಕು. ರಾಜ್ಯೋತ್ಸವ ಅಂಗವಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಯಶಸ್ವಿಗೊಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಕರ್ನಾಟಕ ಘೋಷಣೆ ಮಾಡಿರುವುದು ಅಪಾರ ಸಂತೋಷ ತಂದಿದೆ. ಕನ್ನಡ ನಾಡು, ನುಡಿ ಬೆಳವಣಿಗೆಯ ಎಲ್ಲ ಚಟುವಟಿಕೆಗಳಿಗೆ ನನ್ನಿಂದ ನಿರಂತರ ಸಹಾಯ, ಸಹಕಾರ ಇದ್ದೇ ಇರುತ್ತದೆ.
    | ಬಾಲಚಂದ್ರ ಜಾರಕಿಹೊಳಿ ಶಾಸಕರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts