More

    ದೃಢ ನಿರ್ಧಾರ, ಧೈರ್ಯ ಯಶಸ್ಸಿಗೆ ಮೆಟ್ಟಿಲು

    ಚಿತ್ರದುರ್ಗ: ನಿಗದಿತ ಗುರಿ ಸಾಧಿಸಲು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ದೃಢ ನಿರ್ಧಾರ, ಧೈರ್ಯ ಮೆಟ್ಟಿಲುಗಳಾಗಿವೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಸಲಹೆ ನೀಡಿದರು.

    ಹೊರವಲಯದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಚಿತ್ರದುರ್ಗ ಜಿಲ್ಲಾ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

    ಜೀವನದಲ್ಲಿ ಯಶಸ್ಸೆಂಬುದು ಅವಕಾಶವಲ್ಲ, ಅದೊಂದು ಆಯ್ಕೆ. ಯಾವುದೇ ಕೆಲಸ ಕೈಗೊಂಡರೂ ಆತಂಕ, ಹಿಂಜರಿಕೆ ಪ್ರವೃತ್ತಿ ಇರಬಾರದು. ಗಮನ ಬೇರೆಡೆ ಹರಿಸದೇ ಪೂರ್ಣಗೊಳಿಸುವತ್ತ ದೃಷ್ಟಿ ಇರಬೇಕು. ಆತ್ಮವಿಶ್ವಾಸ, ನಂಬಿಕೆಯನ್ನು ಕೂಡ ಕಳೆದುಕೊಳ್ಳಬಾರದು. ಮುನ್ನುಗ್ಗುವ ಪ್ರವೃತ್ತಿ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ತಂದುಕೊಡಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ತಂತ್ರಜ್ಞಾನ ಹೆಚ್ಚಾದಂತೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ. ಆದರೆ, ಮನರಂಜನೆಗೂ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಮಕ್ಕಳು ಮತ್ತು ಯುವಸಮೂಹಕ್ಕೆ ದೊಡ್ಡ ಶತ್ರುವಾಗಿದ್ದು, ಇದರಿಂದ ಯೋಚಿಸುವ ಸೃಜನಶೀಲತೆ ಕೂಡ ಕ್ಷೀಣಿಸುತ್ತಿದೆ. ಅದಿಲ್ಲದೆ, ಬದುಕಿಲ್ಲವೆಂದು ನಾವುಗಳೇ ಅಡ್ಡಗೋಡೆ ನಿರ್ಮಿಸಿಕೊಂಡಿದ್ದೇವೆ ಎಂದು ಬೇಸರಿಸಿದರು.

    ಶ್ರಮ ಪಟ್ಟು ಮುಂದುವರೆಯುವ ಪ್ರವೃತ್ತಿ ಮಕ್ಕಳಲ್ಲಿ ಮೂಡಿಸಬೇಕು. ರಾಷ್ಟ್ರ ಪ್ರೇಮ ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ನಿರಂತರವಾಗಿ ರಾಷ್ಟ್ರಭಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ನಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಉತ್ಸಾಹ, ಪ್ರೇರಣೆ, ಕೌಶಲ, ಸಂಯಮ, ಸಾಮರ್ಥ್ಯ ಗಳಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ವೈಯಕ್ತಿಯವಾಗಿ ಸುಧಾರಣೆ ಹೊಂದಲು ಸಹಕಾರಿಯಾಗಲಿದೆ. ಸಮವಸ ನಮ್ಮನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡುತ್ತದೆ ಎಂದರು.

    ರಾಜ್ಯಾದ್ಯಂತ 4 ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್‌, ರೇಂಜರ್ಸ್‌, ಕಪ್ಸ್, ಬುಲ್‌ಬುಲ್‌ಗಳಿದ್ದಾರೆ. ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಜಯಗಳಿಸಿ, ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದೀರಿ. ತೀರ್ಪು ಏನೇ ಬರಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಹೇಳಿದರು.

    ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1,200ಕ್ಕೂ ಹೆಚ್ಚು ಸ್ಪರ್ಧಾಳುಗಳು, 200ಕ್ಕೂ ಹೆಚ್ಚು ಶಿಕ್ಷಕರು, ಪೋಷಕರು ಸೇರಿ 1,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

    ಮುಖಂಡ ಕೆ.ಸಿ.ನಾಗರಾಜ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾರ್ಯದರ್ಶಿ ರಂಗಪ್ಪಗೌಡ್ರು, ಆಯುಕ್ತೆ ಗೀತಾ ನಟರಾಜ್, ಮುಕ್ತ ಕಾಗ್ಲೆ, ಜಿಲ್ಲಾ ಮುಖ್ಯ ಆಯುಕ್ತ ಕೆ.ರವಿಶಂಕರ್‌ರೆಡ್ಡಿ, ಜಿಲ್ಲಾ ಆಯುಕ್ತ ನಾಗಭೂಷಣ, ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಪದಾಧಿಕಾರಿಗಳಾದ ಜಿ.ಎಸ್.ಉಜ್ಜನಪ್ಪ, ಸವಿತಾ ಶಿವಕುಮಾರ್, ವಿ.ಎಲ್.ಪ್ರಶಾಂತ್, ಪರಮೇಶ್, ಸುಜಯ ಶಿವಪ್ರಕಾಶ್, ಹೇಮಂತಿನಿ ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts