More

    ನಂಗಲಿ ಕೆರೆಯಲ್ಲಿ ನೀರು ಪೋಲು: ಮೂರು ತಿಂಗಳಿಂದ ಕಣ್ಮುಚ್ಚಿ ಕುಳಿತಿರುವ ತಾಲೂಕು ಆಡಳಿತ

    ಮುಳಬಾಗಿಲು: ತಾಲೂಕಿನ ಅತಿದೊಡ್ಡ ಕೆರೆ ಎಂದು ಪ್ರಸಿದ್ಧ ಪಡೆದಿರುವ ನಂಗಲಿ ಕೆರೆ ಕೋಡಿಯ ಗೋಡೆಯಲ್ಲಿ 3 ತಿಂಗಳಿಂದ ನೀರು ಪೋಲಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಪ್ರಸ್ತುತ ಪೋಲಾಗುವ ಪ್ರಮಾಣ ಹೆಚ್ಚಾಗಿದೆ.

    ವಿವಿಧ ಇಲಾಖೆಯ ಮೂಲಕ ಜಲ ಸ್ವಾವಲಂಬನೆ, ಜಲ ಸಂರಕ್ಷಣೆ, ಜಲ ಮೂಲಗಳ ರಕ್ಷಣೆ ಬಗ್ಗೆ ಅಭಿಯಾನಗಳು, ಜಾಗೃತಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದರೂ, ಈ ರೀತಿ ನೀರು ಸೋರಿಕೆಯಾಗಿ ಹೊರಹೋಗುತ್ತಿದ್ದು ಜಾಗೃತಿ ಕಾರ್ಯಕ್ರಮಗಳ ವೈಫಲಕ್ಕೆ ಕೈಗನ್ನಡಿಯಾಗಿದೆ.

    ಸರ್ವೇ ನಂ. 488ರಲ್ಲಿ ನಂಗಲಿ ಕೆರೆ 385.15 ಎಕರೆ ವಿಸ್ತೀರ್ಣದಲ್ಲಿದ್ದು, ಕೆರೆ ಅಭಿವೃದ್ಧಿ ಮಾಡುವಲ್ಲಿಯೂ ವಿಫಲವಾಗಿದೆ. ಕಳೆದ 15-20 ವರ್ಷಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆಯ ಸ್ವರೂಪವನ್ನೇ ಕಳೆದುಕೊಂಡಿತ್ತು. ಮಳೆಯಿಲ್ಲದೆ ಕೆರೆ ತುಂಬುವುದೇ ಅಪರೂಪವಾಗಿದ್ದು, ಮರಳು ಮತ್ತು ಮಣ್ಣು ಗಣಿಗಾರಿಕೆಗೆ ಹೇಳಿ ಮಾಡಿಸಿದ ತಾಣವಾಗಿತ್ತು.

    ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಕೆರೆ ತುಂಬಿ ಕೋಡಿ ಹೋಗಿದೆ. ರೈತರು ಬೆಳೆ ಮಾಡದಂತೆ ತಡೆಯೊಡ್ಡಿ ಜಿಲ್ಲಾಡಳಿತ ಕೆರೆಗಳ ತೂಬನ್ನು ಮುಚ್ಚಿ ಅಂತರ್ಜಲ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ ನೀರು ಈ ರೀತಿ ಪೋಲಾಗುವುದನ್ನು ತಡೆಯಲು ಮುಂದಾಗದಿರುವುದು ಸರ್ಕಾರದ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಈಗಲಾದರೂ ಕೆರೆಯಲ್ಲಿರುವ ನೀರನ್ನು ರಕ್ಷಿಸಿಕೊಂಡರೆ ನಂಗಲಿ ಸುತ್ತಮುತ್ತಲ 60-70 ಹಳ್ಳಿಗಳ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗುತ್ತದೆ. ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಗಮನಸೆಳೆದು ಕೆರೆ ನೀರು ಪೋಲಾಗುವುದನ್ನು ತಡೆಯಲು ಮುಂದಾಗಬೇಕಿದೆ.

    ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೋಡಿ ಗೋಡೆಯಲ್ಲಿ ನೀರು ಪೋಲಾಗುವುದು ಸೇರಿ ಕೆರೆಕಟ್ಟೆ, ಸಣ್ಣಪುಟ್ಟ ರಿಪೇರಿ ಬಗ್ಗೆ ತುರ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
    ಆರ್.ಶೋಭಿತಾ ತಹಸೀಲ್ದಾರ್ ಮುಳಬಾಗಿಲು

    ನಂಗಲಿ ಕೆರೆ ಕೋಡಿ ಗೋಡೆ 12 ಅಡಿಗೂ ಅಧಿಕ ಆಳವಿದ್ದು ಮರಳು ತುಂಬಿದ ಸಿಮೆಂಟ್ ಚೀಲಗಳು ಹಾಕಲು ಸಾಧ್ಯವಿಲ್ಲ. 10-15ಸಾವಿರ ವೆಚ್ಚದಲ್ಲಿ ಕಾಮಗಾರಿ ಮಾಡಲು ಆಗುವುದಿಲ್ಲ. ಸೂಪರಿಡೆಂಟ್ ಇಂಜಿನಿಯರ್‌ಗೆ ಮಾಹಿತಿ ನೀಡಿ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.
    ಗುರುಶಂಕರ್ ಎಇಇ ಸಣ್ಣ ನೀರಾವರಿ ಇಲಾಖೆ ಕೋಲಾರ

    ಕೆರೆ ಕೋಡಿ ಬಳಿ ಮಣ್ಣು ತುಂಬಿಸಿ ಕೋಡಿಯ ಹಿಂಭಾಗಕ್ಕೂ ಪೂರ್ಣ ಪ್ರಮಾಣದಲ್ಲಿ ಮಣ್ಣು ತುಂಬಿಸಿ ನಂತರ ಮರಳು ತುಂಬಿದ ಸಿಮೆಂಟ್ ಮೂಟೆಗಳು ಹಾಕಬೇಕಾಗಿದೆ. ಜನರು ಮರಳು ತುಂಬಿದ ಸಿಮೆಂಟ್ ಮೂಟೆ ಹಾಕಲು ಸಾಧ್ಯವಿಲ್ಲ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.
    ಎನ್.ಆನಂದ್‌ಕುಮಾರ್ ಸಹಾಯಕ ಇಂಜಿನಿಯರ್ ಎಂಐ ಇಲಾಖೆ ಕೋಲಾರ

    ನಂಗಲಿ ಕೆರೆ ಕೋಡಿ ಹೋದಾಗಿನಿಂದಲೂ ಶಾಸಕರೂ ಸೇರಿ ತಾಲೂಕು ಆಡಳಿತಕ್ಕೆ ಕೆರೆ ಕಟ್ಟೆ ಕೋಡಿ ರಿಪೇರಿ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಗೆ ಕರೊನಾ ನಿಯಮ ಅಡ್ಡಿಯಾಗಿದೆ.
    ಕಿಶೋರ್ ನಂಗಲಿ ಗ್ರಾಮಸ್ಥ ರೈತ ಸಂಘದ ಯುವ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts