More

    ದೇವನಹಳ್ಳಿಯಲ್ಲಿ ಸಿಬ್ಬಂದಿ ತರಬೇತಿ ಕಾರ್ಯಾಗಾರ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಚುನಾವಣೆಗೆ ದಿನಗಣಗೆ ಆರಂಭವಾಗಿದೆ, ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಮತದಾನ ಮುಗಿದ ಬಳಿಕ ಮೇ 13ರಂದು ನಡೆಯಲಿರುವ ಮತ ಎಣಿಕೆ ಕರ್ತವ್ಯವನ್ನೂ ಸಿಬ್ಬಂದಿ ಜವಾಬ್ದಾರಿಯಿಂದ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಸೂಚಿಸಿದರು.
    ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿದ್ದ ಸಿಬ್ಬಂದಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
    ಚುನಾವಣೆ ಸಂಬಂಧ ಮೇ 10 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ದೇವನಹಳ್ಳಿಯ ಆಕಾಶ್‌ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ, ಮೇ 13 ರಂದು ನಡೆಯಲಿರುವ ಮತ ಎಣಿಕೆ ಕಾರ್ಯವನ್ನು ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಿಯೋಜಿಸಿದ ಸ್ಥಳದಲ್ಲಿ ನಿಗದಿತ ಅವಧಿಗೆ ಸರಿಯಾಗಿ ಸಿಬ್ಬಂದಿ ಹಾಜರಿದ್ದು, ಎಚ್ಚರಿಕೆಯಿಂದ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಸ್ಥಳದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
    ಒತ್ತಡ ಬೇಡ: ಅನಗತ್ಯವಾಗಿ ಒತ್ತಡಕ್ಕೊಳಗಾದರೆ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತದೆ, ಆದ್ದರಿಂದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು, ಒತ್ತಡಕ್ಕೊಳಗಾಗದೆ ಮಾನಸಿಕವಾಗಿ ಸಿದ್ಧಗೊಳ್ಳಬೇಕು ಎಂದು ಡಿಸಿ ತಿಳಿಸಿದರು.
    ಮತ ಎಣಿಕೆ ಹಿಂದಿನ ದಿನವೇ ಎಲ್ಲ ಸಿದ್ಧತೆ ಪೂರ್ಣಗೊಂಡಿರಬೇಕು, ಮಾನಸಿಕವಾಗಿ ಸಿದ್ದಗೊಂಡು ಕರ್ತವ್ಯಕ್ಕೆ ಹಾಜರಾಗಬೇಕು, ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು, ಹಿರಿಯ ಅಧಿಕಾರಿಗಳು ಸೂಚನೆ ಮಾರ್ಗದರ್ಶನದಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದರು.

    ಚುನಾವಣೆ ಕರ್ತವ್ಯಕ್ಕೆ ಮೆಚ್ಚುಗೆ: ಚುನಾವಣೆ ೋಷಣೆಯಾದ ದಿನದಿಂದ ಇದುವರೆಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಮತದಾನವನ್ನು ಹಬ್ಬದಂತೆ ಆಚರಿಸುವ ಸಂಕಲ್ಪದೊಂದಿಗೆ ಮುಂದಡಿ ಇಡಲಾಗಿತ್ತು. ಎಲ್ಲ ಸಿಬ್ಬಂದಿ ಸಹಕಾರದಿಂದ ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು.
    ಈ ಬಾರಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲದರಲ್ಲೂ ಸಿಬ್ಬಂದಿ ಪ್ರಾಮಾಣಿವಾಗಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ ಎಂದು ಹೇಳಿದರು.
    ಚುನಾವಣಾಧಿಕಾರಿ ಮಾರ್ಗದರ್ಶನದಲ್ಲಿ ಕರ್ತವ್ಯ: ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಆರ್.ಲತಾ ಮಾರ್ಗದರ್ಶನ ಹಾಗೂ ಸೂಚನೆಯಂತೆ ಇದುವರೆಗೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಚುನಾವಣಾ ಪ್ರಕ್ರಿಯೆ ಉತ್ತಮವಾಗಿ ನಡೆದುಕೊಂಡು ಬಂದಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದರು.
    ಚುನಾವಣಾ ಪ್ರಕ್ರಿಯೆಲ್ಲಿ ಹೇಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೀರೋ ಅದೇ ರೀತಿ ಮತ ಎಣಿಕೆ ದಿನದಂದು ಸಿಬ್ಬಂದಿ ಹೆಚ್ಚು ನಿಗಾವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ತಹಸೀಲ್ದಾರ್‌ಗಳು, ಮೈಕ್ರೊ ಅಬ್ಸರ್ವರ್‌ಗಳು, ಮತ ಎಣಿಕೆ ನಿಯೋಜಿತ ಸೂಪರ್‌ವೈಸರ್‌ಗಳು, ಸಹಾಯಕ ಸೂಪರ್‌ವೈಸರ್‌ಗಳು, ಮತ ಎಣಿಕೆ ಸಿಬ್ಬಂದಿ ಎಲ್ಲರೂ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮತ ಎಣಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts