More

    ದುರ್ನಾತ ಬೀರುತ್ತಿದೆ ಪಪಂ ಕಚೇರಿ

    ನರೇಗಲ್ಲ: ಪಟ್ಟಣದ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪಟ್ಟಣ ಪಂಚಾಯಿತಿ ಕಚೇರಿಯ ಸುತ್ತಲಿನ ವಾತಾವರಣ ಸಂಪೂರ್ಣ ಅನೈರ್ಮಲ್ಯದಿಂದ ಕೂಡಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ ಪ್ರಶ್ನಿಸುವಂತಿದೆ.

    ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಕೆಟ್ಟು ನಿಂತ ವಾಹನಗಳು, ಗುಜರಿಗೆ ಸೇರಬೇಕಾದ ವಸ್ತುಗಳು ತುಂಬಿ ತುಳುಕುತ್ತಿವೆ. ಪಕ್ಕದಲ್ಲಿಯೇ ಇರುವ ಗ್ರಂಥಾಲಯ, ನೆಮ್ಮದಿ ಕೇಂದ್ರ, ಗಾಂಧಿ ಭವನದ ಆವರಣವು ಮಳೆ ನೀರು ನಿಂತು ಕೆರೆಯಂತಾಗಿದೆ. ಹೀಗಿದ್ದರೂ ಪ.ಪಂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ಇರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

    ಸಾರ್ವಜನಿಕ ಗ್ರಂಥಾಲಯ, ಗಾಂಧಿ ಭವನ, ಹಳೆಯ ಉಪ ತಹಸೀಲ್ದಾರ್ ಕಚೇರಿ ಇರುವ ಪಪಂ ಕಚೇರಿ ಆವರಣದಲ್ಲಿ ಮಳೆ ಬಂದರೆ ಸಾಕು ನೀರು ಸಂಗ್ರಹವಾಗಿ ಕೆರೆಯಂತಾಗುತ್ತದೆ. ಇದನ್ನು ತಪ್ಪಿಸಲು ಪ.ಪಂ. ವತಿಯಿಂದ ಕಳೆದ ಕೆಲ ತಿಂಗಳ ಹಿಂದೆ ಸಾವಿರಾರು ರೂ. ಖರ್ಚು ಮಾಡಿ ಗರಸು ಮಣ್ಣು ಹಾಕಲಾಗಿತ್ತು. ಆವರಣದಲ್ಲಿನ ಮಳೆ ನೀರನ್ನು ಪ.ಪಂ. ಬಾವಿಗೆ ಸೇರುವಂತೆ ಮಾಡಲು ಪೈಪ್ ಹಾಕಲಾಗಿತ್ತು. ಆದರೂ ಮಳೆ ಬಂದರೆ ನೀರು ಸಂಗ್ರವಾಗುವುದು ತಪ್ಪಿಲ್ಲ. ನೀರು ಸಂಗ್ರಹವಾಗಿ ಸುತ್ತಲಿನ ವಾತಾವರಣ ಗಬ್ಬು ನಾರುತ್ತದೆ. ಸೊಳ್ಳೆಗಳ ಉತ್ಪತ್ತಿಗೆ ಸಹಕಾರಿಯಾಗುತ್ತಿದೆ. ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರಿಗೆ ರಸ್ತೆ ಇಲ್ಲದಂತಾಗಿ ಕೆಸರಿನಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಣ ಮುಂದೆ ಇದ್ದರೂ ಅದರತ್ತ ಗಮನಹರಿಸದ ಪ.ಪಂ ಅಧಿಕಾರಿಗಳ ನಿರ್ಲಕ್ಷ್ಯ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಶೌಚಗೃಹ ಇಲ್ಲ: ಪ.ಪಂ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಆವರಣದಲ್ಲಿ ಒಂದು ಸುಸಜ್ಜಿತ ಶೌಚಗೃಹವಿಲ್ಲ. ಇರುವ ಹಳೆಯ ಶೌಚಗೃಹ ಗಬ್ಬು ನಾರುತ್ತಿದ್ದು, ಕಸ, ಕಡ್ಡಿ ತುಂಬಿಕೊಂಡಿದೆ. ಅಲ್ಲಿಗೆ ಹೋಗಿ ಬರಲು ಸಾಧ್ಯವಾಗದಂತಹ ಸ್ಥಿತಿ ಇದೆ. ಲಕ್ಷಾಂತರ ರೂ. ಖರ್ಚು ಮಾಡಿ ಪ.ಪಂ. ಆವರಣದಲ್ಲಿ ನಿರ್ವಣವಾಗಿರುವ ಶೌಚಗೃಹ ಉದ್ಘಾಟನೆಯಾಗದೇ ಪಾಳುಬಿದ್ದಿದೆ. ಪ.ಪಂ. ಕಚೇರಿಯಲ್ಲಿಯೇ ಇಂತಹ ಪರಿಸ್ಥಿತಿ ಇದೆ ಎಂದಾದರೆ ಪಟ್ಟಣ ಹಾಗೂ ಮಜರೆ ಗ್ರಾಮಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುತ್ತಾರೆ ಸ್ಥಳೀಯ ನಾಗರಿಕರು.

    ಪ.ಪಂ. ಕಚೇರಿ ಆವರಣದ ಪಕ್ಕದಲ್ಲಿರುವ ಗಾಂಧಿ ಭವನ, ಹಳೆಯ ಉಪ ತಹಸೀಲ್ದಾರ್ ಕಚೇರಿ, ಸಾರ್ವಜನಿಕ ಗ್ರಂಥಾಲಯದ ಆವರಣವು ಸಂಜೆಯಾಗುತ್ತಿದ್ದಂತೆ ಸಾರ್ವಜನಿಕ ಬಯಲು ಶೌಚಗೃಹವಾಗಿ ಮಾರ್ಪಡುತ್ತದೆ. ಹೀಗಾಗಿ, ಹಂದಿಗಳ ಆಶ್ರಯ ತಾಣವಾಗಿದ್ದು, ಇಲ್ಲಿನ ಪರಿಸರ ದುರ್ನಾತ ಬೀರುತ್ತಿದೆ.

    ಪ.ಪಂ. ಆವರಣದಲ್ಲಿನ ಕೆಟ್ಟು ನಿಂತ ವಾಹನ ಸೇರಿ ಗುಜರಿ ಸಾಮಾನುಗಳನ್ನು ಬಹಿರಂಗ ಹರಾಜು ಮಾಡಲು ಅನುಮತಿಗೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ವಾಹನಗಳ ಲಿಲಾವು ಮಾಡಲು ಆರ್​ಟಿಒ ಅವರಿಂದ ಪರವಾನಗಿ ಪಡೆಯಲಾಗುವುದು. ಆದಷ್ಟು ಬೇಗ ಆವರಣದಲ್ಲಿನ ಹಳೆಯ ವಸ್ತುಗಳು ಸೇರಿ ಎಲ್ಲ ಗುಜರಿ ಸಾಮಾನುಗಳನ್ನು ಲಿಲಾವು ಮಾಡಲಾಗುವುದು. ಪ.ಪಂ. ಆವರಣ ಹಾಗೂ ಸುತ್ತಲಿನ ಆವರಣಗಳನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ತಿಳಿಸಲಾಗುತ್ತದೆ.

    | ಎಂ.ಎ. ನೂರೂಲ್ಲಾಖಾನ್

    ಪ್ರಭಾರ ಮುಖ್ಯಾಧಿಕಾರಿ ಪ.ಪಂ ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts