More

    ದೋಷರಹಿತ ಮತದಾರರ ಪಟ್ಟಿ ಸಿದ್ಧವಾಗಲಿ : ಮುದ್ರಾಂಕ ಇಲಾಖೆ ಆಯುಕ್ತೆ ಮಮತಾ ಸೂಚನೆ

    ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ


    ಮತದಾನದ ಹಕ್ಕಿನಿಂದ ಯಾವುದೇ ನಾಗರಿಕ ವಂಚಿತನಾಗದಂತೆ ನೋಡಿಕೊಳ್ಳುವುದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಉದ್ದೇಶವಾಗಿದೆ. ಆದ್ದರಿಂದ ಅಧಿಕಾರಿಗಳು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ನೋಂದಣಿ ಇಲಾಖೆ ಮಹಾ ನಿರೀಕ್ಷಕಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಡಾ.ಬಿ.ಆರ್.ಮಮತಾ ತಿಳಿಸಿದರು.
    ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಭಾಗವಾಗಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಮತದಾರರ ಸೇರ್ಪಡೆ, ತಿದ್ದಪಡಿ, ಮತದಾರರ ಪಟ್ಟಿಗೆ ಆಧಾರ್ ಜೋಡಣೆ, ಹೆಸರು ತೆಗೆದು ಹಾಕಲು ಅನುಸರಿಸುತ್ತಿರುವ ಕ್ರಮಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಮತದಾರರು ಪಟ್ಟಿಯಲ್ಲಿ ಇರುವುದನ್ನು ನಿರಂತರವಾಗಿ ಮರು ಪರಿಶೀಲನೆ ಮಾಡುತ್ತಿರಬೇಕು ಎಂದು ಸೂಚಿಸಿದರು.
    ಅಧಿಕೃತ ದಾಖಲೆ ಪಡೆಯಬೇಕು: ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 8,695 ಅಂಗವಿಕಲ ಮತದಾರರ ನೋಂದಣಿ ಮಾಡಿರುವುದು ಉತ್ತಮ ಪ್ರಗತಿಯಾಗಿದೆ. ಅಂಗವಿಕಲರ ಹೆಸರು ಸೇರ್ಪಡೆ, ತಿದ್ದುಪಡಿ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಯವರ ದೃಢೀಕರಣವನ್ನು ಪರಿಶೀಲಿಸಿದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಹೆಸರನ್ನು ಸೇರಿಸುವಾಗಲೂ ಅಧಿಕೃತ ದಾಖಲೆ ಪಡೆಯಬೇಕು ಎಂದು ಮಮತಾ ಸೂಚಿಸಿದರು.

    ಸಹಿ ಪಡೆಯಬೇಕು: ಮತದಾರರ ಪಟ್ಟಿಯಿಂದ ಮೃತರ ಹೆಸರು ಕೈಬಿಡುವಾಗ ಮರಣ ಪ್ರಮಾಣಪತ್ರ ಇಲ್ಲದಿದ್ದಲ್ಲಿ ಸಂಬಂಧಿಕರ ಸಹಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು. ಜಿಲ್ಲೆಯಲ್ಲಿ ಇಲ್ಲಿವರೆಗೆ ತಯಾರಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 4,23,365 ಪುರುಷ ಮತದಾರರು, 4,27,215 ಮಹಿಳಾ ಮತದಾರರು ಹಾಗೂ 120 ಇತರೆ ಮತದಾರರು ಸೇರಿ 8,50,700 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

    ಸಹಾಯವಾಣಿ ಪರಿಶೀಲನೆ: 1959 ಸಹಾಯವಾಣಿ ಕೇಂದ್ರದ ಕಾರ್ಯನಿರ್ವಹಣೆ ಪರಿಶೀಲಿಸಿದ ಆಯುಕ್ತೆ, ದಿನವೊಂದಕ್ಕೆ ಸರಾಸರಿ 5 ದೂರುಗಳು ಬಂದಿದ್ದು, ತಕ್ಷಣ ಸಮಸ್ಯೆಗೆ ಸ್ಪಂದಿಸಿರುವುದು ತೃಪ್ತಿಕರವಾಗಿದೆ ಎಂದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜನ್ಮ ದಿನಾಂಕ ದಾಖಲೆಗಳನ್ನು ಪಡೆಯುವಾಗ ಸಮರ್ಪಕವಾಗಿ ಪರಿಶೀಲಿಸಬೇಕು. ಜಿಲ್ಲೆಯ ಗಣ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗದಂತೆ ಎಚ್ಚರವಹಿಸಬೇಕು. 1950 ಸಹಾಯವಾಣಿ ಸಂಖ್ಯೆಯನ್ನು ಹೆಚ್ಚು ವ್ಯಾಪಕ ಪ್ರಚಾರ ಮಾಡಬೇಕು. 2023 ರ ಜ. 5 ರಂದು ಪ್ರಕಟಿಸಲಾಗುವ ಜಿಲ್ಲೆಯ ಅಂತಿಮ ಕರಡು ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಇರಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts