More

    ದೌರ್ಜನ್ಯ ತಡೆಗೆ ನ್ಯಾಯಾಂಗ ಮಧ್ಯ ಪ್ರವೇಶಿಸಲಿ

    ಚಿತ್ರದುರ್ಗ: ದಲಿತರು, ಶೋಷಿತರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಇದು ಉತ್ತರ ಭಾರತದಲ್ಲೇ ಹೆಚ್ಚು. ಆದ್ದರಿಂದ ನ್ಯಾಯಾಂಗ ಮಧ್ಯ ಪ್ರವೇಶಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ನ್ಯಾಯ ನೀಡಬೇಕು ಎಂದು ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
    ಐಎಂಎ ಹಾಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾನಾಯಕ ದಲಿತ ಸೇನೆ ರಾಜ್ಯ ಸಮಿತಿ ಸಂಘಟನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಬೇಕು. ಮೇಲು-ಕೀಳೆಂಬ ತಾರತಮ್ಯ ನಿರ್ಮೂಲನೆ ಆಗದ ಹೊರತು ದಲಿತರ ಬದುಕು ಹಸನಾಗದು. ನೊಂದವರು, ಅಸಮಾನತೆಗೆ ಒಳಗಾದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸೇನೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಡಾ.ಬಿ.ಆರ್.ಅಂಬೇಡ್ಕರ್ ಯಾವ ಜಾತಿಗೂ ಸೀಮಿತವಲ್ಲ. ಎಸ್ಸಿ, ಎಸ್ಟಿಗಳಿಗೆ ಮಾತ್ರ ಮೀಸಲು ಸೌಲಭ್ಯವೆಂಬ ತಪ್ಪು ಕಲ್ಪನೆ ಕೆಲ ವರ್ಗದ ಜನರು ಮೂಡಿಸುತ್ತಿದ್ದಾರೆ. ಇದರ ವಿರುದ್ಧ ಸಂಘಟನೆ ಎಚ್ಚೆತ್ತುಕೊಂಡು ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
    ಕರ್ನಾಟಕ ಜನಶಕ್ತಿ ಉಪಾಧ್ಯಕ್ಷೆ ಬೆಂಗಳೂರಿನ ಗೌರಿ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇತ್ತೀಚೆಗೆ ಅತ್ಯಾಚಾರವೆಸಗಿ, ಭೀಕರವಾಗಿ ಹತ್ಯೆ ಮಾಡುವ ಅಮಾನವೀಯ ದುಷ್ಕೃತ್ಯಗಳು ನಡೆಯುತ್ತಿವೆ. ಇವು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು.
    ಭಾರತಕ್ಕೆ ಚಿನ್ನ, ಕಂಚಿನ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೂ ನಿರಂತರ ಅತ್ಯಾಚಾರ ಎಸಗಿರುವುದು ಈ ಮಣ್ಣಿಗೆ ಮಾಡಿದ ಅಪಮಾನ. ಅಲ್ಲದೆ, ಅಪ್ರಾಪ್ತರ ಮೇಲೂ ಇದು ಮುಂದುವರಿದಿದೆ. ಸಮಾಜ ಎತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ, ಚಿಂತಕ ಹುಲಿಕುಂಟೆ ಮೂರ್ತಿ, ಹೈಕೋರ್ಟ್ ವಕೀಲ ಹನುಮೇಶ್ ಗುಂಡೂರು, ಶಂಕರ್, ಕೋಡಿಹಳ್ಳಿ ಸಂತೋಷ್, ಗುರುಸ್ವಾಮಿ, ಲೈಂಗಿಕ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷೆ ಜಿ.ವೀಣಾ, ಸೇನೆ ಪದಾಧಿಕಾರಿಗಳಾದ ಹೊಳೆಯಪ್ಪ ಕೆ.ಸಾಕ್ಯ, ಜಿ.ಟಿ.ರವಿಕುಮಾರ್, ಟಿ.ಅಶೋಕ್, ರವಿಕುಮಾರ್ ಘಾಟ್ ಇತರರಿದ್ದರು.

    *ಕೋಟ್
    ದಲಿತರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಢರಾಗಬೇಕು. ಅದಕ್ಕಾಗಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸರ್ಕಾರದಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಸೇನೆ ಕಾರ್ಯಪ್ರವೃತ್ತವಾಗಬೇಕು.
    ಜಿ.ಟಿ.ಸುರೇಶ್‌ಕುಮಾರ್ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts