More

    ನಮ್ಮೂರಿನಲ್ಲಿ ಕ್ವಾರಂಟೈನ್ ಕೇಂದ್ರ ಬೇಡ

    ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರ ಪ್ರಾರಂಭಿಸುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆಗಿಳಿದ ಘಟನೆ ಭಾನುವಾರ ಜರುಗಿತು. ಗ್ರಾಮದ ಹೂವಿನ ಶಿಗ್ಲಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ತಾಲೂಕಾಡಳಿತ ಮುಂದಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು ಈ ರಸ್ತೆ ಬಂದ್ ಮಾಡಿ ಆಶ್ರಮ ಶಾಲೆಯ ಮುಂದೆ ಮುಳ್ಳಿನ ಕಂಟಿಗಳನ್ನಿಟ್ಟು ವಿರೋಧ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಪಿ. ಬಳಿಗಾರ ಅವರು ಕ್ವಾರಂಟೈನ್ ಮಾಡುತ್ತಿರುವ ವಸತಿ ಶಾಲೆಗೆ ಹೊಂದಿಕೊಂಡು ಸುಮಾರು ನೂರಾರು ವಿದ್ಯಾರ್ಥಿಗಳು ಓದುವ ಹೈಸ್ಕೂಲ್ ಇದೆ. ಮುಂದಿನ ತಿಂಗಳು ಈ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಶಾಲೆ ಕೇಂದ್ರವಾಗಿದೆ. ಸುತ್ತಮುತ್ತಲೂ ನೂರಾರು ಮನೆಗಳಿವೆ. ಸುಮಾರು 18 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಹೊಂದಿಕೊಂಡಿರುವ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿರುವುದರಿಂದ ಗ್ರಾಮದ ಜನರು ಆತಂಕ್ಕೀಡಾಗಿದ್ದಾರೆ ಆದ್ದರಿಂದ ಇಲ್ಲಿ ಕ್ವಾರಂಟೈನ್ ಬೇಡವೇ ಬೇಡ. ಈ ಕುರಿತು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಮನವರಿಕೆ ಮಾಡಿ ಬೇರೆಡೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್​ಐ ಪಿ.ಎಂ. ಬಡಿಗೇರ ಗ್ರಾಮಸ್ಥರು ವಿರೋಧ ಮಾಡುವುದಿದ್ದರೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಮನವಿ ಮಾಡಿಕೊಳ್ಳಿ. ಹೀಗೆ, ರಸ್ತೆ ಬಂದ್ ಮಾಡುವುದು, ಮುಳ್ಳುಕಂಟಿ ಇಡುವುದು ಸರಿಯಾದ ಕ್ರಮವಲ್ಲ. ಯಾರೂ ಅಡ್ಡಿಪಡಿಸಬಾರದು ಎಂದು ಸೂಚಿಸಿದರು.

    ಈ ಕುರಿತು ತಹಸೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಅವರನ್ನು ಸಂರ್ಪಸಿದಾಗ, ಜಿಲ್ಲಾಡಳಿತದ ಸೂಚನೆಯಂತೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ. ಅಂತರ ರಾಜ್ಯ, ಜಿಲ್ಲೆಗೆ ಉದ್ಯೋಗ ಅರಸಿ ಹೋದ ನಮ್ಮವರೇ ಈಗ ವಾಪಸ್ ಬರುತ್ತಿದ್ದಾರೆ. ಎಲ್ಲರ ಆರೋಗ್ಯದ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಜನರ ಆರೋಗ್ಯದ ಕಾಳಜಿಯಿಂದಲೇ ಸರ್ಕಾರ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದು, ಅದನ್ನು ವಿರೋಧಿಸುವುದು ಕಾನೂನುಬಾಹಿರವಾಗುತ್ತದೆ ಎಂದು ತಿಳಿಹೇಳಿದರು. ನಂತರ ಗ್ರಾಮಸ್ಥರ ವಿರೋಧದ ನಡುವೆಯೇ ಮಹಾರಾಷ್ಟ್ರದಿಂದ ಬಂದ ಐವರನ್ನು ಈ ವಸತಿ ಶಾಲೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಯಿತು.

    ಈ ಸಂದರ್ಭದಲ್ಲಿ ಅಪ್ಪಣ್ಣ ನೂಲ್ವಿ, ರಾಜು ಓಲೇಕಾರ, ವೀರಣ್ಣ ಪವಾಡದ, ಮಂಜುನಾಥ ಶಂಬೋಜಿ., ಮಾಂತೇಶ ಬಡಿಗೇರ, ಜಹೀರಸಾಬ ಮತ್ತೂರ, ಬಸಣ್ಣ ಗೋದಿ, ಎನ್.ವಿ. ಕೊಳ್ಳಿ, ಸಿ.ಎಂ. ರಾಗಿ, ಬಿ.ಕೆ. ಕಾಳಪ್ಪನವರ, ಶಂಕ್ರಣ್ಣ ಅಣ್ಣಿಗೇರಿ , ವಿಜಯ ಪಾಟೀಲ, ಜಮೀರ ಅಗಡಿ, ಸಂತೋಷ ಕಲಾಲ, ಖಾಸಿಂ ಕೆರೂರ, ಈರಣ್ಣ ಹುಲಗೂರ, ಕುಬೇರಪ್ಪ ಅಣ್ಣಿಗೇರಿ, ಅರುಣ ಕೆರೂರ, ಅಕ್ಕಮ್ಮ ಕಲಾಲ, ಲಲಿತಾ ಮಡಿವಾಳರ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts